ಹೊಲಕ್ಕೆ ನೀರು ನುಗ್ಗುತ್ತಿರುವುದಕ್ಕೆ ಬೇಸರ, ನೀರಾವರಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ

| Published : Jun 29 2024, 12:40 AM IST

ಹೊಲಕ್ಕೆ ನೀರು ನುಗ್ಗುತ್ತಿರುವುದಕ್ಕೆ ಬೇಸರ, ನೀರಾವರಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ತಾಲೂಕಿನ ಹಮ್ಮಿಗಿ ಭಾಗದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಖ್ಯ ಕಾಲುವೆಯಲ್ಲಿ ನೀರು ತುಂಬಿ ಪಕ್ಕದ ಜಮೀನುಗಳಿಗೆ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಬೇಸತ್ತಿದ್ದ ಹಮ್ಮಿಗಿ ರೈತ ಶಿವರಾಜ ಹೊಳೆಯಾಚಿ ಎಂಬವರು ಬುಧವಾರ ನೀರಾವರಿ ಇಲಾಖೆಯ ಕಾರ್ಯಾಲಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮುಂಡರಗಿ: ತಾಲೂಕಿನ ಹಮ್ಮಿಗಿ ಭಾಗದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಖ್ಯ ಕಾಲುವೆಯಲ್ಲಿ ನೀರು ತುಂಬಿ ಪಕ್ಕದ ಜಮೀನುಗಳಿಗೆ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಬೇಸತ್ತಿದ್ದ ಹಮ್ಮಿಗಿ ರೈತ ಶಿವರಾಜ ಹೊಳೆಯಾಚಿ ಎಂಬವರು ಬುಧವಾರ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿರುವ ನೀರಾವರಿ ಇಲಾಖೆಯ ಕಾರ್ಯಾಲಯಕ್ಕೆ ತೆರಳಿ ಫ್ಯಾನಿಗೆ ಹಗ್ಗ ಕಟ್ಟಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ರೈತ ಶಿವರಾಜ ಅವರನ್ನು ಅಲ್ಲಿದ್ದ ಸಿಬ್ಬಂದಿ ತಡೆದು ಸಮಾಧಾನಪಡಿಸಿದ್ದಾರೆ. ಆನಂತರ ಸ್ಥಳಕ್ಕೆ ಭೇಟಿ ನೀಡಿದ ಸಿಂಗಟಾಲೂರು ಏತ ನೀರಾವರಿ ಇಲಾಖೆ ಎಇಇ ರಮೇಶ ಎಚ್. ಅವರು ರೈತನೊಂದಿಗೆ ಚರ್ಚಿಸಿ, ಬೆಳೆಹಾನಿಯಾಗಿದ್ದಕ್ಕೆ ಪರಿಹಾರ ನೀಡಲು ಈಗಾಗಲೇ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ, ಮಾಹಿತಿ ನೀಡಲಾಗಿದೆ. ತಕ್ಷಣವೇ ತಮಗೆ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತಿದ್ದು, ಸಹಕಾರ ನೀಡುವಂತೆ ತಿಳಿಸಿ ಸಮಾಧಾನಪಡಿಸಿ ಕಳುಹಿಸಿದ್ದಾರೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನ ಎಡಭಾಗದ ಮುಖ್ಯಕಾಲುವೆ ಮೂಲಕ ಬ್ಯಾರೇಜ್‌ನಲ್ಲಿ ಸಂಗ್ರಹವಿರುವ ಹಿನ್ನೀರು ಹಾಗೂ ಮಳೆಯಾದ ಸಂದರ್ಭದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾಲುವೆಯಲ್ಲಿ ನೀರು ತುಂಬಿ ಪಕ್ಕದಲ್ಲಿರುವ ರೈತರ ಜಮೀನುಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ರೈತರು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜವಾಗದ ಹಿನ್ನೆಲೆಯಲ್ಲಿ ರೈತ ಈ ನಿರ್ಧಾರಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.

ಕಾಲುವೆಯಲ್ಲಿ ನೀರು ತುಂಬಿದ ಆನಂತರ ಹಳ್ಳಕ್ಕೆ ಹರಿದು ಹೋಗುವ ಭಾಗವು ಬಂದ್‌ ಆಗಿದ್ದರಿಂದ ರೈತರ ಹೊಲಕ್ಕೆ ಹೋಗುತ್ತಿತ್ತು. ಗುರುವಾರ ನೀರಾವರಿ ಅಧಿಕಾರಿಗಳು ಜೆಸಿಬಿ ಮೂಲಕ ಕೆಲಸ ಮಾಡಿಸಿ ಸರಿಪಡಿಸಿದರು. ಹೀಗಾಗಿ ಒಂದಿಷ್ಟು ಸಮಾಧಾನವಾಗಿದೆ. ಇಲಾಖೆ ನಮಗೆ ಶೀಘ್ರವಾಗಿ ಬೆಳೆಹಾನಿ ಪರಿಹಾರ ಕೊಡಿಸಲು ಮುಂದಾಗಬೇಕು ಎಂದು ಆತ್ಮಹತ್ಯೆಗೆ ಮುಂದಾದ ಹಮ್ಮಿಗಿ ರೈತ ಶಿವರಾಜ ಹೊಳೆಯಾಚಿ ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.

ರೈತರ ಜಮೀನಿನಲ್ಲಿರುವ ನೀರನ್ನು ಒಂದೆಡೆ ತೆರವುಗೊಳಿಸಿ ಹೊರ ಬಿಡಲಾಗುತ್ತಿದೆ. ಈಗಾಗಲೇ ರೈತನ ಜಮೀನಿನಲ್ಲಾದ ಬೆಳೆಹಾನಿ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಪರಿಹಾರವೂ ಬರಲಿದೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ರಮೇಶ ಎಚ್. ತಿಳಿಸಿದ್ದಾರೆ.