ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ವೈದ್ಯನಾಥಪುರದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡುವ ಸಂಬಂಧ ಎರಡು ಗುಂಪುಗಳ ಸದಸ್ಯರ ನಡುವೆ ವಿವಾದ ಉಂಟಾಗಿ ಬಿಗುವಿನ ಪರಿಸ್ಥಿತಿ ತಲೆದೂರಿದ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಿದ್ದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ರದ್ದುಗೊಂಡಿತು.ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಉಭಯ ಗುಂಪುಗಳ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಡೇರಿಗೆ ನೂತನ ನಿರ್ದೇಶಕರ ಆಯ್ಕೆ ಸಂಬಂಧ ಕಳೆದ ಆ.25ರಂದು ಚುನಾವಣೆ ನಿಗದಿ ಮಾಡಿ ಸಹಕಾರ ಸಂಘಗಳ ಉಪನಿಬಂಧಕರು ಆದೇಶ ಹೊರಡಿಸಿ ಚುನಾವಣಾ ಅಧಿಕಾರಿಯಾಗಿ ಎಂ.ಕೆ. ತ್ಯಾಗರಾಜ ಪ್ರಸಾದ ಎಂಬುವವರನ್ನು ಚುನಾವಣೆ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ ಆ.18ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಸಂಘದ ನಿರ್ದೇಶಕರ ಚುನಾವಣೆಯಲ್ಲಿ 91 ಸದಸ್ಯರ ಪೈಕಿ 15 ಮಂದಿ ಮೃತಪಟ್ಟಿದ್ದರು. ಉಳಿದ 76 ಮಂದಿ ಷೇರುದಾರ ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು. ಇದನ್ನು ವಿರೋಧಿಸಿದ ಉಭಯ ಗುಂಪುಗಳು ಒಂದು ವರ್ಷದ ಹಿಂದೆ ಸದಸ್ಯರಾಗಿರುವ ಷೇರುದಾರರಿಗೂ ಮತದಾನದ ಹಕ್ಕು ನೀಡುವಂತೆ ಪಟ್ಟು ಹಿಡಿದಿದ್ದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ತ್ಯಾಗರಾಜು ಹೊಸ ಸದಸ್ಯರಿಗೆ ಸಂಘದ ನಿಯಮದ ಪ್ರಕಾರ ಮತದಾನದ ಹಕ್ಕು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ವೇಳೆ ಗೊಂದಲ ಉಂಟಾಗಿ ಒಂದು ಗುಂಪು ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರ ಗಳನ್ನು ದಾಖಲೆ ಸಮೇತ ಅಪಹರಿಸಿ ಹರಿದು ಹಾಕಿದ್ದರು. ಇದರಿಂದ ಚುನಾವಣೆ ಮುಂದೂಡಲಾಗಿತ್ತು.ಈ ಎಲ್ಲಾ ಗೊಂದಲಗಳ ನಡುವೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ಸಹಕಾರ ಸಂಘದ ಉಪನಿಬಂಧಕರ ಆದೇಶದಂತೆ ವಾರ್ಷಿಕ ಸಾಮಾನ್ಯ ಸಭೆಯನ್ನು ಇಲಾಖೆಯ ಆದೇಶದಂತೆ ನೇಮಕಗೊಂಡಿದ್ದ ವಿಶೇಷ ಅಧಿಕಾರಿ ಜಿ.ವಿ.ಮುತ್ತುರಾಜ್ ಅಧ್ಯಕ್ಷತೆಯಲ್ಲಿ ನಿಗದಿ ಮಾಡಲಾಗಿತ್ತು.
ಈ ವೇಳೆ ಸಭೆಗೆ ನುಗ್ಗಿದ ಎರಡು ಗುಂಪುಗಳು ನಿರ್ದೇಶಕರ ಚುನಾವಣೆಯಲ್ಲಿ ಹೊಸ ಸದಸ್ಯರಿಗೂ ಮತದಾನದ ಹಕ್ಕು ನೀಡುವವರೆಗೆ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸದಂತೆ ಪಟ್ಟು ಹಿಡಿದು ಸಭೆಗೆ ಅಡ್ಡಿಪಡಿಸಿದರು. ಇದರಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಡುವಿನ ಪರಿಸ್ಥಿತಿ ಉಂಟಾಯಿತು.ನಂತರ ಸ್ಥಳಕ್ಕೆ ಧಾವಿಸಿದ ಸಿಪಿಐ ಶಿವಕುಮಾರ್ ಹಾಗೂ ಸಿಬ್ಬಂದಿ ಗುಂಪು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪರಿಸ್ಥಿತಿ ಗಂಭೀರತೆ ಅರಿತ ವಿಶೇಷ ಅಧಿಕಾರಿ ಜಿ.ವಿ.ಮುತ್ತುರಾಜ್ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.