ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಲಾವಿದರನ್ನು ಕಳೆದುಕೊಂಡಾಗ ನಿರ್ದೇಶಕ ಅರ್ಧ ಸತ್ತಂತೆ ಆಗುತ್ತಾನೆ. ಅಂತಹ ಭಾವನೆ ನನ್ನಲ್ಲೂ ವ್ಯಕ್ತವಾಗಿತ್ತು ಎಂದು ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ ತಿಳಿಸಿದರು.ನಗರದ ಗಾಂಧಿ ಭವನದಲ್ಲಿ ಜೀವನಾಡಿ ಪತ್ರಿಕೆ ವತಿಯಿಂದ ನಡೆದ ಚಲನಚಿತ್ರ ಮತ್ತು ಕಿರುತೆರೆ ನಟ ದಿ.ಎಂ.ರವಿಪ್ರಸಾದ್ ಸ್ಮರಣಾರ್ಥ ರಾಜ್ಯಮಟ್ಟದ ಹವ್ಯಾಸಿ ರಂಗನಟ ಪ್ರಶಸ್ತಿ, ಜೀವನಾಡಿ ಸಾಹಿತ್ಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಜೀವನಾಡಿ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬಳಗದ ಲೇಖಕರ ಕೃತಿಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲ ಅಭಿಮಾನಿಗಳು ಮಗಳು ಜಾನಕಿ ಧಾರಾವಾಹಿ ವಿಸ್ತರಿಸುವಂತೆ ಕೇಳಿಕೊಂಡರು. ಆದರೆ, ಅದರ ಮುಖ್ಯಭೂಮಿಕೆಯಲ್ಲಿದ್ದ ರವಿಪ್ರಸಾದ್ ಇಲ್ಲದಿದ್ದ ಕಾರಣ ನನಗೆ ಧಾರಾವಾಹಿ ವಿಸ್ತರಣೆ ಮಾಡಲು ಮನಸ್ಸಾಗಲಿಲ್ಲ. ರವಿ ಅವರನ್ನು ನೆನೆದಾಗ ಹೃದಯ ಛಿದ್ರವಾಗುತ್ತದೆ ಎಂದರು.ರವಿಪ್ರಸಾದ್ ಇಲ್ಲದ ಸಂಕಟದ ನಡುವೆಯೂ ಬದುಕು ಕಟ್ಟಿಕೊಳ್ಳುವುದು ಸವಾಲಿನ ಕೆಲಸ. ಅದನ್ನು ಮಾಡುತ್ತಿರುವ ಹಿರಿಯ ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ ದಂಪತಿ ಹಾಗೂ ರವಿ ಅವರ ಪತ್ನಿ ಮಾಲತಿ ರವಿಪ್ರಸಾದ್ ಅವರನ್ನು ನೋಡಿದಾಗ ಕೆಲಸ ಮಾಡಲು ಸ್ಫೂರ್ತಿ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಕ್ತ ಮುಕ್ತ ಹಾಗೂ ಮಗಳು ಜಾನಕಿಯಲ್ಲಿ ಮಂಡ್ಯ ರವಿಪ್ರಸಾದ್ ಅವರು ಉತ್ತಮ ನಟನಾಗಿ ಅಭಿನಯಿಸಿ ಸ್ಟಾರ್ ಆದವರು. ಮಂಡ್ಯದ ಕೆಲವು ಸಾಹಿತಿಗಳು ಸೇರಿದಂತೆ ಹಲವು ಮಂದಿ ನನ್ನ ಪಾಲಿಗೆ ಸ್ಟಾರ್ ಆಗಿದ್ದಾರೆ ಎಂದು ಸ್ಮರಿಸಿದರು.ಸಾಹಿತ್ಯ ಸ್ಪರ್ಧೆ ತೀರ್ಪುಗಾರ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ವಸುಂಧರಾ ಮಾತನಾಡಿ, ನನ್ನ ಜಿಲ್ಲೆಯಿಂದ ಜೀವನಾಡಿಯಂತಹ ಗುಣಮಟ್ಟದ ಮಾಸ ಪತ್ರಿಕೆ ಹೊರ ಬರುತ್ತಿರುವುದು ಅಭಿಮಾನ, ಪ್ರೀತಿ ಮೂಡಿಸಿದೆ. ಇದರಲ್ಲಿ ರಾಜ್ಯಾದ್ಯಂತ ಲೇಖಕರ ಉತ್ಕೃಷ್ಟ ಬರಹಗಳಿವೆ. ಇಂತಹ ಪತ್ರಿಕೆಯ ಹೆಸರಿನಲ್ಲಿ ನಡೆಸಿದ ಸಾಹಿತ್ಯ ಸ್ಪರ್ಧೆಯ ಪ್ರಬಂಧಗಳನ್ನು ವಿಮರ್ಶಿಸಿ ಆಯ್ಕೆ ಮಾಡಿದ್ದು ಸವಾಲು ಎನಿಸಲಿಲ್ಲ. ಬಂದ 60 ಬರಹಗಳಲ್ಲಿ ಕೆಲವನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಯಿತು. ಪತ್ರಿಕೆ ಇನ್ನಷ್ಟು ಪ್ರವರ್ಧಮಾನಕ್ಕೆ ಬರಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ಕೇಂದ್ರ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅನುಪಸ್ಥಿತಿಯಲ್ಲಿ ಕಸಾಪ ಕಾರ್ಯದರ್ಶಿ ಪಟೇಲ್ ಪಾಂಡು ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ಮತ್ತು ಕಿರುತೆರೆ ನಟ ದಿ.ಎಂ.ರವಿಪ್ರಸಾದ್ ಸ್ಮರಣಾರ್ಥ ರಾಜ್ಯಮಟ್ಟದ ಹವ್ಯಾಸಿ ರಂಗನಟ ಪ್ರಶಸ್ತಿಯನ್ನು ಕಿರುತೆರೆ ಕಲಾವಿದ ರಾಜೇಶ್ ನಟರಂಗ ಅವರಿಗೆ ಪ್ರದಾನ ಮಾಡಲಾಯಿತು.4ನೇ ವರ್ಷದ ಜೀವನಾಡಿ ವಿಶೇಷ ಸಂಚಿಕೆಯನ್ನು ಸಾಹಿತಿ ಎಸ್.ಶೀನಿವಾಸಶೆಟ್ಟಿ ಬಿಡುಗಡೆ ಮಾಡಿದರು. ಜೀವನಾಡಿ ಉಪಸಂಪಾದಕ ವಿಶ್ವಾಸ ಡಿ.ಗೌಡ ಅವರ ವಿಶ್ವಾಸದ ವಿಮರ್ಶೆ ಹಾಗೂ ಕೀರ್ತಿ ಕಿರಣ್‌ಕುಮಾರ್ ಅವರ ಕರೆಗಂಟೆ ಪುಸ್ತಕಗಳನ್ನು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣಗೌಡ ಬಿಡುಗಡೆ ಮಾಡಿದರು.
ಜೀವನಾಡಿ ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆ ವಿಜೇತರಾದ ವಿನಾಯಕ ಅರಳಸುಳಿ ಶಿವಮೊಗ್ಗ ಜಿಲ್ಲೆ(ಸಣ್ಣ ಕಥೆ) ಸಂತೆಬೆನ್ನೂರು ಪೈಜ್ನಟ್ರಾಜ್(ಪ್ರಬಂಧ) ವಿನುತ ಹಂಚಿನಮನಿ ಧಾರವಾಡ(ಕವಿತೆ) ಅವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಪತ್ರಿಕೆ ಸಂಪಾದಕ ಡಾ. ಎಚ್.ಎಸ್.ಮುದ್ದೇಗೌಡ, ರವಿಪ್ರಸಾದ್ ಪತ್ನಿ ಜಿ.ಎಸ್. ಮಾಲತಿ ರವಿಪ್ರಸಾದ್, ಕಲಾವಿದ ಚಂದನ್ ಶಂಕರ್, ಎಲ್ಲರೊಳಗೊಂದಾಗು ಟ್ರಸ್ಟ್‌ನ ವಿನಯಕುಮಾರ್, ಎಚ್.ಆರ್.ಕನ್ನಿಕಾ, ಬಿ.ಎಂ.ಅಪ್ಪಾಜಪ್ಪ, ಉಪನ್ಯಾಸಕ ಪ್ರಶಾಂತ್ ಉಪಸ್ಥಿತರಿದ್ದರು.