ಗುಂಡ್ಲುಪೇಟೆ ಪೊಲೀಸ್‌ ಠಾಣೆ ಮುಂದೆ ಶವ ಇಟ್ಟುಕೊಂಡು ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಯುವಕರಿಬ್ಬರ ಗಲಾಟೆ ವಿಕೋಪಕ್ಕೆ ಹೋಗಿ ಓರ್ವ ಯುವಕ ಬಲಿಯಾದ ಘಟನೆ ಸೋಮವಾರ ರಾತ್ರಿ ಪಟ್ಟಣದ ಮದ್ದಾನೇಶ್ವರ ವಿದ್ಯಾ ಸಂಸ್ಥೆಯ ಬಳಿ ನಡೆದಿದ್ದು, ಪಟ್ಟಣದಲ್ಲಿ ನಾಗರಿಕರು ಆತಂಕಗೊಂಡಿದ್ದಾರೆ. ಪಟ್ಟಣದ ಜನತಾ ಕಾಲೋನಿ ನಿವಾಸಿ ಯುವಕ ಶಿವು (೩೩) ಮೇಲೆ ಪಟ್ಟಣದ ಮತ್ತೋರ್ವ ನಿಜಾಮುದ್ದೀನ್‌ ಗಲಾಟೆ ಶುರುವಾಗಿ ಹೊಡೆದಾಡಿ ಕೊಂಡಿದ್ದಾರೆ. ನಿಜಾಮುದ್ದೀನ್‌ ಹೊಡೆದ ಏಟಿಗೆ ಕೊಲೆಯಾದ ಯುವಕ ಶಿವು ಎದೆ, ಮುಖಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಗಲಾಟೆ ಬಳಿಕ ಇಬ್ಬರು ಯುವಕರು ಅವರವರ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಶಿವುಗೆ ಸುಮಾರು ಒಂದು ತಾಸಿನ ಬಳಿಕ ಎದೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಸಾಗಿಸುವ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ. ವೈದ್ಯರು ಯುವಕನ ಪ್ರಾಣ ಹೋಗಿದೆ ಎಂದು ಖಚಿತ ಪಡಿಸಿದ್ದಾರೆ. ಕೊಲೆಯಾದ ಶಿವು ಮದ್ದಾನೇಶ್ವರ ವಿದ್ಯಾಸಂಸ್ಥೆ ಮುಂದೆ ಏರು ಧನಿಯಲ್ಲಿ ಮಾತನಾಡುತ್ತಿದ್ದ ನಿಂತಿದ್ದಾಗ ಆ ಮಾರ್ಗದಲ್ಲಿ ಬಂದ ಆರೋಪಿ ನಿಜಾಮುದ್ದೀನ್‌ ಶಿವು ಜೊತೆ ವಾಗ್ವಾದಕ್ಕಿಳಿದು ಮಾತಿಗೆ ಮಾತು ಬೆಳೆದಿದೆ. ಆ ಸಮಯದಲ್ಲಿ ಒಬ್ಬರಿಗೊಬ್ಬರು ಬೈದಾಡುಕೊಂಡು ಹೊಡೆದಾಟ ಮಾಡಿಕೊಂಡಿದ್ದಾರೆ. ಗುಂಡ್ಲುಪೇಟೆ ಪೊಲೀಸ್‌ ಠಾಣೆಯ ಕೂಗಳತೆಯ ದೂರ ಜೊತೆಗೆ ಮೈಸೂರು-ಊಟಿ ಹೆದ್ದಾರಿಯಲ್ಲಿ ಬದಿಯೇ ಹೊಡೆದಾಟ, ಬಡಿದಾಟ ನಡೆದು ಕೊಲೆಯಾದ ಸ್ಥಳವಾಗಿದೆ. ದುರಂತ ಎಂದರೆ ಜೋಡಿ ರಸ್ತೆಯಲ್ಲಿ ಬೀದಿ ದೀಪ ಇಲ್ಲದ ಕಾರಣ ಸಾರ್ವಜನಿಕರು ವಿಡೀಯೋ ಮಾಡಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳ ಮಾತಾಗಿದೆ.ಬೆಚ್ಚಿ ಬಿದ್ದ ಜನ:ಪಟ್ಟಣದಲ್ಲಿ ಕ್ಷುಲ್ಲಕದ ವಿಷಯಗಳಿಗೆ ಗಲಾಟೆ ನಡೆದು ಕೊಲೆಯಾಗಿದೆ ಎಂಬ ವಿಷಯ ತಿಳಿದ ಪಟ್ಟಣದ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ. ಸ್ಥಳೀಯ ಪೊಲೀಸರು ನಿರಂತರ ಗಸ್ತು ನಡೆಸುತ್ತಿಲ್ಲ. ಹೈ ಪಾಟ್ರಾಲ್‌ ವಾಹನಗಳ ಹೆದ್ದಾರಿ ನಿಲ್ಲುತ್ತಿಲ್ಲ. ಪ್ರಮುಖ ವೃತ್ತಗಳಲ್ಲಿ ಪೊಲೀಸರು ನಿಲ್ಲುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಯುವಕನ ಕೊಲೆ ಸಂಬಂಧ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಯುವಕ ಶಿವು ಕೊಲೆ ಸಂಬಂಧ ನಿಜಾಮುದ್ದೀನ್‌ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದು, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ಪೊಲೀಸರು ಖಡಕ್‌ ಆಗಲಿ: ಪಟ್ಟಣದಲ್ಲಿ ಕುಡುಕರ ಹಾವಳಿ ಜೊತೆಗೆ ಗಾಂಜಾ ಘಾಟು ಇರುವುದರಿಂದಲೇ ಗಲಾಟೆಗೆ ಪ್ರಮುಖ ಕಾರಣವಾಗಿದೆ ಪೊಲೀಸರು ಗಾಂಜಾ ಮಾರಾಟ ಗೊತ್ತಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ. ಪೊಲೀಸರು ತುಸು ಖಡಕ್‌ ಆಗದಿದ್ದಲ್ಲಿ ಇಂಥ ಘಟನೆಗಳು ಮರುಕಳುಹಿಸುತ್ತವೆ. ಪಟ್ಟಣದಲ್ಲಿ ಗಾಂಜಾ ಮಾರಾಟಕ್ಕೆ ಬ್ರೇಕ್‌ ಹಾಕಬೇಕು ಅಲ್ಲದೆ ಕುಡುಕರ ಹಾವಳಿಗೂ ಕಡಿವಾಣ ಹಾಕಬೇಕಿದೆ.ಪೊಲೀಸ್‌ ಠಾಣೆ ಮುಂದೆ ಶವ ಇಟ್ಟು ಪ್ರತಿಭಟನೆ

ಗುಂಡ್ಲುಪೇಟೆ: ಕೊಲೆಯಾದ ಯುವಕ ಶಿವು ಮೇಲೆ ಹಲ್ಲೆ ಮಾಡಿದ್ದು ಒಬ್ಬನಲ್ಲ, ಇನ್ನೂ ಹಲವು ಆರೋಪಿಗಳಿದ್ದಾರೆ. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪೊಲೀಸ್‌ ಠಾಣೆಗೆ ಶವದೊಂದಿಗೆ ಮುತ್ತಿಗೆ ಹಾಕಲು ಜನರು ಪ್ರಯತ್ನಿಸಿ, ಠಾಣೆ ಮುಂದೆ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.

ಶವ ಪರೀಕ್ಷೆ ಬಳಿಕ ಶವದ ವಾಹನದೊಂದಿಗೆ ಠಾಣೆಯತ್ತ ಹಿಂದೂ ಜಾಗರಣಾ ವೇದಿಕೆಯ ನಂದೀಶ್‌, ಜಾರಕಿಹೊಳಿ ಬ್ರಿಗೇಡ್‌ನ ಗೋವಿಂದರಾಜು, ಬಿಜೆಪಿ ಮುಖಂಡ ಪ್ರಣಯ್‌ ಹಾಗೂ ನಾಗೇಂದ್ರ, ರಾಜೇಂದ್ರ ನಾಯಕ್ ನೇತೃತ್ವದಲ್ಲಿ ಯುವಕರು ಆಗಮಿಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಅವಕಾಶ ಕೊಡದ ಹಿನ್ನೆಲೆ ಠಾಣೆಯ ಮುಂಭಾಗವೇ ಶವದೊಂದಿಗೆ ಪ್ರತಿಭಟಿಸಿದರು.

ಎಸ್ಪಿ ಶಿವು ಹಲ್ಲೆ ಪ್ರಕರಣದಲ್ಲಿ ಆರೋಪಿ ಓರ್ವ ಎಂದು ಹೇಳಿರುವುದು ಸರಿಯಲ್ಲ. ಶಿವುನನ್ನು ಓರ್ವ ಹಲ್ಲೆ ಮಾಡಲು ಆಗುವುದಿಲ್ಲ. ಬಂಧಿತ ಆರೋಪಿಯೊಂದಿಗೆ ನಾಲ್ಕೈದು ಮಂದಿ ಆರೋಪಿಗಳಿದ್ದರು ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಪ್ರತಿಭಟನಕಾರರ ಒತ್ತಾಯದ ಮೇರೆಗೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಮಾತನಾಡಿ, ನೀವು ದೂರಿನಲ್ಲಿ ಎಷ್ಟು ಅಂತ ಹೇಳುತ್ತಿರೋ ಅಷ್ಟು ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರೂ ಪ್ರತಿಭಟನಾಕಾರರು ಎಸ್ಪಿ ಮಾತಿಗೆ ಮಣಿಯದೇ ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆ ನಂದೀಶ್‌ ಮಾತನಾಡಿ, ಎಸ್ಪಿ ಅವರು ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್‌ ಸರಿಯಲ್ಲ ಎಂದು ವಾದಿಸಿದರು.

ಸಂಚಾರ ವ್ಯತ್ಯಯ:

ಗುಂಡ್ಲುಪೇಟೆ ಠಾಣೆಯ ಮುಂದೆ ಪ್ರತಿಭಟನೆ ನಡೆಯುವ ವೇಳೆ ಬರಗಿ ರಸ್ತೆಯಲ್ಲಿ ಸಂಚರಬೇಕಾದ ಸಾರಿಗೆ ಬಸ್‌ಗಳ ಸಂಚಾರ ವ್ಯತ್ಯಯ ಉಂಟಾಗಿತ್ತು. ಪೊಲೀಸರು ಸಂಚಾರಕ್ಕೆ ಅವಕಾಶ ಮಾಡಿ ಕೊಡಬೇಕಿತ್ತು ಎಂದು ಪ್ರಯಾಣಿಕರು ದೂರಿದರು.

ಪರದಾಡಿದ ಪೊಲೀಸರು:

ಶವಪರೀಕ್ಷೆ ಇಟ್ಟು ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಮನವೊಲಿಸಿ ಪ್ರತಿಭಟನೆ ಕೈ ಬಿಡಿಸಲು ಸ್ಥಳೀಯ ಪೊಲೀಸರು ಪರದಾಡಿದ ಪ್ರಸಂಗ ನಡೆಯಿತು. ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಒಬ್ಬರಲ್ಲ, ಇಬ್ಬರು ಎಸ್‌ಬಿಗಳಿದ್ದರೂ ಪ್ರತಿಭಟನಾಕಾರರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪೊಲೀಸ್‌ ಸಿಬ್ಬಂದಿ ಗೊಣಗುತ್ತಿದ್ದರು.

ತಹಸೀಲ್ದಾರ್‌ ಭರವಸೆ ಪ್ರತಿಭಟನೆ ಅಂತ್ಯ

ಪೊಲೀಸ್‌ ಠಾಣೆಯ ಮುಂದೆ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಮಾತಿನ ಬಳಿಕ ಪ್ರತಿಭಟನೆ ವಾಪಸ್‌ ಪಡೆದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಪ್ರತಿಭಟನಾಕಾರರ ಜೊತೆ ಒಂದು ಸುತ್ತು ಮಾತನಾಡಿದರೂ ಪ್ರತಿಭಟನೆ ವಾಪಸ್‌ ಪಡೆದಿರಲಿಲ್ಲ. ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಭೇಟಿ ನೀಡಿ ಹೆಚ್ಚುವರಿ ಪರಿಹಾರಕ್ಕೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಪ್ರತಿಭಟನೆ ಕೈ ಬಿಡಿ ಎಂದಾಗ ಪ್ರತಿಭಟನಾಕಾರರು ಪ್ರತಿಭಟನೆ ಅಂತ್ಯಗೊಳಿಸಿದರು.