ಸಾರಾಂಶ
ಹಂಪಿ ಮೂಲಕ ಬೆಳ್ಳಾವೆಯನ್ನು ಇದೇ ನ.17ರಂದು ತಲುಪಿದಾಗ 14850 ಕಿ.ಮೀ. ನಷ್ಟಾಗಿದೆ.
ಕಂಪ್ಲಿ: ರೈತರ ಏಳಿಗೆ, ದೇಶದ ಒಳಿತಿಗಾಗಿ ಸಂಕಲ್ಪಿಸಿ ಯುವಕನೊಬ್ಬ ಕಂಪ್ಲಿ ಮೂಲಕ ಸಾಗಿ ಸೈಕಲ್ ತುಳಿವ ಮೂಲಕ ಹನ್ನೆರೆಡು ಜ್ಯೋತಿರ್ಲಿಂಗ, ಚಾರ್‌ರ್ಧಾಮ್ ವೀಕ್ಷಿಸಿದ್ದಾನೆ.
ಪಿ.ಯು.ಶಿವಾನಂದ (27) ಎನ್ನುವ ಬಿಕಾಂ ಪದವೀಧರನೊಬ್ಬ ತುಮಕೂರು ಜಿಲ್ಲೆಯ ಬೆಳ್ಳಾವೆ ಗ್ರಾಮದಿಂದ 2024ರ ಜೂ.2ರಿಂದ ಸೈಕಲ್‌ಯಾತ್ರೆ ಆರಂಭಿಸಿ, ರಾಮೇಶ್ವರಂ-ಶ್ರೀಶೈಲಂ ಮಲ್ಲಿಕಾರ್ಜುನ, ತೆಲಂಗಾಣ ಮೂಲಕ ಗ್ರಿಷ್ಮೇಶ್ವರ, ಭೀಮಶಂಕರ, ತ್ರ್ಯಯಂಬಕೇಶ್ವರ, ಸೋಮನಾಥ, ದ್ವಾರಕ, ನಾಗೇಶ್ವರ್, ಓಂಕಾರೇಶ್ವರ, ಮಹಾಕಾಲೇಶ್ವರ, ಮಥುರ ಬೃಂದಾವನ, ಉತ್ತರಕಾಂಡದ ಕೇದಾರನಾಥ ಭದ್ರಿನಾಥ, ಆಯೋಧ್ಯೆ ರಾಮಮಂದಿರ, ಕಾಶಿ, ನೇಪಾಳ ಪಶುಪತಿ, ಜಾನಕಿ ಮಂದಿರ, ಝಾರ್ಕಂಡ್ ವೈದ್ಯನಾಥ, ಬಾಂಗ್ಲ ಬಾರ್ಡರ್ ಮೂಲಕ ಪುರಿ ಜಗನ್ನಾಥದಿಂದ ಮಂತ್ರಾಲಯ ರಾಯರ ದರ್ಶನ ಪಡೆದು ಕಂಪ್ಲಿ ಮೂಲಕ ಅಂಜನಾದ್ರಿಯತ್ತ ಸಾಗಿದ್ದಾನೆ.ಹಿರೋ ಗೇರ್‌ಸೈಕಲ್ ಬಳಸಿಕೊಂಡು ನಿತ್ಯ 90ರಿಂದ 120 ಕಿ.ಮೀ.ನಷ್ಟು ನಿರಂತರ ಕ್ರಮಿಸುವ ಮೂಲಕ ಈತ 14,600 ಕಿ.ಮೀ.ನಷ್ಟು ಸುತ್ತಾಡಿದ್ದಾನೆ. ಹಂಪಿ ಮೂಲಕ ಬೆಳ್ಳಾವೆಯನ್ನು ಇದೇ ನ.17ರಂದು ತಲುಪಿದಾಗ 14850 ಕಿ.ಮೀ. ನಷ್ಟಾಗಿದೆ.
ರೈತ, ದೇಶದ ಪ್ರಗತಿಗಾಗಿ ಸಂಕಲ್ಪಿಸಿ ಎಲ್ಲ ಜ್ಯೋತಿರ್ಲಿಂಗಗಳ ದರ್ಶನ ಪಡೆದಿದ್ದೇನೆ. ದಾರಿಯಲ್ಲಿನ ಪರಿಸರ ವೀಕ್ಷಣೆ, ಸ್ಥಳ ವೀಕ್ಷಣೆಯೊಂದಿಗೆ ಪ್ರಕೃತಿ ಸೌಂದರ್ಯ ಅನುಭವಿಸಲು ಸೈಕಲ್ ಯಾತ್ರೆಯಿಂದ ಸಾಧ್ಯವಾಗಿದೆ. ಯಾವುದೇ ಆರೋಗ್ಯ ತೊಂದರೆಯಾಗಿಲ್ಲ. ಸೈಕಲ್‌ನ ಹತ್ತು ಟೈರ್, ಟ್ಯೂಬ್, ಎರಡು ಬಾರಿ ಚೈನ್, ಗೇರ್ ಸಿಸ್ಟಮ್ ಬದಲಿಸಿದ್ದೇನೆ. ನಿತ್ಯ ರಾತ್ರಿ ದೇವಸ್ಥಾನ, ಹೋಟೆಲ್, ಪೆಟ್ರೋಲ್‌ಬಂಕ್, ಡಾಬಾಗಳಲ್ಲಿ ಇಳಿದುಕೊಂಡು ಹೊಟೇಲ್ ಊಟ ಸವಿದಿದ್ದೇನೆ. ಬಟ್ಟೆ, ಬೆಡ್‌ಶಿಟ್, ಸೈಕಲ್ ರಿಪೇರ್ ಸಾಮಾನು, ಟೆಂಟ್ ಸೇರಿ 40 ಕೆಜಿ ತೂಕದ ಪ್ಯಾಕ್ ಜೊತೆಯಲ್ಲಿತ್ತು. ಬೆಳ್ಳಾವೆ ಬಿಡುವಾಗ ಸ್ವಂತ ಹಣ 1000ರೂಪಾಯಿ ಮಾತ್ರ ಇತ್ತು. ದಾರಿಯಲ್ಲಿ ಕೊಟ್ಟವರ ಹಣದ ಸಹಾಯದಿಂದ ದಿನದ ಖರ್ಚು ಕಳೆದಿದ್ದೇನೆ. ಈ ಯಾತ್ರೆ ಯುವಕರಿಗೆ ಪ್ರೇರಣೆಯಾಗಲಿ ಎನ್ನುತ್ತಾನೆ ಶಿವಾನಂದ.