ಪಾಳು ಬಿದ್ದು ಅನಾಥವಾಗಿರುವ ಕಲಾ ಭವನ

| Published : May 13 2024, 12:04 AM IST

ಸಾರಾಂಶ

ದನಕರು ಕಟ್ಟುವ ಕಾರ್ಯವನ್ನು ಅಕ್ಕ ಪಕ್ಕದ ಜನರು ಮಾಡುವ ಮೂಲಕ ಅದರ ಮೂಲ ಉದ್ದೇಶವೇ ಹಾಳಾಗಿ ಹೋಗಿದೆ

ಅಶೋಕ ಸೊರಟೂರ ಲಕ್ಷ್ಮೇಶ್ವರ

ಗ್ರಾಮೀಣ ಪ್ರದೇಶದಲ್ಲಿ ಮನರಂಜನಾ ಕಾರ್ಯಕ್ರಮ ಹಾಗೂ ತಮ್ಮಲ್ಲಿನ ಕಲೆಗಳನ್ನು ಪ್ರದರ್ಶನ ಮಾಡುವ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದ ಕಲಾ ಭವನ ಈಗ ಕುಡುಕರ ಆವಾಸ ಸ್ಥಾನವಾಗಿದೆ ಎಂಬುದು ನೋವಿನ ಸಂಗತಿಯಾಗಿದೆ.

ಸಮೀಪದ ಶಿಗ್ಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಕಲಾ ಭವನ ಪಾಳು ಬಿದ್ದು ತನ್ನ ಗತವೈಭವದ ಬಗ್ಗೆ ಮರುಕಪಡುತ್ತಿದೆ. ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ಬೃಹತ್ ಕಲಾಭವನ ನಿರ್ಮಾಣ ಮಾಡಿತ್ತು. ಆದರೆ ಕಲಾ ಭವನ ಈಗ ಹಾಳು ಕೊಂಪೆಯಾಗಿ ಭಣಗುಡುತ್ತಿದೆ. 1995 ರಿಂದ 2000 ನೇ ಸಾಲಿನಲ್ಲಿ ಸಂಸದ ಐ.ಜಿ. ಸನದಿ ಹಾಗೂ ಶಾಸಕ ಗಂಗಣ್ಣ ಮಹಾಂತಶೆಟ್ಟರ್‌ ಅನುದಾನದಲ್ಲಿ ನಿರ್ಮಿಸಿದ ಕಲಾ ಭವನದ ಈಗ ಭಣಗುಡುತ್ತಿದೆ.

ಕಲಾ ಭವನದ ಮೇಲ್ಚಾವಣಿಯ ತಗಡುಗಳು ಹಾರಿ ಹೋಗಿ ಅನಾಥವಾಗಿದೆ. ಕಲಾಭವನ ಈಗ ಕಸಕಡ್ಡಿ ಹಾಕುವ ತಾಣವಾಗಿದೆ. ಕಲಾಭವನದ ಒಳಗಡೆ ಕಟ್ಟಿಗೆ ಹಾಕಲಾಗಿದೆ. ದನಕರು ಕಟ್ಟುವ ಕಾರ್ಯವನ್ನು ಅಕ್ಕ ಪಕ್ಕದ ಜನರು ಮಾಡುವ ಮೂಲಕ ಅದರ ಮೂಲ ಉದ್ದೇಶವೇ ಹಾಳಾಗಿ ಹೋಗಿದೆ.

ಗ್ರಾಮೀಣ ಪ್ರದೇಶದಲ್ಲಿ ನಾಟಕ ಹಾಗೂ ಬಯಲಾಟ ಆಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ, ಮನರಂಜನೆ ನೀಡುವ ಮಹತ್ತರ ಪಾತ್ರ ವಹಿಸುತ್ತಿದ್ದ ಹಾಗೂ ಕಲೆಗಳು ಬಗ್ಗೆ ಜನರ ಮನಸ್ಸಿನಲ್ಲಿ ಬಿತ್ತುವ ಕಲಾ ಭವನ ಈಗ ಪಾಳು ಬಿದ್ದಿರುವುದು ನೋವಿನ ಸಂಗತಿಯಾಗಿದೆ ಎಂದು ಗ್ರಾಪಂ ಸದಸ್ಯ ಅಶೋಕ ಮುಳಗುಂದಮಠ ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಕಲೆಗಳು ನಶಿಸಿ ಹೋಗಬಾರದು ಎನ್ನುವ ಉದ್ದೇಶದಿಂದ ನಿರ್ಮಿಸಲಾಗಿರುವ ಕಲಾ ಭವನ ಈಗ ಹಾಳಾಗಿ ಹೋಗಿದೆ. ಶಿಗ್ಲಿಯ ಗ್ರಾಪಂ ಆಡಳಿತ ಮಂಡಳಿ ಕಲಾ ಭವನದ ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಬೇಕು. ಅಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಮಂಡಳಿ ಜಾಗೃತಿ ವಹಿಸಬೇಕು ಎಂದು ಶಿಗ್ಲಿಯ ಗ್ರಾಪಂ ಮಾಜಿ ಸದಸ್ಯ ಸೋಮಣ್ಣ ಡಾಣಗಲ್ಲ ಹೇಳಿದರು.