ತಿಪಟೂರು ಸತ್ಯಗಣಪತಿಗೆ ಭಕ್ತಿ ಪೂರ್ವಕ ವಿದಾಯ

| Published : Dec 10 2024, 12:32 AM IST

ಸಾರಾಂಶ

ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಇತಿಹಾಸ ಪ್ರಸಿದ್ದ ಶ್ರೀಸತ್ಯಗಣಪತಿ ಸ್ವಾಮಿಯವರ 95ನೇ ವರ್ಷದ ವಿಸರ್ಜನಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಇತಿಹಾಸ ಪ್ರಸಿದ್ದ ಶ್ರೀಸತ್ಯಗಣಪತಿ ಸ್ವಾಮಿಯವರ 95ನೇ ವರ್ಷದ ವಿಸರ್ಜನಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಭಾದ್ರಪದ ಚೌತಿಯಂದು ಪ್ರತಿಷ್ಠಾಪನೆ ಮಾಡಿದ್ದ ತಿಪಟೂರು ಸತ್ಯಗಣಪನಿಗೆ ಕಳೆದ ಮೂರು ತಿಂಗಳಿನಿಂದಲೂ ನಿತ್ಯ ವಿಶೇಷ ಪೂಜೆ, ಅಲಂಕಾರ, ಸಂಕಷ್ಟಹರ ಗಣಪತಿ ವ್ರತ, ಪ್ರದೂಷ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಶ್ರದ್ದೆ ಭಕ್ತಿಯಿಂದ ನಡೆಯುತ್ತಿತ್ತು. ನಗರದ ರಾಜಬೀದಿಗಳಲ್ಲಿ ಶ್ರೀ ಸ್ವಾಮಿಯವರ ಉತ್ಸವವು ನಾದಸ್ವರ, ನಾಸಿಕ್ ಡೋಲ್, ವೀರಗಾಸೆ, ನಂದಿಕೋಲು, ವೀರಭದ್ರ ಕುಣಿತ, ಡೊಳ್ಳು, ಡೀಜೆ ಸೇರಿದಂತೆ ಹತ್ತಾರು ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವೋಪೇತ ಮೆರವಣಿಗೆ ವಿವಿಧ ಬಡಾವಣೆ, ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಮೆರವಣಿಗೆ ಸಾಗುತ್ತಿರುವಾಗ ಆಯಾ ವಾಣಿಜ್ಯ ಕಟ್ಟಡದವರು, ಅಂಗಡಿ ಮಾಲೀಕರುಗಳು, ವಿವಿಧ ಸಂಘ ಸಂಸ್ಥೆಯವರು, ಕಾಂಪ್ಲೆಕ್ಸ್‌ನ ಅಂಗಡಿಗಳವರು, ಹೋಟೆಲ್‌ಗಳವರು, ನಾನಾ ಯುವಕರ ತಂಡಗಳು ಸಿದ್ದಪಡಿಸಿದ್ದ ವೇದಿಕೆ ಮುಂಭಾಗದಲ್ಲಿ ಆಕರ್ಷಕ ಹಾರ ತುರಾಯಿಗಳನ್ನು ಗಣಪನಿಗೆ ಅರ್ಪಿಸುತ್ತಿದ್ದರಲ್ಲದೆ ಭಕ್ತರಿಗೆ ಚಿತ್ರಾನ್ನ, ಪುಳಿಯೊಗರೆ, ಕಡಲೆಕಾಳು, ಪಾನಕ, ಐಸ್‌ಕ್ರೀಂ, ಪಲಾವು, ಫ್ರೂಟ್‌ಸಾಲೆಡ್, ದೋಸೆ ಮತ್ತಿತರ ತರೇಹವಾರಿ ಪ್ರಸಾದಗಳನ್ನು ವಿತರಣೆ ಮಾಡುತ್ತಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಘಸಂಸ್ಥೆಗಳು, ಯುವಕರ ತಂಡಗಳು ಸಿದ್ದಪಡಿಸಿದ್ದ ಆರ್ಕೆಸ್ಟ್ರಾಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸಾಕಷ್ಟು ತಂಡಗಳ ಯುವಕ-ಯುವತಿಯರು ಡ್ಯಾನ್ಸ್, ಹಾಡು ಮತ್ತಿತರೆ ಜಾನಪದ ಕಲೆಗಳ ರೂಪದಲ್ಲಿ ಗಣಪನನ್ನು ಸ್ವಾಗತಿಸುತ್ತಿದ್ದ ದೃಶ್ಯಗಳು ಜನರನ್ನು ರಂಜಿಸುತ್ತಿದ್ದವು. ದೊಡ್ಡಪೇಟೆಯ ಫ್ರೆಂಡ್ಸ್ ಸರ್ಕಲ್ ವತಿಯಿಂದ ಹಣ್ಣು, ಬೇಳೆಕಾಳು, ಕೊಬ್ಬರಿ, ಡ್ರೈಪ್ರೂಟ್ಸ್, ಕಬ್ಬು ಸೇರಿದಂತೆ ವಿವಿಧ ಬಗೆಯ ವಸ್ತುಗಳಿಂದ ತಯಾರಿಸಿದ್ದ ೫೦ಕ್ಕೂ ಹೆಚ್ಚು ಹಾರಗಳನ್ನು ಗಣಪನಿಗೆ ಸಮರ್ಪಿಸಿದ ದೃಶ್ಯಗಳನ್ನು ಭಕ್ತರು ಕಣ್ತುಂಬಿಕೊಂಡರು. ಸಿಡಿಮದ್ದುಗಳ ಅಮೋಘ ದೃಶ್ಯ : ಮೆರವಣಿಗೆ ಮುಗಿದ ನಂತರ ಗಣಪತಿಯನ್ನು ತಿಪಟೂರು ಅಮಾನಿಕೆರೆಯ ಕಲ್ಯಾಣಿಯಲ್ಲಿ ಸೋಮವಾರ ಬೆಳಗಿನ ಜಾವ ೨ಗಂಟೆ ಸಮಯದಲ್ಲಿ ವಿಸರ್ಜನೆ ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಕೆರೆ ಏರಿಯ ಮೇಲೆ ಕಾಯ್ದು ದೃಶ್ಯವನ್ನು ವೀಕ್ಷಣೆ ಮಾಡಿತು. ಆಕರ್ಷಕ, ಸಿಡಿ ಮದ್ದುಗಳು, ಚಿತ್ತಾಕರ್ಷಕ ಪಟಾಕಿಗಳು ಸಣ್ಣಪುಟ್ಟವರೆನ್ನದೆ ಎಲ್ಲರನ್ನೂ ಆಕರ್ಷಿಸುತ್ತಿದ್ದವು.

ಬಿಗಿಬಂದೋಬಸ್ತ್ : ಮೂರು ದಿನಗಳ ಕಾಲ ನಡೆದ ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಎಲ್ಲಿಯೂ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗಿತ್ತು. ಆದರೂ ಜನಸಂಖ್ಯೆ ಹೆಚ್ಚಿದ್ದರಂತೆ ಅಲ್ಲಲ್ಲಿ ವಾಹನಗಳ ದಟ್ಟಣೆ ಕಂಡುಬಂದಿತು. ಎನ್.ಎಚ್.206ರಲ್ಲಿ ಪ್ರಯಾಣ ಮಾಡುವ ವಾಹನ ಸವಾರರಿಗೆ ಹಾಗೂ ಸ್ಥಳೀಯರಿಗೆ ಸಮಸ್ಯೆ ಉಂಟಾಗಿ ಕೆಲವೆಡೆ ಸಾರ್ವಜನಿಕರು ಪರದಾಡುವಂತಾಯಿತು. ಒಟ್ಟಾರೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ವಿಸರ್ಜನಾ ಮಹೋತ್ಸವ ಶಾಂತಿಯುತವಾಗಿ ಹಾಗೂ ಸಾಂಗವಾಗಿ ನೆರವೇರಿತು.