ಸಾರಾಂಶ
ತುರ್ವಿಹಾಳ; ಸಮೀಪದ ಗುಂಜಳ್ಳಿ ಕ್ಯಾಂಪ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡಗಳು ಬಳಕೆಯಿಲ್ಲದೇ ನಿರುಪಯುಕ್ತವಾಗಿದ್ದು, ಪುಂಡ-ಪೋಕರಿಗಳ, ಮದ್ಯ ವ್ಯಸನಿಗಳ ಅಡ್ಡೆಯಾಗಿ ಮಾರ್ಪಟ್ಟಿವೆ.
ಕಳೆದ ನಾಲ್ಕು ವರ್ಷಗಳ ಹಿಂದೆ 2 ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಆದರೆ, ಬಿಸಿಯೂಟದ ಕೋಣೆ ಮತ್ತು ಶೌಚಾಲಯ ಇಲ್ಲದ ಕಾರಣ ಸಮಸ್ಯೆಯಾಗಿದ್ದು, ಈ ಹಿಂದೆಯೇ ಇದ್ದ ಕಟ್ಟಡದ ಮೈದಾನ ಮರಗಳ ನೆರಳಿನಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಶಾಲೆಯಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಮೂಲ ಸೌಕರ್ಯಗಳ ಕೊರತೆಯಿಂದಾಗಿ ಅಭ್ಯಾಸಕ್ಕೆ ಸಮಸ್ಯೆ ಎದುರಿಸುತ್ತಿದ್ದಾರೆ.ಮದ್ಯ ವ್ಯಸನಿಗಳ ತಾಣ: ಶಾಲಾ ಕೊಠಡಿಗಳನ್ನು ನಿರ್ಮಿಸಿ ಬಳಸದೇ ಹಾಗೆಯೇ ಬಿಟ್ಟಿದ್ದರಿಂದ ಮದ್ಯ ವ್ಯಸನಿಗಳು ಶಾಲಾ ಆವರಣ ಮತ್ತು ಕೊಠಡಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಮದ್ಯ ವ್ಯಸನಿಗಳು ಶಾಲೆಯ ಆವರಣ, ಧ್ವಜಾರೋಹಣ ಕಟ್ಟೆ ಮದ್ಯಪಾನ ಮಾಡಿ ಖಾಲಿ ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಹೀಗಾಗಿ ಎಲ್ಲೆಂದರಲ್ಲಿ ತ್ಯಾಜ್ಯ ಬಿದ್ದಿದ್ದು, ಮಲಮೂತ್ರ ವಿಸರ್ಜನೆ ಮಾಡಿದ್ದರಿಂದ ಸುತ್ತಲೂ ದುರ್ನಾತ ಹರಡಿದೆ. ಇನ್ನೂ ಆಗಾಗ ಇಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿ 4 ವರ್ಷವಾದರೂ ಬಿಸಿಯೂಟದ ಅಡುಗೆ ಕೋಣೆ, ಶೌಚಾಲಯ ಕಟ್ಟಡ ನಿರ್ಮಿಸದ ಕಾರಣದಿಂದಾಗಿ ವಿದ್ಯಾರ್ಥಿಗಳು ಹಳೆ ಕೊಠಡಿಗಳ ಮೈದಾನದಲ್ಲಿ ಅಭ್ಯಾಸ ಮಾಡುವಂತಾಗಿದ್ದು, ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಲೆಯಲ್ಲಿ ಕುಡಿವ ನೀರು, ಬಿಸಿಯೂಟದ ಕೊಠಡಿ, ವಿದ್ಯುತ್ ಶೌಚಾಲಯ ಕಟ್ಟಡದ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತುರ್ವಿಹಾಳನ ಸಿ ಆರ್ ಪಿ ಹನುಂತಪ್ಪ ಭಂಗಿ ತಿಳಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಧನೂರಿನ ಬಿಇಒ ಸೋಮಶೇಖರ ಗುಂಜಳ್ಳಿ ಕ್ಯಾಂಪ್ ಶಾಲೆಗೆ ಭೇಟಿ ನೀಡಿ, ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))