ಹುಬ್ಬಳ್ಳಿ ವಿದ್ಯಾನಗರ ನಿವಾಸಿಯಾಗಿರುವ ಮಾ. ನಾಗರಾಜ ಅವರು, ರಾಜ್ಯದ ಪ್ರಬಲ ಕುರುಬ ಸಮುದಾಯಕ್ಕೆ ಸೇರಿದವರು. ವಿದ್ಯಾರ್ಥಿ ಹಂತದಿಂದಲೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಆರ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿದ್ದರು.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಸಂಘಟನಾ ಚತುರ, ಪಕ್ಷ ನಿಷ್ಠುರರಾದ ಡಾ. ಮಾ. ನಾಗರಾಜ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಎರಡೇ ತಿಂಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ಒದಗಿ ಬಂದಿದೆ. ಈ ಹುದ್ದೆ ಏರಿದ ಕರ್ನಾಟಕದ 2ನೇಯವರಾಗಿದ್ದು ಡಬಲ್ ಧಮಾಕಾ ಆಗಿದೆ. ಇದು ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ.
ಮಹಾನ ಸಂಘಟಕ:ಹುಬ್ಬಳ್ಳಿ ವಿದ್ಯಾನಗರ ನಿವಾಸಿಯಾಗಿರುವ ಮಾ. ನಾಗರಾಜ ಅವರು, ರಾಜ್ಯದ ಪ್ರಬಲ ಕುರುಬ ಸಮುದಾಯಕ್ಕೆ ಸೇರಿದವರು. ವಿದ್ಯಾರ್ಥಿ ಹಂತದಿಂದಲೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಆರ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿದ್ದ ಅವರು, ವಿದ್ಯಾರ್ಥಿ ಪರಿಷತ್‌ನ ರಾಜ್ಯಾಧ್ಯಕ್ಷ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಬಿವಿಬಿಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು, ಸಿವಿಲ್ ಎಂಜಿನಿಯರ್ ಸಂಘದ ಅಧ್ಯಕ್ಷ ಹಾಗೂ ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕೆಪಿಎಸ್‌ಸಿ ಸದಸ್ಯರಾಗಿ 6 ವರ್ಷ ಕೆಲಸ ಸಲ್ಲಿಸಿರುವ ಮಾ. ನಾಗರಾಜ, ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ತಮ್ಮದೇ ತಂತ್ರಗಾರಿಕೆಯೊಂದಿಗೆ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡವರು. ಪಕ್ಷ ಸಂಘಟನೆ, ಕಾರ್ಯಕರ್ತರನ್ನು ಹುರಿದುಂಬಿಸುವಲ್ಲಿ ಮುಂಚೂಣಿಯಲ್ಲಿದ್ದ ಇವರು ರಾಜ್ಯದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನ ನಿರ್ಮಾಣ ಸಮಿತಿಯ ಉಸ್ತುವಾರಿಯಾಗಿಯೂ ಸಫಲರಾದವರು. ಆರ್‌ಎಸ್ಎಸ್ ಹಿನ್ನೆಲೆಯುಳ್ಳ ಮಾ.ನಾಗರಾಜ ಅವರು, 2016ರಲ್ಲಿ ನಡೆದಿದ್ದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ್ದ ಇವರು ಅಂದು ಜೆಡಿಎಸ್‌ನಲ್ಲಿದ್ದ ಬಸವರಾಜ ಹೊರಟ್ಟಿ ಅವರ ವಿರುದ್ಧ ಸೋಲು ಅನುಭವಿಸಿದ್ದರು.ಜೂನ್‌ನಲ್ಲಿ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದ ಇವರಿಗೆ ಇದೀಗ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಪಟ್ಟ ಲಭಿಸಿದೆ.
ಕರ್ನಾಟಕದ ಎರಡನೆಯವರು:2014ರಲ್ಲಿ ಅಮಿತ್ ಶಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಇದೀಗ ಮಾ. ನಾಗರಾಜ ರಾಜ್ಯದ 2ನೇ ಯವರಾದ ಇವರು ಹುಬ್ಬಳ್ಳಿಯ ಮೊದಲಿಗರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷನಾಗಿ ಆಯ್ಕೆಯಾಗಿರುವುದು ಖುಷಿ ತಂದಿದೆ. ಯಾವುದನ್ನೂ ನಾನು ನಿರೀಕ್ಷೆ ಮಾಡಿರಲಿಲ್ಲ. ಎಲ್ಲವೂ ಅನಿರೀಕ್ಷಿತವಾಗಿ ನಡೆದಿದೆ. ರಾಷ್ಟ್ರೀಯ ನಾಯಕತ್ವ, ನನ್ನ ಮೇಲೆ ವಿಶ್ವಾವಿಟ್ಟು ಅತ್ಯಂತ ಗುರುತರವಾದ ಜವಾಬ್ದಾರಿ ಕೊಟ್ಟಿದೆ. ಒಬ್ಬ ಹಿಂದುಳಿದ ವರ್ಗದ ವ್ಯಕ್ತಿಯನ್ನು ಪಕ್ಷ ಗುರುತಿಸಿ ಬಹುದೊಡ್ಡ ಜವಾಬ್ದಾರಿ ನೀಡಿದೆ.ಮಾ. ನಾಗರಾಜ, ರಾಜ್ಯಸಭಾ ಸದಸ್ಯರು