ಓದುಗರ ಆಕರ್ಷಿಸುತ್ತಿರುವ ಡಿಜಿಟಲ್ ಗ್ರಂಥಾಲಯ

| Published : Jun 20 2024, 01:05 AM IST

ಸಾರಾಂಶ

ಗುಳೇದಗುಡ್ಡ ತಾಲೂಕಿನ ಕೋಟೆಕಲ್ ಗ್ರಾಮ ಪಂಚಾಯತಿಯಲ್ಲಿ ಮಾದರಿ ಡಿಜಿಟಲ್ ಗ್ರಂಥಾಲಯ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವವರಿಗೆ ಅನುಕೂಲ ಕಲ್ಪಿಸಲು ಮಾದರಿ ಗ್ರಂಥಾಲಯ ನಿರ್ಮಿಸಲಾಗಿದೆ.

ಡಾ.ಸಿ.ಎಂ.ಜೋಶಿ

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ತಾಲೂಕಿನ ಕೋಟೆಕಲ್ ಗ್ರಾಮ ಪಂಚಾಯತಿಯಲ್ಲಿ ಮಾದರಿ ಡಿಜಿಟಲ್ ಗ್ರಂಥಾಲಯ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವವರಿಗೆ ಅನುಕೂಲ ಕಲ್ಪಿಸಲು ಮಾದರಿ ಗ್ರಂಥಾಲಯ ನಿರ್ಮಿಸಲಾಗಿದೆ.

ಗ್ರಂಥಾಲಯದಲ್ಲಿ ಓದುವ ಒಂದು ಸಾಮಾನ್ಯ ಕೊಠಡಿ ಇದೆ. ಇಲ್ಲಿ 30ಕ್ಕೂ ಹೆಚ್ಚು ಜನ ಕುಳಿತು ಓದಲು ವ್ಯವಸ್ಥೆ ಕಲ್ಪಸಲಾಗಿದೆ. ಇನ್ನುಳಿದಂತೆ ಹೆಣ್ಣು ಮಕ್ಕಳಿಗೆ, ಬಾಲಕರಿಗೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ಓದಲು ಕೊಠಡಿಗಳಿವೆ. ಕಟ್ಟಡಕ್ಕೆ ಬಣ್ಣ ಮಾಡಿ, ಓದಲು ಪ್ರೇರಣೆ ಒದಗಿಸುವ ಆಕರ್ಷಕವಾದ ಚಿತ್ರಗಳನ್ನು ಗೋಡೆಗಳಿಗೆ ಬಿಡಿಸಿ ಹಲವು ನುಡಿ ಮುತ್ತುಗಳನ್ನು ಬರೆಸಲಾಗಿದೆ.

ಗ್ರಂಥಾಲಯದಲ್ಲಿ ಟೇಬಲ್, ಖುರ್ಚಿಗಳು, ಪೇಪರ್ ಓದಲು ಸ್ಟ್ಯಾಂಡ್‌ಗಳು ಹೀಗೆ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗಿದೆ. 5000ಕ್ಕೂ ಅಧಿಕ ಪುಸ್ತಕಗಳಿವೆ. ಕಥೆ, ಕಾದಂಬರಿ, ಪಠ್ಯ ಪುಸ್ತಕ, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಅಗತ್ಯ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. 8ಕ್ಕೂ ಹೆಚ್ಚು ದಿನಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯವಿರುವ 6ಕ್ಕೂ ಹೆಚ್ಚು ಮ್ಯಾಗ್ಜಿನ್ ಗಳು ಬರುತ್ತವೆ. ಇವುಗಳು ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ಸಹಕಾರಿಯಾಗಿವೆ.

ಕೋಟೆಕಲ್ ಗ್ರಾಮದ ಹಾಗೂ ಸುತ್ತಮುತ್ತಲಿನ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಇಲ್ಲಿ ನಿತ್ಯ ಅಧ್ಯಯನಕ್ಕೆ ಬರುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಸದಾ ತೆರೆದಿರುವ ಗ್ರಂಥಾಲಯ ಓದುಗರಿಗೆ ಅನುಕೂಲವಾಗಿದೆ. ಗ್ರಾಪಂ ಪಿಡಿಒ ಆರತಿ ಕ್ಷತ್ರಿಯವರ ಮನವಿಯ ಮೆರೆಗೆ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಿನಕ್ಕೆ ಒಂದು ಗಂಟೆ ಗ್ರಂಥಾಲಯದಲ್ಲಿ ಓದಲು ಸಮಯ ನಿಗಧಿಪಡಿಸಿರುವುದರಿಂದ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರತಿದಿನ ಒಂದೊಂದು ತರಗತಿಯವರು ಒಂದೊಂದು ಗಂಟೆ ಓದಲು ಬರುತ್ತಾರೆ.

ಅಧ್ಯಯನಕ್ಕೆ ಹೆಚ್ಚಿನ ಮಾಹಿತಿಗಾಗಿ ಮೂರು ಕಂಪ್ಯೂಟರ್‌ ಗಳು ಗ್ರಂಥಾಲಯದಲ್ಲಿವೆ. ಅವುಗಳನ್ನು ಬಳಸಿಕೊಂಡು ಹೆಚ್ಚಿನ ಅಧ್ಯಯನ ಮಾಡಬಹುದಾಗಿದೆ. ವಿದ್ಯಾರ್ಥಿಗಳಿಗೆ ಬಳಸಲು ಎರಡು ಟ್ಯಾಬ್ ಗಳಿವೆ. ಶೌಚಾಲಯ, ಕುಡಿಯಲು ಶುದ್ಧ ನೀರು ಹಾಗೂ ಸಿಸಿ ಟಿವಿ ಅಳವಡಿಸಲಾಗಿದೆ. ಪ್ರತಿ ಸೋಮವಾರ ಮತ್ತು ಎರಡು ಮತ್ತು ನಾಲ್ಕನೇ ಮಂಗಳವಾರ ಹಾಗೂ ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಓದಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಗ್ರಂಥಪಾಲಕ ವೈ.ಜಿ. ಅರಮನಿ ಹೇಳುತ್ತಾರೆ.ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಗ್ರಂಥಾಲಯ ರೂಪುಗೊಂಡಿದೆ.

-ಪಾರ್ವತಿ ಹುಚ್ಚಪ್ಪ ಮೇಟಿ ಗ್ರಾ,ಪಂ ಅಧ್ಯಕ್ಷೆ ಕೋಟೆಕಲ್.ಪಂಚಾಯತಿಯ ಉತ್ತಮ ಕಟ್ಟಡವನ್ನು ಬಳಸಿಕೊಂಡು 15ನೇ ಹಣಕಾಸು ಯೋಜನೆ ಹಾಗೂ ಪಂಚಾಯತಿಯ ಸ್ವಂತ ಅನುದಾನ (ವರ್ಗ-1) ಅಡಿಯಲ್ಲಿ ಒಟ್ಟು ₹ 9 ಲಕ್ಷ ಅನುದಾನ ಬಳಸಿಕೊಂಡು ಅತ್ಯಾಧುನಿಕ ಗ್ರಂಥಾಲಯ ಮಾಡಿದ್ದೇವೆ. ಸ್ಮರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ.

- ಆರತಿ ಕ್ಷತ್ರಿ, ಪಿಡಿಒ ಗ್ರಾಮ ಪಂಚಾಯತಿ, ಕೋಟೆಕಲ್.