ಹಾನಗಲ್ಲ ತಾಲೂಕಿನಲ್ಲಿ ಉತ್ತಮ ಹಿಂಗಾರು ಫಸಲಿನ ನಿರೀಕ್ಷೆಯಲ್ಲಿ ರೈತ

| Published : Jan 17 2025, 12:47 AM IST

ಹಾನಗಲ್ಲ ತಾಲೂಕಿನಲ್ಲಿ ಉತ್ತಮ ಹಿಂಗಾರು ಫಸಲಿನ ನಿರೀಕ್ಷೆಯಲ್ಲಿ ರೈತ
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ತಾಲೂಕಿನಲ್ಲಿ ಹಿಂಗಾರು ಬೆಳೆ ಈ ಬಾರಿ ಉತ್ತಮವಾಗಿದ್ದು, ಕಳೆದ ವರ್ಷದ ಮಳೆಯಿಂದಾಗಿ ಭೂಮಿ ತಂಪಾಗಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತ ಸಮುದಾಯವಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಹಾಗೂ ಬಾಳಂಬೀಡ ಏತ ನೀರಾವರಿಯಿಂದ ತಾಲೂಕಿನ ಬಹುತೇಕ ಕೆರೆಗಳನ್ನು ತುಂಬಿರುವುದರಿಂದ ಅಂತರ್ಜಲವೂ ಚೆನ್ನಾಗಿದೆ.

ಮಾರುತಿ ಶಿಡ್ಲಾಪುರ

ಹಾನಗಲ್ಲ: ತಾಲೂಕಿನಲ್ಲಿ ಹಿಂಗಾರು ಬೆಳೆ ಈ ಬಾರಿ ಉತ್ತಮವಾಗಿದ್ದು, ಕಳೆದ ವರ್ಷದ ಮಳೆಯಿಂದಾಗಿ ಭೂಮಿ ತಂಪಾಗಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತ ಸಮುದಾಯವಿದೆ. ಹಾನಗಲ್ಲ ತಾಲೂಕಿನ 77 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 58,396 ಹೆಕ್ಟೇರ್ ಕೃಷಿ ಪ್ರದೇಶವಿದೆ. ಅದರಲ್ಲಿ ಈಗಾಗಲೇ ವಾರ್ಷಿಕ ಗುರಿಯಂತೆ ಶೇ. 99.12ರಷ್ಟು ಹಿಂಗಾರು ಬಿತ್ತನೆಯ ಗುರಿ ಮುಟ್ಟಲಾಗಿದೆ. ಒಟ್ಟು 12,596 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಪೂರ್ಣಗೊಂಡಿದೆ. ಅದರಲ್ಲೂ ಪ್ರಮುಖವಾಗಿ 4,768 ಹೆಕ್ಟೇರ್ ನೀರಾವರಿ ಗೋವಿನ ಜೋಳ ಬಿತ್ತನೆಯಾಗಿದೆ. ಗೋವಿನ ಜೋಳ ಕೊಳವೆಬಾವಿಯ ನೀರನ್ನೇ ಅವಲಂಬಿಸಿ ಬೆಳೆಯಲಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಹಾಗೂ ಬಾಳಂಬೀಡ ಏತ ನೀರಾವರಿಯಿಂದ ತಾಲೂಕಿನ ಬಹುತೇಕ ಕೆರೆಗಳನ್ನು ತುಂಬಿರುವುದರಿಂದ ಅಂತರ್ಜಲವೂ ಚೆನ್ನಾಗಿದೆ, ಉತ್ತಮ ಬೆಳೆ ಬರಬಹುದೆಂಬ ನಿರೀಕ್ಷೆ ಇದೆ.

ಉಳಿದಂತೆ 3,105 ಹೆಕ್ಟೇರ್ ಹಿಂಗಾರು ಜೋಳ, 90 ಹೆಕ್ಟೇರ್ ತೃಣ ಧಾನ್ಯಗಳು, 806 ಹೆಕ್ಟೇರ್ ಹುರುಳಿ, 60 ಹೆಕ್ಟೇರ್ ಸೋಯಾ ಅವರೆ, 90 ಹೆಕ್ಟೇರ್ ಗೋದಿ, 559 ಹೆಕ್ಟೇರ್ ಸೂರ್ಯಕಾಂತಿ, 68 ಹೆಕ್ಟೇರ್ ಕಡಲೆ ಸೇರಿದಂತೆ ಒಟ್ಟು 12,596 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹಿಂಗಾರು ಬೆಳೆ ಬೆಳೆಯಲಾಗುತ್ತಿದೆ. ಬೇಸಿಗೆಗಾಗಿ ತಾಲೂಕಿನ 1,500 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಭತ್ತ ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಭತ್ತದ ಸಸಿ ಬೆಳೆಸುವ ಕಾರ್ಯದಲ್ಲಿ ರೈತ ಮುಂದಾಗಿದ್ದಾನೆ.

ಕಳೆದ ಮಳೆಗಾಲದಲ್ಲಿ ಭತ್ತ ಹಾಗೂ ಗೋವಿನ ಜೋಳ ಬೆಳೆಗಳು ಅತಿವೃಷ್ಟಿಗೆ ಹಾಳಾಗಿರುವ ಬೆನ್ನಲ್ಲೇ ಈಗ ರೈತ ಹಿಂಗಾರು ಬೆಳೆಯನ್ನು ಕಾಳಜಿಯಿಂದ ಬೆಳೆದುಕೊಳ್ಳುವಲ್ಲಿ ಮುಂದಾಗಿದ್ದಾನೆ.ಆತಂಕವಿಲ್ಲ: ಈ ಬಾರಿ ಹಿಂಗಾರು ಬೆಳೆ ಉತ್ತಮವಾಗಿದೆ. ಕೀಟಬಾಧೆಗಳು ಕಂಡು ಬಂದಲ್ಲಿ ತಕ್ಷಣ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿದರೆ ಸಲಹೆ ನೀಡಲಾಗುತ್ತದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಉತ್ತಮ ಹಿಂಗಾರು ಫಸಲು ಬರಲು ಯಾವುದೇ ಆತಂಕವಿಲ್ಲ ಎಂದು ಹಾನಗಲ್ಲ ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗಾರಗಟ್ಟಿ ಹೇಳಿದರು.