ಸಾರಾಂಶ
ರಾಹುಲ್ ಜೀ ದೊಡ್ಮನಿ
ಕನ್ನಡಪ್ರಭ ವಾರ್ತೆ ಚವಡಾಪುರಕಳೆದ ವರ್ಷ ಮುಂಗಾರು, ಹಿಂಗಾರು ಮಳೆಗಳು ಬಾರದೆ ಭೀಕರ ಬರಗಾಲ ಆವರಿಸಿ ಜನ, ಜಾನುವಾರುಗಳೆಲ್ಲ ನೀರಿಗಾಗಿ ಪರಿತಪಿಸುವಂತಾಗಿತ್ತು. ಈಗಲೂ ಕುಡಿಯುವ ನೀರಿನ ಬವಣೆ ನೀಗಿಲ್ಲ. ಇದರ ಮಧ್ಯ ಮತ್ತೆ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಭೂಮಿ ಹದಗೊಳಿಸಿಕೊಳ್ಳುತ್ತಿದ್ದಾರೆ. ಮುಂಗಾರು ಪೂರ್ವ ಮಳೆಗಳು ಉತ್ತಮವಾಗಿ ಬಂದಿದ್ದರಿಂದ ತಾಲೂಕಿನಾದ್ಯಂತ ರೈತರು ಹೊಲಗಳನ್ನು ಮುಂಗಾರು ಬಿತ್ತನೆಗೆ ಸಿದ್ದಗೊಳಿಸಲಾಗುತ್ತಿದ್ದಾರೆ.
ಅಫಜಲ್ಪುರ ತಾಲೂಕಿನ ಕೃಷಿ ಕ್ಷೇತ್ರ:ಅಫಜಲ್ಪುರ ತಾಲೂಕಿನಲ್ಲಿ 1,30,479 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವಿದ್ದು ಈ ಪೈಕಿ 1,10,590 ಹೆಕ್ಟೇರ್ ಸಾಗುವಳಿ ವಿಸ್ತೀರ್ಣವಿದೆ. ಇದರಲ್ಲಿ 1,06,220 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ 69,300 ಹೆಕ್ಟೇರ್ ತೊಗರಿ, 20,050 ಹೆಕ್ಟೇರ್ ಹತ್ತಿ, 12,800 ಹೆಕ್ಟೇರ್ ಕಬ್ಬು, ಉಳಿದಂತೆ 4,070 ಹೆಕ್ಟೇರ್ ಪ್ರದೇಶದಲ್ಲಿ ಉದ್ದು, ಹೆಸರು, ಸೋಯಾಬಿನ್, ಮೆಕ್ಕೆಜೋಳ, ಸಜ್ಜೆ, ಸೆಂಗಾ ಸೇರಿ ಇತರ ಬೆಳೆಗಳನ್ನು ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಬ್ಬಿನ ಕ್ಷೇತ್ರದಲ್ಲಿ ಕಳೆದ ವರ್ಷ 28,544 ಹೆಕ್ಟೇರ್ ಇದ್ದು ಈ ವರ್ಷ 12,800 ಹೆಕ್ಟೇರ್ ಮಾತ್ರ ಉಳಿದುಕೊಂಡು 15,744 ಹೆಕ್ಟೇರ್ ಕಬ್ಬಿನ ಪ್ರದೇಶ ಕಡಿಮೆಯಾಗಿದೆ. ಈ ಭಾಗದ ಪ್ರಮುಖ ಬೆಳೆಯಾದ ತೊಗರಿ ಕ್ಷೇತ್ರದಲ್ಲೂ ಕೂಡ 254 ಹೆಕ್ಟೇರ್ ಪ್ರದೇಶ ಕಡಿಮೆಯಾಗಿದೆ. ಆದರೆ ಹತ್ತಿ ಕ್ಷೇತ್ರ 6,744 ಹೆಕ್ಟೇರ್ ಪ್ರದೇಶ ಹೆಚ್ಚಳಗೊಂಡಿದ್ದು ರೈತರು ಕೂಡ ಹತ್ತಿ ಬೆಳೆಯ ಮೇಲೆ ಹೆಚ್ಚು ಆಸಕ್ತಿ ತೋರುವಂತಾಗಿದೆ.
ಮಳೆ ಮಾಹಿತಿ:ಅಫಜಲ್ಪುರ ತಾಲೂಕಿನ ಅತನೂರ, ಕರ್ಜಗಿ ಹಾಗೂ ಅಫಜಲ್ಪುರ ರೈತ ಸಂಪರ್ಕ ಕೇಂದ್ರಗಳು ಹಾಗೂ ಅಫಜಲ್ಪುರ, ಅತನೂರ, ಗೊಬ್ಬೂರ(ಬಿ), ಕರ್ಜಗಿ ಮಳೆ ಮಾಪನ ಕೇಂದ್ರಗಳ ವ್ಯಾಪ್ತಿಯಲ್ಲಿ ವಾರ್ಷಿಕ ಸರಾಸರಿ ಮಳೆ 667.3 ಮಿ.ಮಿ ದಾಖಲಾಗಬೇಕು. ಜನವರಿ ಆರಂಭದಿಂದ ಮೇ.26 ರವರೆಗೆ 59.9 ಮಿಮಿ ಮಳೆಯಾಗಬೇಕಾಗಿತ್ತು, ಆದರೆ 108ಮಿ.ಮಿ ಮಳೆ ದಾಖಲಾಗುವ ಮೂಲಕ ವಾಡಿಕೆಗಿಂತ ಹೆಚ್ಚಿನ ಮಳೆ ದಾಖಲಾಗಿದೆ. ಸಧ್ಯ ಬಂದಿರುವ ಮಳೆಯಲ್ಲಿ ಏಪ್ರೀಲ್ ತಿಂಗಳಲ್ಲಿ ಹೆಚ್ಚು ಮಳೆ ಬಂದಿದ್ದು ರೈತರಿಗೆ ಇದರಿಂದ ಅನುಕೂಲತೆ ಆಗಿಲ್ಲವಾದರೂ ಭೂಮಿ ಹದಗೊಳಿಸಿಕೊಳ್ಳಲು ಅನುಕೂಲತೆಯಾಗಿದೆ.
ಬೀಜದ ಮಾಹಿತಿ:ಪ್ರಸಕ್ತ ಮುಂಗಾರು ಬಿತ್ತನೆಗಾಗಿ ಕೃಷಿ ಇಲಾಖೆಯೂ ಬೀಜದ ದಾಸ್ತಾನು ಮಾಡಿಕೊಂಡಿದ್ದು ರೈತರು ಎಫ್‌ಐಡಿ ಸಂಖ್ಯೆ ತೋರಿಸಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬಹುದಾಗಿದೆ. ತಾಲೂಕಿನ ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ 337.2 ಕ್ವಿಂಟಾಲ್ ತೊಗರಿ, 7.80 ಕ್ವಿಂಟಾಲ್ ಹೆಸರು ದಾಸ್ತಾನು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ. ಉಳಿದಂತೆ ಅಲ್ಪಾವಧಿ ಬೆಳೆಗಳ ಬಿತ್ತನೆ ಬೀಜಗಳು ಕೂಡ ಬಿತ್ತನೆಗೂ ಮುನ್ನ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಲಭ್ಯವಿರಲಿದ್ದು ರೈತರು ಖರೀದಿ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್ ಗಡಗಿಮನಿ ತಿಳಿಸಿದ್ದಾರೆ.
ಮೃಘಶೀರ ಕೈ ಹಿಡಿದರೆ ಬದುಕು ಬಂಗಾರ:ಕಳೆದ ವರ್ಷ ಮಳೆ ಬಾರದೆ ಭೀಕರ ಬರಗಾಲದಲ್ಲಿ ರೈತಾಪಿ ವರ್ಗದ ಜನ ತಮ್ಮ ಮನೆಯಲ್ಲಿ ಮಕ್ಕಳಂತೆ ಸಾಕಿದ್ದು ದನಕರುಗಳನ್ನು, ಹಸು, ಎಮ್ಮೆಗಳನ್ನು ಮಾರಾಟ ಮಾಡಿ ಈಗ ಬಿತ್ತನೆ ಸಮಯದಲ್ಲಿ ದನಗಳ ಸಂತೆಗಳಿಗೆ ಅಲೇದಾಡುತ್ತಿದ್ದಾರೆ. ಈಗ ದನಗಳು ದುಬಾರಿಯಾಗಿದ್ದು ಸಾಲ ಸೋಲ ಮಾಡಿ ಬಿತ್ತನೆಗೆ ಎತ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಮುಗಿಲ ಕಡೆ ಮುಖ ಮಾಡಿ ಮೃಘಶೀರ ಮಳೆ ಕೈ ಹಿಡಿದರೆ ಮುಂಗಾರು ಬಿತ್ತನೆಗೆ ಅನುಕೂಲವಾಗಲಿದ್ದು ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದು ಉತ್ತಮ ಫಸಲು ಬರಲೆಂದು ರೈತರು ಭೂತಾಯಿಗೆ ನಮಿಸಿ ಭಗವಂತನ ಮೊರೆ ಹೋಗುತ್ತಿದ್ದಾರೆ.ಮುಂಗಾರು ಬಿತ್ತನೆಗೆ ಕಾಲ ಕೂಡಿ ಬಂದಿದೆ. ದನಗಳ ಸಂತೆಯಲ್ಲಿ ಎತ್ತುಗಳು ದುಬಾರಿ ಬೆಲೆಗೆ ಸಿಗುತ್ತಿವೆ. ಕಳೆದ ವರ್ಷ ಬರಗಾಲದಿಂದ ನಾವೇ ಸಿಕ್ಕಷ್ಟು ಕಾಸಿಗೆ ದನಕರುಗಳನ್ನು ಮಾರಿ ಕೈ ಸುಟ್ಟುಕೊಂಡಿದ್ದೇವೆ. ಹೆಚ್ಚಾದ ತೈಲ ಬೆಲೆ, ಟ್ರ್ಯಾಕ್ಟರ್ ಬಾಡಿಗೆಯಿಂದಾಗಿ ಭೂಮಿ ಉಳುಮೆ ಮಾಡುವುದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಇಂತಹ ಕಷ್ಟದ ಸಮಯದಲ್ಲಿ ಬಿತ್ತನೆ ಬೀಜಗಳ ಬೆಲೆ ಕೂಡ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಉಚಿತ ಯೋಜನೆಗಳನ್ನು ನೀಡುವುದರ ಜೊತೆಗೆ ಕೃಷಿಗೆ ಪೂರಕವಾದ ನೀತಿಗಳನ್ನು ತಂದರೆ ಬಹಳಷ್ಟು ಅನುಕೂಲವಾಗಲಿದೆ.
ಚಂದ್ರಕಾಂತ ಕಲ್ಲೂರ, ಶರಣಬಸಪ್ಪ ಅತನೂರೆ, ಭೀಮಾಶಂಕರ ಖೈರಾಟ, ಪಪ್ಪು ಬಳೂಂಡಗಿ ಆನೂರರೈತರು
;Resize=(128,128))
;Resize=(128,128))