ಪ್ರಾಣಿ, ಪಕ್ಷಿಗಳಿಗೆ ದಾಹತೀರಿಸಲು ಕೃಷಿ ಹೊಂಡ ತುಂಬಿಸಿದ ರೈತ

| Published : Mar 20 2024, 01:21 AM IST

ಪ್ರಾಣಿ, ಪಕ್ಷಿಗಳಿಗೆ ದಾಹತೀರಿಸಲು ಕೃಷಿ ಹೊಂಡ ತುಂಬಿಸಿದ ರೈತ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲೊಬ್ಬ ರೈತ ಪ್ರಾಣಿಪಕ್ಷಿಗಳಿಗೆ ಅನುಕೂಲವಾಗಲಿ ಎಂದು ತಮ್ಮ ಬೋರ್‌ವೆಲ್‌ನಿಂದ ಕೃಷಿ ಹೊಂಡವನ್ನೇ ತುಂಬಿಸಿದ್ದಾರೆ.

- ಮಾನವೀಯತೆ ಮೆರೆದ ಕೋಳಿಹಾಳ ಗ್ರಾಮದ ರೈತ ಫಕೀರೇಶ

- ತಮ್ಮ ಬೋರ್‌ವೆಲ್‌ನಿಂದ ಕೃಷಿ ಹೊಂಡಕ್ಕೆ ನೀರು

- ರೈತನ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಭೀಕರ ಬರದಿಂದ ರೈತ ಸಮುದಾಯ ತತ್ತರಿಸಿ ಹೋಗಿದೆ. ತಮ್ಮ ಹೊಲದಲ್ಲಿನ ಬೆಳೆ ಕಾಪಾಡಿಕೊಳ್ಳುವುದೇ ಹರ ಸಾಹಸವಾಗಿದೆ. ಆದರೆ, ಇಲ್ಲೊಬ್ಬ ರೈತ ಪ್ರಾಣಿಪಕ್ಷಿಗಳಿಗೆ ಅನುಕೂಲವಾಗಲಿ ಎಂದು ತಮ್ಮ ಬೋರ್‌ವೆಲ್‌ನಿಂದ ಕೃಷಿ ಹೊಂಡವನ್ನೇ ತುಂಬಿಸಿದ್ದಾರೆ. ಇದರಿಂದ ಈಗ ಪ್ರಾಣಿ, ಪಕ್ಷಿಗಳು ದಾಹ ತೀರಿಸಿಕೊಳ್ಳುತ್ತಿವೆ.

ಯಲಬುರ್ಗಾ ತಾಲೂಕಿನ ಕೋಳಿಹಾಳ ಗ್ರಾಮದ ಫಕೀರಪ್ಪ ಮಾಳೇರ್ ಇಂಥ ಮಾನವೀಯತೆ ಮೆರೆದ ರೈತ.

ತಮ್ಮ ಹೊಲದ ಸುತ್ತಲಿನ ಕೆರೆ, ಹಳ್ಳ-ಕೊಳ್ಳಗಳು ಬತ್ತಿ ಹೋಗಿವೆ. ಇದರಿಂದ ಸುತ್ತಮುತ್ತ ನಾಲ್ಕಾರು ಕಿಮೀ ಸುತ್ತಿದರೂ ಹನಿ ನೀರು ಇಲ್ಲದಂತಹ ಪರಿಸ್ಥಿತಿ ಇದೆ. ಇದರಿಂದ ಪ್ರಾಣಿ, ಪಕ್ಷಿಗಳು ನೀರಿಗಾಗಿ ಹಪಹಪಿಸುತ್ತಿದ್ದವು. ಇದನ್ನು ನೋಡಿದ ರೈತ ಫಕೀರಪ್ಪ ತಮ್ಮ ಹೊಲದಲ್ಲಿಯೇ ಇರುವ ಕೃಷಿ ಹೊಂಡಕ್ಕೆ ಬೋರ್‌ವೆಲ್‌ನಿಂದ ನೀರುಹರಿಸಿ, ತುಂಬಿಸುತ್ತಿದ್ದಾರೆ.

ಇದರಿಂದ ಸುತ್ತಮುತ್ತಲ ಪ್ರದೇಶದ ಕುರಿ, ದನಕರುಗಳು, ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳ ದಾಹ ನೀಗುತ್ತಿದೆ.

ಇವರ ಹೊಲದಲ್ಲಿ ಎರಡು ಬೋರ್‌ವೆಲ್‌ ಇದ್ದು, ಎರಡರಲ್ಲೂ ನೀರಿದೆ. ಒಂದು ಬೋರ್‌ವೆಲ್‌ನ್ನು ತಮ್ಮ ಹೊಲದಲ್ಲಿನ ತೆಂಗಿನ ಮರ ಹಾಗೂ ತರಕಾರಿ ಬೆಳೆಯುವುದಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ಮತ್ತೊಂದು ಬೋರ್‌ವೆಲ್‌ನ ನೀರನ್ನು ಕೃಷಿ ಹೊಂಡಕ್ಕೆ ಹರಿಸುತ್ತಿದ್ದಾರೆ. ಈ ಮೂಲಕ ಪ್ರಾಣಿ, ಪಕ್ಷಿಗಳ ದಾಹ ತೀರಿಸುತ್ತಿದ್ದಾರೆ.

ತಮ್ಮ ಹೊಲದಲ್ಲಿರುವ ಎರಡು ಬೋರ್‌ವೆಲ್‌ ಬಳಕೆ ಮಾಡಿ, ಇನ್ನಷ್ಟು ಹೊಲಕ್ಕೆ ನೀರು ಹರಿಸಿ ಹೆಚ್ಚಿನ ಬೆಳೆ ಬೆಳೆಯಬಹುದಾಗಿತ್ತು. ಆದರೆ, ಹಾಗೆ ಮಾಡುವ ಬದಲು ಪ್ರಾಣಿ, ಪಕ್ಷಿಗಳಿಗೂ ನೀರು ಸಿಗುವಂತಾಗಬೇಕು ಎಂದು ಚಿಂತಿಸಿ, ಒಂದು ಬೋರ್‌ವೆಲ್‌ಗೆ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಹೊಲವನ್ನು ಮಾತ್ರ ನೀರಾವರಿ ಮಾಡಿದ್ದಾರೆ. ಉಳಿದಂತೆ ಒಂದು ಬೋರ್‌ವೆಲ್‌ನ್ನು ಪ್ರಾಣಿ, ಪಕ್ಷಿಗಳಿಗಾಗಿ ಕಾಯ್ದಿರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಯಾಕೆ ಹೀಗೆ:

ಈ ವರ್ಷ ಮಳೆ ಅಷ್ಟಕಷ್ಟೇ ಆಗಿದೆ. ಎಲ್ಲಿಯೂ ನೀರು ಇಲ್ಲದಂತಾಗಿದೆ. ಅದರಲ್ಲೂ ಬೇಸಿಗೆ ಬರುವ ಮುನ್ನವೇ ಬರ ಎದುರಾಗಿದ್ದು, ಹಳ್ಳ-ಕೊಳ್ಳಗಳು ಬತ್ತಿ ಹೋಗಿವೆ. ಕೆರೆಗಳಲ್ಲಿಯೂ ನೀರಿಲ್ಲದಂತೆ ಆಗಿದೆ. ಇದನ್ನು ನೋಡಿದ ಮೇಲೆ ಫಕೀರಪ್ಪ ಜನರು ಹೇಗಾದರೂ ಮಾಡಿ ದಾಹ ತೀರಿಸಿಕೊಳ್ಳುತ್ತಾರೆ, ಪ್ರಾಣಿಗಳು ಏನು ಮಾಡುತ್ತವೆ ಎಂದು ಚಿಂತನೆ ಮಾಡಿದ್ದಾರೆ. ಆಗ ತಮ್ಮ ಹೊಲದಲ್ಲಿನ ಎರಡು ಬೋರ್‌ವೆಲ್ ನಲ್ಲಿ ಒಂದನ್ನು ಕಾಯ್ದಿರಿಸಿ, ಕೃಷಿ ಹೊಂಡಕ್ಕೆ ನೀರು ಹರಿಸುವ ನಿರ್ಧಾರ ಮಾಡಿದ್ದಾರೆ.