ರಾಜಕಾಲುವೆ ಅಭಿವೃದ್ಧಿ ಪಡಿಸುವುದರೊಂದಿಗೆ ನಾಲಾ ಪಕ್ಕದಲ್ಲಿಯೇ 2.5 ಮೀಟರ್‌ ಅಗಲದ ನಡಿಗೆ ಪಥ ಹಾಗೂ ಸೈಕಲ್ ಪಥ ನಿರ್ಮಿಸಲಾಗಿದೆ. ಜತೆಗೆ ವಾಯುವಿಹಾರಿಗಳ ಅನುಕೂಲಕ್ಕಾಗಿ ನೂರಾರು ಆಸನ, ಸಾವಿರಾರು ಎಲ್‌ಇಡಿ ವಿದ್ಯುತ್‌ ಬಲ್ಬ್‌ ಅಳವಡಿಸಲಾಗಿದೆ. ನಾಲ್ಕೈದು ಕಡೆ ಕಿರು ಉದ್ಯಾನ ನಿರ್ಮಿಸಲಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿರುವ ದೇಶದ ಪ್ರಥಮ "ಗ್ರೀನ್‌ ಮೊಬಿಲಿಟಿ ಕಾರಿಡಾರ್‌ " (ಹಸಿರು ಸಂಚಾರಿ ಪಥ) ಉದ್ಘಾಟನೆಗೊಂಡ ನಾಲ್ಕೇ ವರ್ಷಗಳಲ್ಲಿ ಸಂಪೂರ್ಣ ಹಾಳಾಗಿದೆ.

ಕೋಂಟ್ಯತರ ರುಪಾಯಿ ಖರ್ಚು ಮಾಡಿ ನಿರ್ಮಿಸಿದ ಈ ಪಥವೀಗ ಗಿಡ-ಗಂಟಿಗಳ ಸಾಮ್ರಾಜ್ಯವಾಗಿದ್ದು, ವಾಯುವಿಹಾರಿಗಳು ಅತ್ತ ಕಾಲಿಡುತ್ತಿಲ್ಲ.

ಇಲ್ಲಿನ ಉಣಕಲ್ಲ ಕೆರೆಯಿಂದ ಗಬ್ಬೂರು ಕ್ರಾಸ್‌ ವರೆಗೂ 11 ಕಿಮೀ ರಾಜಕಾಲುವೆ ಹರಿಯುತ್ತದೆ. ಮಳೆಗಾಲದಲ್ಲಿ 18 ಕಡೆ ಪ್ರವಾಹ ಉಂಟಾಗಿ ರಾಜಕಾಲುವೆ ಸುತ್ತಮುತ್ತಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು. ಇದನ್ನು ತಡೆಯಲು ರಾಜಕಾಲುವೆ ಅಭಿವೃದ್ಧಿಗೊಳಿಸಿ ಸುಂದರ ವಾಯುವಿಹಾರಿಗಳ ತಾಣ ಮಾಡುವ ಉದ್ದೇಶದಿಂದ ₹130 ಕೋಟಿ ವೆಚ್ಚದಲ್ಲಿ ದೇಶದಲ್ಲೇ ಮೊದಲ ಬಾರಿಗೆ "ಹಸಿರು ಸಂಚಾರಿ ಪಥ " ನಿರ್ಮಿಸಲು ಉದ್ದೇಶಿಸಿ ಸ್ಮಾರ್ಟ್‌ಸಿಟಿ ಯೋಜನೆಯಡಿ 2020ರಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಯಿತು.

ಏನೆಲ್ಲ ಇದೆ:

ರಾಜಕಾಲುವೆ ಅಭಿವೃದ್ಧಿ ಪಡಿಸುವುದರೊಂದಿಗೆ ನಾಲಾ ಪಕ್ಕದಲ್ಲಿಯೇ 2.5 ಮೀಟರ್‌ ಅಗಲದ ನಡಿಗೆ ಪಥ ಹಾಗೂ ಸೈಕಲ್ ಪಥ ನಿರ್ಮಿಸಲಾಗಿದೆ. ಜತೆಗೆ ವಾಯುವಿಹಾರಿಗಳ ಅನುಕೂಲಕ್ಕಾಗಿ ನೂರಾರು ಆಸನ, ಸಾವಿರಾರು ಎಲ್‌ಇಡಿ ವಿದ್ಯುತ್‌ ಬಲ್ಬ್‌ ಅಳವಡಿಸಲಾಗಿದೆ. ನಾಲ್ಕೈದು ಕಡೆ ಕಿರು ಉದ್ಯಾನ ನಿರ್ಮಿಸಲಾಗಿದೆ.

ಮೊದಲ ಹಂತದಲ್ಲಿ ₹8 ಕೋಟಿ ವೆಚ್ಚದಲ್ಲಿ 0.6 ಕಿ.ಮೀ (650 ಮೀಟರ್), 2ನೇ ಹಂತದಲ್ಲಿ ₹ 96 ಕೋಟಿ ವೆಚ್ಚದಲ್ಲಿ 4.4 ಕಿಮೀ ಕಾಮಗಾರಿ ಪೂರ್ಣಗೊಂಡಿದೆ. 3ನೇ ಹಂತದಲ್ಲಿ ಕಾರವಾರ ರಸ್ತೆಯಿಂದ ಹಳೆ ಹುಬ್ಬಳ್ಳಿ ಬ್ರಿಡ್ಜ್‌ ವರೆಗೆ ₹24 ಕೋಟಿ ವೆಚ್ಚದಲ್ಲಿ 2 ಕಿಮೀ ಉದ್ದದ ನಾಲಾ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಆ ಕಾಮಗಾರಿ ಪೂರ್ಣಗೊಂಡಿಲ್ಲ. ಗಿಡ-ಗಂಟಿಗಳ ಅಧ್ವಾನ

ಉಣಕಲ್ಲನಿಂದ ಲಿಂಗರಾಜ ನಗರದಲ್ಲಿ ಮೊದಲ ಹಂತದಲ್ಲಿ ನಿರ್ಮಿಸಿರುವ ಗ್ರೀನ್‌ ಮೊಬಿಲಿಟಿ ಕಾರಿಡಾರ್‌ ಸಂಪೂರ್ಣ ಹಾಳಾಗಿದೆ. ಉಣಕಲ್ಲಿನ ಆರಂಭದಲ್ಲಿ 50 ಮೀಟರ್‌ನಷ್ಟು ಮಾತ್ರ ನಡಿಗೆ ಪಥ ಶುಚಿಯಾಗಿದೆ. ಮುಂದೆ ಹೋದಂತೆ ಅದ್ವಾನ ಕಣ್ಣಿಗೆ ಕಾಣುತ್ತದೆ. ನಡಿಗೆ ಪಥದಲ್ಲಿ ಎಲ್ಲೆಂದರಲ್ಲಿ ಗಿಡ-ಗಂಟಿ ಬೆಳೆದು, ರಸ್ತೆಯುದ್ದಕ್ಕೂ ಬಾಗಿ ವಾಯುವಿಹಾರಿಗಳು ಸಂಚರಿಸಲು ಆಗದಂತಾಗಿದೆ.

ರಸ್ತೆಯುದ್ದಕ್ಕೂ ಗಿಡದ ಎಲೆ ಬಿದ್ದು ಕೊಳೆತು ದುರ್ನಾತ ಬೀರುತ್ತಿದೆ. ಈ ಕಾರಿಡಾರ್‌ನ ಎಲ್ಇಡಿ ಬಲ್ಬ್‌ ರಾತ್ರಿ ಸರಿಯಾಗಿ ಬೆಳೆಗುತ್ತಿಲ್ಲ. ಇನ್ನು ಸಂಚಾರಿ ಪಥದ ಮುಖ್ಯದ್ವಾರದಲ್ಲಿ ಅಳವಡಿಸಿದ್ದ ಗೇಟ್‌ಗಳ ಸ್ಥಿತಿಯಂತೂ ಹೇಳತೀರದಾಗಿದೆ. ಹಲವೆಡೆ ಈ ಕಾರಿಡಾರನ್ನೇ ಸಾರ್ವಜನಿಕರು ಕಸದ ತೊಟ್ಟಿಯಾಗಿ ಮಾರ್ಪಡಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ನಿವಾಸಿಗಳು ಈ ಸಂಚಾರಿ ಪಥದ ಅಕ್ಕಪಕ್ಕದಲ್ಲಿ ಕಸ ತಂದು ಎಸೆಯುತ್ತಿದ್ದಾರೆ. ಕೋಟ್ಯಂತ ರುಪಾಯಿ ಖರ್ಚು ಮಾಡಿ ಯಾವ ಉದ್ದೇಶಕ್ಕಾಗಿ ಈ ಹಸಿರು ಸಂಚಾರಿ ಪಥ ನಿರ್ಮಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನಿರ್ಮಾಣವಾದ 3-4 ವರ್ಷಗಳಲ್ಲಿ ಸಂಪೂರ್ಣ ಹಾಳಾಗಿದೆ. ಇಲ್ಲಿ ವಾಯುವಿಹಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಶ್ರೀನಾಥ ಕಲ್ಲೂರ, ವಾಯುವಿಹಾರಿ