ಸಾರಾಂಶ
ನಿರಂತರ ಮಳೆಗೆ ಪಕ್ಕದ ಮನೆ ಗೋಡೆ ನೆನೆದು ಕುಸಿದು ಬಿದ್ದ ಪರಿಣಾಮ ಮನೆಯ ಯಜಮಾನ ಯಲ್ಲಪ್ಪ ಹಿಪ್ಪಿಯವರ ಮೃತಪಟ್ಟಿದ್ದು, ಇಡೀ ಕುಟುಂಬ ದಿಕ್ಕು ದೋಚದೇ ಮತ್ತೊಬ್ಬರನ್ನು ಅಂಗಲಾಚುವ ಸ್ಥಿತಿ ಉಂಟಾಗಿದೆ.
ಕನ್ನಡಪ್ರಭ ವಾರ್ತೆ ಧಾರವಾಡ
ಕೆಲವೊಮ್ಮೆ ಯಾರದ್ದೋ ತಪ್ಪಿನಿಂದಾಗಿ ಯಾರಿಗೋ ಶಿಕ್ಷೆ ಆಗುತ್ತದೆ. ಅದೇ ರೀತಿ ವೆಂಕಟಾಪುರದಲ್ಲಿ ಎರಡು ದಿನಗಳ ಹಿಂದಷ್ಟೇ ಪಕ್ಕದ ಮನೆಯೊಂದರ ಗೋಡೆ ಕುಸಿದು ತಮ್ಮದಲ್ಲದ ತಪ್ಪಿಗೆ ಹಿಪ್ಪಿಯವರ ಕುಟಂಬ ತೀವ್ರವಾಗಿ ರೋಧಿಸುವಂತಾಗಿದೆ.ನಿರಂತರ ಮಳೆಗೆ ಪಕ್ಕದ ಮನೆ ಗೋಡೆ ನೆನೆದು ಕುಸಿದು ಬಿದ್ದ ಪರಿಣಾಮ ಮನೆಯ ಯಜಮಾನ ಯಲ್ಲಪ್ಪ ಹಿಪ್ಪಿಯವರ ಮೃತಪಟ್ಟಿದ್ದು, ಇಡೀ ಕುಟುಂಬ ದಿಕ್ಕು ದೋಚದೇ ಮತ್ತೊಬ್ಬರನ್ನು ಅಂಗಲಾಚುವ ಸ್ಥಿತಿ ಉಂಟಾಗಿದೆ. ಮನೆ ಯಜಮಾನ ಮೃತಪಟ್ಟಿದ್ದಲ್ಲದೇ ಆತನ ಹೆಂಡತಿ ಹನುಮವ್ವ ಹಾಗೂ ಪುತ್ರಿ ಯಲ್ಲವ್ವ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿದ್ದಾರೆ. ಇನ್ನೊರ್ವ ಪುತ್ರಿ ಸುಮಿತ್ರಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ರಾಜ್ಯ ಸರ್ಕಾರ ಸೇರಿದಂತೆ ಜನಪ್ರತಿನಿಧಿಗಳು ಪರಿಹಾರ ನೀಡಿದ್ದಾರೆ. ಆದರೆ, ಮನೆ ಯಜಮಾನನ್ನು ಕಳೆದುಕೊಂಡ ಕುಟುಂಬಕ್ಕೆ ಯಜಮಾನನೇ ಇಲ್ಲದಾಗಿದ್ದು, ಕುಟುಂಬದ ಆಧಾಸ್ತಂಬ ಅಪ್ಪ ನಮ್ಮನ್ನು ಬಿಟ್ಟು ಹೋದರೆ, ಸಲುಹಬೇಕಾದ ತಾಯಿ ಮತ್ತು ಅಕ್ಕ ಆಸ್ಪತ್ರೆಯಲಿದ್ದಾರೆ. ಇದು ನಮ್ಮ ಕುಟುಂಬದ ದೌರ್ಭಾಗ್ಯ. ಬರೀ ಬಡವರಿಗೆ ಕಷ್ಟಗಳು ಬರುತ್ತಾವೆಯೇ? ಎಂದು ದೈವವನ್ನು ಶಪಿಸುತ್ತಾಳೆ ಯಲ್ಲಪ್ಪನ ಎರಡನೇ ಮಗಳು ಸುಮಿತ್ರಾ.ಅಪ್ಪ ಕೃಷಿ ಕಾರ್ಮಿಕ. ಅವ್ವ ವ್ಯಾಪಾರ ಮಾಡುತ್ತಿದ್ದಳು. ಅಕ್ಕನದು ಮನೆ ಕೆಲಸ. ಈಗ ಅಪ್ಪ ಇಲ್ಲ. ಅವ್ವ-ಅಕ್ಕ ಆಸ್ಪತ್ರೆಯಲ್ಲಿದ್ದು, ಜೀವನ ದುಸ್ತರವಾಗಿದೆ. ಸದ್ಯಕ್ಕೆ ಪರಿಹಾರ ಹಣ ಬಂದಿದೆ. ಮನೆ ಕಟ್ಟಿಕೊಡುವ ಭರವಸೆ ಸಹ ನೀಡಿದ್ದಾರೆ. ಆದರೆ, ನಮ್ಮಪ್ಪ ಇಲ್ಲದೇ ಇದನ್ನೆಲ್ಲಾ ತೆಗೆದುಕೊಂಡು ಏನು ಮಾಡೋದು ಎಂದು ಸುಮಿತ್ರಾ ಹಿಪ್ಪಿಯವರ ಮತ್ತಷ್ಟು ಬೇಸರ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಮಳೆಗಾಲದಲ್ಲಿ ಹಳೆಯ ಅದರಲ್ಲೂ ಮಣ್ಣಿನ ಗೋಡೆಗಳು ಕುಸಿಯಲಿವೆ. ಪ್ರತಿ ವರ್ಷವೂ ಈ ರೀತಿ ಅನಾಹುತಗಳು ಸಂಭವಿಸುತ್ತವೆ. ಅನಾಹುತ ಆದ ನಂತರ ಅವರ ಕುಟುಂಬಕ್ಕೆ ಜಿಲ್ಲಾಡಳಿತವು ಪರಿಹಾರ ನೀಡುವುದು, ಕಾಳಜಿ ಕೇಂದ್ರ ತೆಗೆಯುವ ಬದಲು, ಮಳೆಗಾಲದ ಮುಂಚಿತವಾಗಿ ಗ್ರಾಪಂ ಮೂಲಕ ಇಂತಹ ಮನೆಗಳ ಸಮೀಕ್ಷೆ ಮಾಡಿಸಿ ಆ ಕುಟುಂಬಕ್ಕೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಸುವುದು ಸೂಕ್ತ ಎಂಬ ಸಲಹೆಗಳನ್ನು ಕೆಲವರು ನೀಡಿದ್ದು, ಉಸ್ತುವಾರಿ ಸಚಿವ ಸೋಮವಾರ ಹಿಪ್ಪಿಯವರ ಕುಟುಂಬಕ್ಕೆ ಸಾಂತ್ವಾನ ಹೇಳಿ ಈ ಸಲಹೆ ಬಗ್ಗೆ ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದರು.