ಸಾರಾಂಶ
ಅರಣ್ಯ ಸುತ್ತಲೂ ಸೋಲಾರ್ ಫೆನ್ಸಿಂಗ್ ಕಾಮಗಾರಿ ಪೂರ್ಣಗೊಳಿಸದ ಕಾರಣ ಆಗಾಗ ಆನೆಗಳು ಗ್ರಾಮಗಳತ್ತ ಬಂದು ಬೆಳೆ ನಾಶ ಹಾಗೂ ಪ್ರಾಣಹಾನಿ ಮಾಡುತ್ತಿವೆ. ಈಗಲಾದರೂ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಗಡಿಭಾಗದ ಜನರ ಒತ್ತಾಯ. ಇದುವರೆಗೂ ಆನೆಗಳ ದಾಳಿಗೆ 15 ಮಂದಿ ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಒಂಟಿ ಸಲಗ ದಾಳಿಗೆ ರೈತ ಮಹಿಳೆಯೊಬ್ಬಳು ಬಲಿಯಾಗಿರುವ ಘಟನೆ ತಾಲೂಕಿನ ಗಡಿ ಭಾಗದ ಸಾಕರಸನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.ತಾಲೂಕಿನ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಸಾಕರಸನಹಳ್ಳಿ ಗ್ರಾಮದ ಮಂಜುಳಾ ೪೪ ಎಂಬಾಕೆಯೇ ಒಂಟಿ ಸಲಗ ದಾಳಿಗೆ ಬಲಿಯಾಗಿದ್ದಾಳೆ. ಗಡಿ ಭಾಗದಲ್ಲಿ ಕಾಡಾನೆಗಳ ದಾಳಿಗೆ ಇದುವರೆಗೆ ೧೫ ಮಂದಿ ಮೃತಪಟ್ಟಿದ್ದಾರೆ.ಟಾರ್ಚ್ ಬೆಳಕು ಕಂಡು ದಾಳಿ
ಸಾಕರಸನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ವಾಸವಾಗಿದ್ದ ಮಂಜುಳ ಕುಟುಂಬ ಮಂಗಳವಾರ ಮುಂಜಾನೆ ಬಹಿರ್ದೆಸೆಗೆ ಎದ್ದು ಹೊರಗಡೆ ಹೋಗಿದ್ದಾಗ ತಮ್ಮ ಮನೆ ಬಳಿಯೇ ಒಂಟಿಸಲಗ ಬಾಳೆಗಿಡಗಳನ್ನು ತುಳಿದು ನಾಶ ಮಾಡುತ್ತಿದ್ದನ್ನು ಕಂಡು ಮಂಜುಳ ತಮ್ಮ ಮೊಬೈಲ್ ಟಾರ್ಚ್‌ನಿಂದ ಆನೆಯತ್ತ ಬೆಳಕು ತೋರಿಸುತ್ತಿದ್ದಂತೆ ಏಕಾಏಕಿ ಆನೆ ದಾಳಿ ಮಾಡಿ ಸೊಂಡಲಿನಿಂದ ಹೊಡೆದಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಈ ಸುದ್ದಿ ಕಾಲ್ಗಿಚಿನಂತೆ ಹರಡಿ ಸಹಸ್ರಾರು ಸಂಖ್ಯೆಯಲ್ಲಿ ಸುತ್ತಮುತ್ತಲಿ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಆರ್‌ಎಫ್‌ಒ ಶ್ರೀಲಕ್ಷ್ಮೀ ಸಹ ಸ್ಥಳಕ್ಕೆ ಬಂದು ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಸತ್ತಾಗ ಅಧಿಕಾರಿಗಳು ಬರುತ್ತಾರೆ
ಗಡಿ ಭಾಗದ ಗ್ರಾಮಗಳಲ್ಲಿ ಪದೇ ಪದೇ ಕಾಡಾನೆಗಳ ದಾಳಿಗೆ ಅಮಾಯಕ ರೈತರು ಬಲಿಯಾಗುತ್ತಿದ್ದಾರೆ. ಆದರೆ ಸರ್ಕಾರ ಇದನ್ನು ಗಂಭಿರವಾಗಿ ಪರಿಗಣಿಸುತ್ತಿಲ್ಲ. ಇಂತಹ ಘಟನೆ ನಡೆದಾಗ ಮಾತ್ರ ಅಧಿಕಾರಿಗಳು ಆಗಮಿಸಿ ಸಾಂತ್ವನ ಹೇಳಿ ಹೋದರೆ ಮತ್ತೆ ಇಂತಹ ಮತ್ತೊಂದು ಘಟನೆ ನಡೆದಾಗ ಮಾತ್ರ ಬರುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡಾನೆಗಳು ಆಹಾರ ಮತ್ತು ನೀರು ಅರಸಿಕೊಂಡು ಕಾಡಿನಿಂದ ಗ್ರಾಮಗಳತ್ತ ಬರುತ್ತವೆ. ಆನೆಗಳನ್ನು ಮತ್ತೆ ಕಾಡಿನತ್ತ ಅಟ್ಟಲು ಯತ್ನಿಸುವವರ ಮೇಲೆ ಆನೆಗಳು ಪ್ರತಿ ದಾಳಿ ನಡೆಸುತ್ತವೆ. ಈಗಾಗಲೇ ೧೫ಕ್ಕೂ ಹೆಚ್ಚಿನ ರೈತರು ಆನೆಗಳ ದಾಳಿಗೆ ತುತ್ತಾಗಿದ್ದಾರೆ. ಆದರೂ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಅರಣ್ಯ ಸುತ್ತಲೂ ಸೋಲಾರ್ ಫೆನ್ಸಿಂಗ್ ಕಾಮಗಾರಿ ಪೂರ್ಣಗೊಳಿಸದ ಕಾರಣ ಆಗಾಗ ಆನೆಗಳು ಗ್ರಾಮಗಳತ್ತ ಬಂದು ಬೆಳೆ ನಾಶ ಹಾಗೂ ಪ್ರಾಣಹಾನಿ ಮಾಡುತ್ತಿವೆ. ಇದಕ್ಕೆ ಶಾಶ್ವತವಾಗಿ ಪರಿಹಾರ ಕಲ್ಪಿಸಲು ವಿಧಾನಸಭೆಯಲ್ಲಿ ಧ್ವನಿಎತ್ತುವೆ ಎಂದು ಭರವಸೆ ನೀಡಿದರು.₹5 ಲಕ್ಷ ಪರಿಹಾರ ಚೆಕ್ ಹಸ್ತಾಂತರ
ಆನೆ ದಾಳಿಗೆ ತುತ್ತಾಗುವವರಿಗೆ ಸರ್ಕಾರದಿಂದ ನೀಡುವ ೧೫ಲಕ್ಷ ಪರಿಹಾರದಲ್ಲಿ ಸ್ಥಳದಲ್ಲೆ ೫ಲಕ್ಷ ಚೆಕ್ ವಿತರಿಸಿದರು. ಉಳಿದ ೧೦ಲಕ್ಷ ವಾರದೊಳಗೆ ಕೊಡಿಸುವ ಭರವಸೆ ನೀಡಿದರು.