ಸಾರಾಂಶ
ಬಾಗಲಕೋಟೆ: ಗುದದ್ವಾರದ ಬಳಿ ಬೃಹತ್ ಗಡ್ಡೆ ಬೆಳೆದು ತೊಂದರೆ ಎದುರಿಸುತ್ತಿದ್ದ ನವಜಾತ ಶಿಶುವಿಗೆ ನಗರದ ಶಾಂತಿ ಆಸ್ಪತ್ರೆ ವೈದ್ಯರು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳ ಶಸ್ತ್ರಚಿಕಿತ್ಸಕ ಡಾ.ರಮೇಶ ಹಟ್ಟಿ ಜ.22ರಂದು ಅಂದರೆ 6 ದಿನದ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ಬೇರ್ಪಡಿಸಿದರು. ಸದ್ಯ ಮಗುವಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಂಪೂರ್ಣ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗುದದ್ವಾರದ ಬಳಿ ಬೃಹತ್ ಗಡ್ಡೆ ಬೆಳೆದು ತೊಂದರೆ ಎದುರಿಸುತ್ತಿದ್ದ ನವಜಾತ ಶಿಶುವಿಗೆ ನಗರದ ಶಾಂತಿ ಆಸ್ಪತ್ರೆ ವೈದ್ಯರು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಬಾದಾಮಿ ತಾಲೂಕಿನ ಹುಲಸಗೇರಿ ಗ್ರಾಮದ ಮಹಿಳೆ ಜ.17ರಂದು ಬಾದಾಮಿಯ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ 3 ಕೆಜಿಯಷ್ಟಿದ್ದ ಮಗುವಿಗೆ ಗುದದ್ವಾರದ ಬಳಿ 650 ಗ್ರಾಂ ದೊಡ್ಡಗಡ್ಡೆ ಬೆಳೆದಿತ್ತು. ಇದರಿಂದ ಮಗು ಹೊರಳಾಡುವುದು, ತಾಯಿ ಹಾಲುಣಿಸುವುದು ಕೂಡ ಕಷ್ಟವಾಗಿತ್ತು. ನಂತರ ಮಗುವನ್ನು ನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲವು ಪರೀಕ್ಷೆ ನಡೆಸಿದ ಇಲ್ಲಿನ ಮಕ್ಕಳ ಶಸ್ತ್ರಚಿಕಿತ್ಸಕ ಡಾ.ರಮೇಶ ಹಟ್ಟಿ ಜ.22ರಂದು ಅಂದರೆ 6 ದಿನದ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ಬೇರ್ಪಡಿಸಿದರು. ಸದ್ಯ ಮಗುವಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಂಪೂರ್ಣ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಷ್ಟು ಚಿಕ್ಕ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದರೆ ಮಗು ಉಳಿಯುವ ಸಾಧ್ಯತೆ ಕಡಿಮೆ ಎಂಬ ತಪ್ಪು ತಿಳಿವಳಿಕೆಯಿಂದ ಪಾಲಕರು ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕುವುದು ಸಹಜ. ಆದರೆ ಹಾಗೆ ಮಾಡದೆ ಮಕ್ಕಳ ತಜ್ಞರನ್ನು ಸಂಪರ್ಕಿಸಿದರೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಶಾಂತಿ ಆಸ್ಪತ್ರೆ ಮುಖ್ಯಸ್ಥ ಡಾ.ಆರ್.ಟಿ.ಪಾಟೀಲ, ಮಕ್ಕಳ ತಜ್ಞರಾದ ಡಾ.ಸುನೀಲ ಪಾಟೀಲ, ವಿಕ್ರಮ ನಾಗಠಾಣ, ಅರಿವಳಿಕೆ ತಜ್ಞ ಅನೀಲ ಗಣೇಶನ್ನನವರ ಹಾಗೂ ಶುಶ್ರೂಷಕ ಸಿಬ್ಬಂದಿ ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದರು.