ಸಾರಾಂಶ
ರೈತ ಕರೆಕಾಳವ್ವರ ಸಿದ್ದಪ್ಪ(52 ವರ್ಷ) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತ ರೈತ ಬೆಳೆ ಬೆಳೆಯಲೆಂದು ನ್ಯಾಷನಲ್ ಬ್ಯಾಂಕ್, ಸಹಕಾರ ಸಂಘ, ಕೈಗಡ ಸಾಲ ಸೇರಿ ಒಟ್ಟು 12 ಲಕ್ಷ ರು.ಗಳಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾಲ ಬಾಧೆಯಿಂದ ನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಹರ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.ಹರಿಹರ ತಾಲೂಕು ಬನ್ನಿಕೋಡು ಗ್ರಾಮದ ರೈತ ಕರೆಕಾಳವ್ವರ ಸಿದ್ದಪ್ಪ(52 ವರ್ಷ) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತ ರೈತ ಬೆಳೆ ಬೆಳೆಯಲೆಂದು ನ್ಯಾಷನಲ್ ಬ್ಯಾಂಕ್, ಸಹಕಾರ ಸಂಘ, ಕೈಗಡ ಸಾಲ ಸೇರಿ ಒಟ್ಟು 12 ಲಕ್ಷ ರು.ಗಳಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಮಳೆ ಕೈಕೊಟ್ಟಿದ್ದರಿಂದ ಬೆಳೆಗಳೂ ಬಾರದೆ ಸಾಲದ ಶೂಲಕ್ಕೆ ಹೆದರಿ ಭಾನುವಾರ ಮಧ್ಯಾಹ್ನ ಕರೆಕಾಳವ್ವರ ಸಿದ್ದಪ್ಪ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ರೈತ ಸಿದ್ದಪ್ಪನಿಗೆ ತಕ್ಷಣವೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆ ತಂದು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಿಗ್ಗೆ ಬಡ ರೈತ ಕರೆಕಾಳವ್ವರ ಸಿದ್ದಪ್ಪ ಸಾವನ್ನಪ್ಪಿದ್ದಾರೆ. ಮಳೆ ಇಲ್ಲದೇ, ಬೆಳೆಯೂ ಕೈಗೆ ಹತ್ತದೇ ಸಿದ್ದಪ್ಪ ದಿಕ್ಕೇ ತೋಚದಂತಾಗಿದ್ದರು ಎಂದು ಹೇಳಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.