ಎತ್ತಿನಹೊಳೆ ನಾಲೆಗೆ ಹಾರಿ ರೈತ ಆತ್ಮಹತ್ಯೆ

| Published : Dec 10 2024, 12:31 AM IST

ಸಾರಾಂಶ

ಎತ್ತಿನಹೊಳೆ ಭೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತನೊಬ್ಬ ಎತ್ತಿನಹೊಳೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ತಾಲೂಕಿನ ಮಾದೀಹಳ್ಳಿ ಹೋಬಳಿಯ ವಡ್ಡರಹಳ್ಳಿ ಕೊಪ್ಪಲ ಗ್ರಾಮದ ರಂಗಸ್ವಾಮಿ( ೫೫) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಎತ್ತಿನಹೊಳೆ ಕಾಮಗಾರಿ ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಎತ್ತಿನಹೊಳೆ ಭೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತನೊಬ್ಬ ಎತ್ತಿನಹೊಳೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ತಾಲೂಕಿನ ಮಾದೀಹಳ್ಳಿ ಹೋಬಳಿಯ ವಡ್ಡರಹಳ್ಳಿ ಕೊಪ್ಪಲ ಗ್ರಾಮದ ರಂಗಸ್ವಾಮಿ( ೫೫) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಎತ್ತಿನಹೊಳೆ ಕಾಮಗಾರಿ ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಆಗ್ರಹಿಸಿದರು.

ಘಟನೆ ವಿವರ:

ತಾಲೂಕಿನ ಮಾದೀಹಳ್ಳಿ ಹೋಬಳಿಯ ಶಿವಪುರ ಕಾವಲಿನ ಬಳಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದು, ಶಿವಪುರ ಹಾಗೂ ವಡ್ಡರಹಳ್ಳಿ ಕೊಪ್ಪಲು ಗ್ರಾಮದ ಸುಮಾರು ೪೮ ಜನ ರೈತರು ಎತ್ತಿನಹೊಳೆ ಯೋಜನೆಗೆ ಭೂಮಿ ಬಿಟ್ಟುಕೊಟ್ಟಿದ್ದಾರೆ. ಇವರಲ್ಲಿ ಕೆಲವರಿಗೆ ಪರಿಹಾರದ ಹಣ ಬಂದಿದ್ದು ಇನ್ನೂ ಕೆಲವರಿಗೆ ಭೂಮಿ ಪರಿಹಾರ ನೀಡದೆ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದಾಖಲಾತಿಗಳನ್ನು ಭೂಮಿ ಪರಿಹಾರಕ್ಕೆ ನೀಡಿದ್ದರೂ ಇದುವರೆಗೂ ಎತ್ತಿನಹೊಳೆ ಯೋಜನೆಯ ಪರಿಹಾರದ ಹಣ ಸಿಕ್ಕಿಲ್ಲ‌. ರೈತ ಭೂಮಿಯನ್ನು ಕಳೆದುಕೊಂಡು ಪರಿಹಾರ ಸಿಗದೆ ನೊಂದು ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ ಎಂದು ಗ್ರಾಮಸ್ಥರು ಕಿಡಿಕಾರಿದರು.

೧ ಎಕರೆ ೩೫ ಕುಂಟೆ ಜಮೀನು

ರಂಗಸ್ವಾಮಿ ತನಗಿದ್ದ ಅಲ್ಪ ಜಮೀನು ಅಂದರೆ ಸುಮಾರು ೧ ಎಕರೆ ೩೫ ಕುಂಟೆ ಜಮೀನನ್ನು ೨೦೧೮ರಲ್ಲಿ ಎತ್ತಿನಹೊಳೆ ಕಾಮಗಾರಿಗೆ ಭೂಮಿಯನ್ನು ಕೊಟ್ಟಿದ್ದರು. ಈಗಾಗಲೇ ಅವಾರ್ಡ್ ನೋಟಿಸ್ ಸಹ ಆಗಿದ್ದು ಸರ್ವೆ ನಂಬರ್ ೮೦/೨ರಲ್ಲಿ ಇರುವ ಶಿವಪುರ ಕಾವಲಿನ ಜಮೀನಿನ ಸುಮಾರು ೧೫ ಲಕ್ಷ ೪೨ ಸಾವಿರದ ೧೬೫ ರು.ಗಳಿಗೆ ಭೂಸ್ವಾಧೀನ ಅಧಿಕಾರಿಗಳು ಅದನ್ನು ಪಡೆದಿದ್ದು, ಇವರನ್ನು ಪ್ರತಿನಿತ್ಯ ತಮ್ಮ ಕಚೇರಿಗೆ ಅಲೆಸುತ್ತಿದ್ದರು. ನಂತರ ಸುಮಾರು ೬೦ ಸಾವಿರ ಲಂಚ ಪಡೆದು ಪರಿಹಾರದ ಹಣ ನೀಡದೆ ಹಿನ್ನೆಲೆಯಲ್ಲಿ ಮನನೊಂದು ರೈತ ರಂಗಸ್ವಾಮಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾಲುವೆಗೆ ಹಾರಿ ತನ್ನ ಜೀವ ಕಳೆದುಕೊಂಡಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಎತ್ತಿನಹೊಳೆ ಕಾಮಗಾರಿ ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಆಗ್ರಹಿಸಿದರು.

ಲಂಚದ ಆಮಿಷ

ಈ ವೇಳೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಶೇಖರೇಗೌಡ ಹಾಗೂ ಜಗದೀಶ್ ಮಾತನಾಡಿ, ನಮ್ಮ ಶಿವಪುರ ಕಾವಲಿನಲ್ಲಿ ಸುಮಾರು ೪೮ ರೈತರು ಭೂಮಿ ಕಳೆದುಕೊಂಡಿದ್ದು ಇದರಲ್ಲಿ ಸುಮಾರು ೨೪ ಜನರಿಗೆ ಎಲ್ಲಾ ಪರಿಹಾರದ ಹಣ ಬಂದಿದೆ. ಉಳಿದ ೨೪ ದಲಿತ ಕುಟುಂಬದವರಿಗೆ ಒಂದೇ ಒಂದು ರುಪಾಯಿ ಹಣ ಬಂದಿಲ್ಲ. ಸರ್ಕಾರದ ಅವಾರ್ಡ್ ನೊಟೀಸ್ ಜಾರಿಯಾಗಿದ್ದರೂ ಎತ್ತಿನಹೊಳೆ ಅಧಿಕಾರಿಗಳು ಲಂಚದ ಆಮಿಷ ಒಡ್ಡಿ ಸುಮಾರು ೩೦℅ ಪರಿಹಾರ ಬಿಡುಗಡೆ ಮಾಡಲು ಲಂಚ ಕೇಳುತ್ತಿದ್ದು ಇದು ಒಬ್ಬ ಬಡ ರೈತರು ಭೂಮಿ ಕಳೆದುಕೊಂಡು ಪರಿಹಾರದ ಹಣವನ್ನು ಕಳೆದುಕೊಂಡರೆ ಅವರ ಬದುಕು ಹೇಗೆ ಎಂದು ಪ್ರಶ್ನಿಸಿದರು. ಇಲ್ಲಿರುವ ಎಲ್ಲರೂ ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ಎಲ್ಲಾ ಸಚಿವರಿಗೆ ಮನವಿ ಮಾಡಿದ್ದರೂ ಸಹ ಇಲ್ಲಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿಯಾಗಿ ರೈತರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೂಡಲೇ ಇವರಿಗೆ ಸೂಕ್ತ ಪರಿಹಾರ ನೀಡಿ ಈ ಬಡಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಪಟ್ಟುಹಿಡಿದರಲ್ಲದೆ ಯಾವುದೇ ಕಾರಣಕ್ಕೂ ಇಲ್ಲಿಂದ ಶವವನ್ಬು ಎತ್ತಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಎತ್ತಿನಹೊಳೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಹಸೀಲ್ದಾರ್‌ ಎಂ ಮಮತಾ , ಸಿಪಿಐ ಜಗದೀಶ್, ಪಿಎಸ್ಐ ಸಿದ್ದಲಿಂಗ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

* ಬಾಕ್ಸ್‌: ಎತ್ತಿನಹೊಳೆ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಮಾಜಿ ಸಚಿವ:

ವಿಷಯ ತಿಳಿದು ಸ್ಥಳಕ್ಕೆ ಬಂದ ಮಾಜಿ ಸಚಿವ ಬಿ ಶಿವರಾಂ, ಇಲ್ಲಿ ರೈತರನ್ನು ನೀವು ಬದುಕಲು ಬಿಡುವುದಿಲ್ಲ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಒಂದು ನ್ಯಾಯ ಎಂದರಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ ನೀವೇ ಅವರನ್ನು ಕೊಲೆ ಮಾಡುತ್ತಿದ್ದೀರಿ. ಅವರಿಗೆ ನೀಡುವ ಅಲ್ಪಸ್ವಲ್ಪ ಪರಿಹಾರದ ಹಣಕ್ಕೆ ನೀವು ಕಮಿಷನ್ ಪಡೆಯಲು ಹೊರಟಿರುವ ನಿಮಗೆ ನಾಚಿಕೆಯಾಗಬೇಕು. ಉಳಿದಿರುವ ಎಲ್ಲಾ ರೈತರಿಗೆ ಸರ್ಕಾರದ ಸುತ್ತೊಲೆಯಂತೆ ಅವರಿಗೆ ಬರಬೇಕಾದ ಪರಿಹಾರವನ್ನು ನಾನು ಕೊಡಿಸುವವರೆಗೂ ಬಿಡುವುದಿಲ್ಲ. ಇದಕ್ಕಾಗಿ ಒಂದು ರುಪಾಯಿ ಲಂಚವನ್ನು ಕೊಡಬೇಡಿ ಅಷ್ಟು ಅಧಿಕಾರಿಗಳನ್ನು ನಾನೇ ನಿಮ್ಮ ಬಳಿಗೆ ಕರೆಸುತ್ತೇನೆ. ಇಲ್ಲಿ ಎಲ್ಲಿ ಲೋಪದೋಷವಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ್‌ ಮಮತಾ ಅವರಿಗೆ ಸೂಚನೆ ನೀಡಿದರು. ಈ ನೊಂದ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು ಇಲ್ಲದಿದ್ದರೆ ನಾನು ಸ್ಥಳದಿಂದ ತೆರಳುವುದಿಲ್ಲ ಎಂದು ಮೊಕ್ಕಾಂ ಹೂಡಿದರು.