ಹಳೇ ಶಿವಪ್ಪನಾಯಕ ಮಾರುಕಟ್ಟೆಯಲ್ಲಿದ್ದ ಹೂವಿನ ವ್ಯಾಪಾರಿಗಳಿಗೆ ಹೊಸ ಕಟ್ಟಡದಲ್ಲಿ ಸಿಗುವ ಜಾಗದ ಕನಸು ಈಗ ನನಸಾಗಿದ್ದು, ಜಿಲ್ಲಾಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಳೇ ಶಿವಪ್ಪನಾಯಕ ಮಾರುಕಟ್ಟೆಯಲ್ಲಿದ್ದ ಹೂವಿನ ವ್ಯಾಪಾರಿಗಳಿಗೆ ಹೊಸ ಕಟ್ಟಡದಲ್ಲಿ ಸಿಗುವ ಜಾಗದ ಕನಸು ಈಗ ನನಸಾಗಿದ್ದು, ಜಿಲ್ಲಾಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 17 ವರ್ಷಗಳ ಹಿಂದೆ ಶಿವಪ್ಪನಾಯಕ ಮಾರುಕಟ್ಟೆಯ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ 117 ಹೂವಿನ ವ್ಯಾಪಾರಿಗಳು ಹಾಗೂ ಕೆಲವು ಗ್ರಂಥಿಕೆ ವ್ಯಾಪಾರಿಗಳನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಈಗ ಅವರಿಗೆ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಅವಕಾಶ ಕಲ್ಪಿಸುವುದರ ಮೂಲಕ ನೆನೆಗುದಿಗೆ ಬಿದ್ದಿದ್ದ ಹೂವಿನ ವ್ಯಾಪಾರಿಗಳ ಬಹುವರ್ಷಗಳ ಕನಸನ್ನು ಮಹಾನಗರಪಾಲಿಕೆ ನನಸಾಗಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಬುಧವಾರ ಆದೇಶ ನೀಡಿದ್ದಾರೆ ಎಂದು ಹೇಳಿದರು.

ಅಂದಿನ ನಗರಸಭೆ, ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರ ಹಾಗೂ ಅಂದಿನ ಶಾಸಕರೆಲ್ಲರೂ ಸೇರಿ ಈ ಹೂವಿನ ವ್ಯಾಪಾರಿಗಳಿಗೆ ಪುನರ್‌ವಸತಿ ಕಲ್ಪಿಸುವ ದೃಷ್ಟಿಯಿಂದ ಒಂದು ಹೊಸ ರೂಪಕೊಡುವ ಕೆಲಸ ಮಾಡಲಾಗಿತ್ತು. ಅವರಿಗೆ ಬದಲಿ ವ್ಯವಸ್ಥೆ ಕೊಡುವ ನಿರ್ಧಾರವನ್ನು ಜಿಲ್ಲಾಧಿಕಾರಿಗಳು ಬಾಡಿಗೆ ನಿಗದಿ ಮಾಡಿ, ಡಿ.31ರಂದು ಆದೇಶ ಮಾಡುವುದರೊಂದಿಗೆ ಸಾಕಾರಗೊಂಡಿದೆ. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪಂಕಜ್‌ಕುಮಾರ್ ಪಾಂಡೆ ಅವರ ಅವಧಿಯಲ್ಲಿ ಈ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ಕಾರ್ಯ ಆರಂಭವಾಗಿತ್ತು. ಹಳೇ ಕಟ್ಟಡದಲ್ಲಿ ಹೂವಿನ ವ್ಯಾಪಾರಿಗಳಲ್ಲದೆ, ಬೇರೆ ಬೇರೆ ಬ್ಯಾಂಕುಗಳು, ರಾಜಕೀಯ ಪಕ್ಷ ಹಾಗೂ ಇನ್ನಿತರ ಸರ್ಕಾರಿ ಕಚೇರಿಗಳೂ ಇದ್ದವು. ಇವರಿಗೆ ಗಾರ್ಡನ್ ಏರಿಯಾದ ಪಾಲಿಕೆಯ ಹೊಸ ವಾಣಿಜ್ಯ ಸಂಕೀರ್ಣದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದರು.

ಹೂವಿನ ವ್ಯಾಪಾರಿಗಳಿಗೆ 12 ವರ್ಷದ ಒಡಂಬಡಿಕೆಯೊಂದಿಗೆ ಹೊಸ ಕಟ್ಟಡದಲ್ಲಿ ಮಳಿಗೆ ನೀಡಲಾಗುತ್ತದೆ. ಮಾಸಿಕ 5337 ರು. ಬಾಡಿಗೆ ಹಾಗೂ 1,15,351 ರು. ಠೇವಣಿ ಪಡೆದುಕೊಂಡು ಮಳಿಗೆ ನೀಡಲಾಗುವುದು. 12 ವರ್ಷಗಳ ನಂತರ ಅವರು ಅಂದಿನ ನಿಯಮದ ಪ್ರಕಾರ ಬಾಡಿಗೆ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಈ 117 ವ್ಯಾಪಾರಿಗಳಿಗೆ ನೀಡುವ ಪುನರ್‌ವಸತಿ ಇದಾಗಿದ್ದು, ಅವರಿಗೆ ಮಳಿಗೆಗಳನ್ನು ಹಂಚಿದ ಬಳಿಕ ಉಳಿಯುವ ಮಳಿಗೆಗಳಿಗೆ ಹರಾಜು ಮೂಲಕ ಅವುಗಳನ್ನು ನೀಡಲಾಗುವುದು. ಹಳೇ ತಾಲೂಕು ಕಚೇರಿ ರಸ್ತೆಯಲ್ಲಿ ಈಗಿರುವ ಹೂವಿನ ವ್ಯಾಪಾರಿಗಳು ಇನ್ನು ಮುಂದೆ ಅಲ್ಲಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬೇಕು. ಆ ರಸ್ತೆಯಲ್ಲಿ ಯಾವುದೇ ಹೊಸ ಹೂವಿನ ವ್ಯಾಪಾರಿಗಳಿಗಾಗಲಿ, ಹಣ್ಣಿನ ವ್ಯಾಪಾರಿಗಳಿಗಾಗಲಿ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಈಗಾಗಲೇ ಕಾರ್ಯೋನ್ಮುಖರಾಗಿದ್ದು, ಆ ರಸ್ತೆಯನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ ಎಂದು ತಿಳಿಸಿದರು.

ಗೌರವ ಲಾಡ್ಜ್ ಬಳಿ ಇರುವ ಪಾಲಿಕೆ ಕಟ್ಟಡದಲ್ಲಿ ಹಿಂದಿನ ಮಾರುಕಟ್ಟೆ ಕೆಡವಿದಾಗ ಅಲ್ಲಿದ್ದ ಸಂಘ-ಸಂಸ್ಥೆಗಳ ಕಚೇರಿಗಳಿಗೆ ಈ ಕಟ್ಟಡದಲ್ಲಿ ಅವಕಾಶ ನೀಡಲಾಗುವುದು ಎಂದರು.

ಶಿವಪ್ಪನಾಯಕ-ಅಮೀರ್ ಅಹ್ಮದ್ ವೃತ್ತದಲ್ಲಿರುವ ಅಂಡರ್‌ಪಾಸ್ ಬಳಕೆಗೆ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಹರಾಜಿನ ಮೂಲಕ ಮಹಿಳಾ ಬಜಾರ್ ಆರಂಭಿಸುವ ಬಗ್ಗೆಯೂ ವಿಚಾರ ವಿನಿಮಯ ನಡೆಯುತ್ತಿದ್ದು, ಕೆಆರ್‌ಪುರಂನಲ್ಲಿ ಕನ್ಸರ್‌ವೆನ್ಸಿ ಅಭಿವೃದ್ಧಿಪಡಿಸಿ ಅವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ ಅವರು, ಬಹುವರ್ಷಗಳಿಂದ ನೆನೆಗುದಿಗೆ ಬಿದ್ದ ಹೂವಿನ ವ್ಯಾಪಾರಿಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶ್ರಮಿಸಿದ ಪಾಲಿಕೆ ಆಯುಕ್ತ ಮತ್ತು ಜಿಲ್ಲಾಧಿಕಾರಿಗಳನ್ನು ಶಾಸಕರು ಅಭಿನಂದಿಸಿದರು. ಪಾಲಿಕೆಯ ನಿರ್ಮಿತ ಗಾಂಧಿನಗರದ ವಾಣಿಜ್ಯ ಸಂಕೀರ್ಣ ಮತ್ತು ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣದ ಹರಾಜು ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಮೋಹನ್‌ರೆಡ್ಡಿ, ಪ್ರಮುಖರಾದ ಜ್ಞಾನೇಶ್ವರ, ದೀನ್‌ದಯಾಳ್, ಶ್ರೀನಾಗ, ಮುರಳಿ, ವಿಶ್ವನಾಥ್, ಎನ್.ಜೆ. ನಾಗರಾಜ್ ಇದ್ದರು.