ಬಿಸಿಲ ನಾಡಲ್ಲಿ ಸೇಬು ಬೆಳೆದ ರೈತ

| Published : Mar 24 2025, 12:34 AM IST

ಸಾರಾಂಶ

ಹೇಳಿಕೊಳ್ಳುವ ನೀರಿನ ಮೂಲಗಳಿಲ್ಲ, ದುಬಾರಿ ಗೊಬ್ಬರ ಹಾಗೂ ವಿಪರೀತ ಬಿಸಿಲು ನಡುವೆ ತಾಲೂಕಿನ ರೈತರ ನಡೆಸುವ ಕೃಷಿ ಚಟುವಟಿಕೆಯ ಕಷ್ಟ-ನಷ್ಟ ದೇವರಿಗಿಷ್ಟ ಎನ್ನುವ ದಿನಮಾನದಲ್ಲಿ ಪಟ್ಟಣ ಹೊರವಲಯದಲ್ಲಿ ಯುವಕನೋರ್ವ ಸೇಬು ಗಿಡಗಳನ್ನು ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಎಸ್.ಎಂ. ಸೈಯದ್ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಹೇಳಿಕೊಳ್ಳುವ ನೀರಿನ ಮೂಲಗಳಿಲ್ಲ, ದುಬಾರಿ ಗೊಬ್ಬರ ಹಾಗೂ ವಿಪರೀತ ಬಿಸಿಲು ನಡುವೆ ತಾಲೂಕಿನ ರೈತರ ನಡೆಸುವ ಕೃಷಿ ಚಟುವಟಿಕೆಯ ಕಷ್ಟ-ನಷ್ಟ ದೇವರಿಗಿಷ್ಟ ಎನ್ನುವ ದಿನಮಾನದಲ್ಲಿ ಪಟ್ಟಣ ಹೊರವಲಯದಲ್ಲಿ ಯುವಕನೋರ್ವ ಸೇಬು ಗಿಡಗಳನ್ನು ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಪಟ್ಟಣದ ೨೩ನೇ ವಾರ್ಡಿನ ಉಣಚಗೇರಿ ಗ್ರಾಮದ ಪರಶುರಾಮ ಜೀವಪ್ಪ ಕಲಾಲಬಂಡಿ ತಮ್ಮ ಜಮೀನಿನಲ್ಲಿ ಸಾವಯವ ಗೊಬ್ಬರ ಹಾಗೂ ಹನಿ ನೀರಾವರಿ ನೆಚ್ಚಿಕೊಂಡು ದೂರದ ಹಿಮಾಚಲ ಪ್ರದೇಶದ ಬಿಸ್ಲಾಪುರದಲ್ಲಿನ ಸೇಬು ಸಸಿಗಳನ್ನು ಬಿಸಿಲ ನಾಡಿನಲ್ಲಿ ಬೆಳೆದಿದ್ದಾರೆ. ಸದ್ಯ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದು, ಕೃಷಿ ಸಮೂಹದ ಆಕರ್ಷಣೆಗೆ ಕಾರಣವಾಗಿದ್ದಾರೆ.ಉಣಚಗೇರಿ ಗ್ರಾಮದ ಪರಶುರಾಮ ಜೀವಪ್ಪ ಕಲಾಲ ಬಂಡಿ ಅವರು ಬೆಂಗಳೂರಿನ ಏರೋಸ್ಪೇಸ್ ಇಂಡಸ್ಟ್ರಿಸ್‌ನಲ್ಲಿ ಅಭಿಯಂತರರಾಗಿ ವೃತ್ತಿ ನಡೆಸುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ವರ್ಕ್ ಫಾಂ ಹೋಮ್ ಅವಧಿಯಲ್ಲಿ ತಮ್ಮ ೬ ಎಕರೆ ಜಮೀನಿನ ಪೈಕಿ ೧ ಎಕರೆ ೧೦ ಗುಂಟೆ ಜಮೀನಿನಲ್ಲಿ ೯*೯ ಅಡಿ ಅಂತರದಲ್ಲಿ ಹಿಮಾಚಲ ರಾಜ್ಯದ ಅಣ್ಣಾ ಹಾಗೂ ಗೋಲ್ಡನ್ ಡೊರ್‌ಸೆಟ್ ತಳಿಯ ೭೬೦ ಸಸಿಗಳನ್ನು ನಾಟಿ ಮಾಡಿದ್ದರು. ಅದರಲ್ಲಿ ೬೬೦ ಸಸಿಗಳು ಸಮೃದ್ಧವಾಗಿ ಬೆಳೆದಿವೆ. ಮುಂದಿನ ವರ್ಷ ಬೇಸಿಗೆ ವೇಳೆಗೆ ಪೂರ್ಣ ಪ್ರಮಾಣದ ಫಸಲು ಬರುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಸೇಬು ಸಸಿಗಳನ್ನು ವೈಜ್ಞಾನಿಕ ಮಾದರಿಯಲ್ಲಿ ನಾಟಿ ಮಾಡಿದ್ದರಿಂದ ಮೂರು ವರ್ಷಗಳ ವರೆಗೆ ಸೇಬು ಬೆಳೆಯ ನಡುವೆ ಶೇಂಗಾ, ತರಕಾರಿ ಸೇರಿ ದ್ವಿದಳ ಬೆಳೆಯನ್ನು ಬೆಳೆಯಬಹುದಾಗಿದೆ. ೨ನೇ ವರ್ಷವೇ ಸೇಬು ಗಿಡಗಳಲ್ಲಿ ಫಸಲು ಬರುತ್ತಿದ್ದು, ಪರಶುರಾಮ ಅವರ ಕೃಷಿ ಜೀವನಕ್ಕೆ ಹೊಸ ಭರವಸೆ ಮೂಡಿದೆ.ಪಟ್ಟಣ ಸೇರಿ ತಾಲೂಕಿನಲ್ಲಿ ಈಗ ವಿಪರೀತ ಬಿಸಿಲು, ಹೇಳಿಕೊಳ್ಳುವ ಅರಣ್ಯ ಪ್ರದೇಶ ಅಥವಾ ನೀರಿನ ಮೂಲಗಳು ಈ ಭಾಗದಲ್ಲಿ ಇಲ್ಲ. ಹೀಗಾಗಿ ಭಾಗಶಃ ರೈತರು ಮಳೆಯನ್ನು ನೆಚ್ಚಿಕೊಂಡರೆ ಇನ್ನೂ ಕೆಲವರು ಕೊಳವೆಬಾವಿ ನೀರು ಬಳಸಿಕೊಂಡು ಕೃಷಿ ಮಾಡುವ ಅನಿವಾರ್ಯತೆ ಇದೆ. ಇರುವ ಸೌಲಭ್ಯಗಳನ್ನು ದ್ವಿಗುಣವಾಗಿಸಿಕೊಂಡು ಕೃಷಿ ಚಟುವಟಿಕೆ ಸಾಧನೆ ಮಾಡುತ್ತಿರುವ ರೈತರಲ್ಲಿ ಪರಶುರಾಮ ಕಲಾಲಬಂಡಿ ಸಹ ಒಬ್ಬರಾಗಿ ನಿಲ್ಲುತ್ತಾರೆ. ಯಲಬುರ್ಗಾ ರಸ್ತೆಯ ತಮ್ಮ ೬ ಎಕರೆ ಜಮೀನಿನಲ್ಲಿ ೨ ಎಕರೆಯಲ್ಲಿ ಪಪ್ಪಾಯಿ ಬೆಳೆ ಜತೆಗೆ ದಾಳಿಂಬೆ ನಾಟಿ ಮಾಡಿದ್ದಾರೆ. ಪಪ್ಪಾಯಿ ಫಸಲು ಬಂದು ಪೂರ್ಣಗೊಳ್ಳುವ ವೇಳೆಗೆ ದಾಳಿಂಬೆ ಫಸಲು ಬರಲು ಪ್ರಾರಂಭ ಆಗುವಂತೆ ನಾಟಿ ಮಾಡಿದ್ದಾರೆ. ಇನ್ನುಳಿದ ಜಮೀನಿನಲ್ಲಿ ಫರ್ಸಿಮನ್ ಮತ್ತು ಡ್ರ್ಯಾಗನ್ ಬೆಳೆ ಬೆಳೆಯುವ ಸಿದ್ಧತೆ ಕೈಗೊಳ್ಳುತ್ತಿದ್ದಾರೆ.ಪಟ್ಟಣ ಸೇರಿ ತಾಲೂಕಿನ ಗ್ರಾಮಗಳಲ್ಲಿ ರೈತರು ನಡೆಸುವ ಕೃಷಿ ಚಟುವಟಿಕೆ ಭಾಗಶಃ ಮಳೆ ಆಧಾರಿತವಾಗಿದ್ದು, ಈ ಭಾಗದ ಕೆರೆಗಳನ್ನು ತುಂಬಿಸಿ ರೈತರ ಆರ್ಥಿಕ ಪ್ರಗತಿಗೆ ಆಡಳಿತ ಮುಂದಾಗಬೇಕು ಎಂಬ ಆಗ್ರಹಗಳು ಒಂದೆಡೆಯಾದರೆ ಇತ್ತ ಅನೇಕ ರೈತರು ಲಾಭ ನಷ್ಟದ, ಹೊಸ ಹೊಸ ಕೃಷಿ ಪದ್ಧತಿಗಳ ಮೂಲಕ ಯುವ ಸಮೂಹದ ಗಮನ ಸೆಳೆದಿದ್ದಾರೆ ಹಾಗೂ ಸೆಳೆಯುತ್ತಿದ್ದಾರೆ. ಹೀಗಾಗಿ ಪಟ್ಟಣ ಸಮೀಪದ ಉಣಚಗೇರಿ ಗ್ರಾಮದ ಪರಶುರಾಮ ಕಲಾಲಬಂಡಿ ಅವರ ಜಮೀನಿಗೆ ಜಿಲ್ಲೆ ಸೇರಿ ನೆರೆಯ ಜಿಲ್ಲೆಗಳಿಂದ ಆಗಮಿಸುತ್ತಿರುವ ಅನೇಕ ರೈತರು ಈಗಾಗಲೇ ಅಂದಾಜು ೫ ಸಾವಿರ ಸೇಬು ಸಸಿಗಳಿಗೆ ಬೇಡಿಕೆಯನ್ನಿಟ್ಟಿದ್ದಾರೆ. ಹೀಗಾಗಿ ಅವರಿಗೆ ಸೇಬು ಸಸಿಗಳನ್ನು ನಾಟಿ ಮಾಡಿಕೊಡುವ ಜತೆಗೆ ಸೇಬು ಗಿಡಗಳಲ್ಲಿನ ಫಸಲು ಮಾರಾಟಕ್ಕೆ ಈಗಾಗಲೇ ಬೆಂಗಳೂರು ಸೇರಿ ಬೇರೆ ನಗರಗಳಲ್ಲಿನ ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದು, ಸಕಾರಾತ್ಮಕ ಸ್ಪಂದನೆ ಅವರಿಗೆ ದೊರೆತಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಮನ್ವಂತರ ಕಂಡುಕೊಳ್ಳಲು ಪರಶುರಾಮ ಕಲಾಲಬಂಡಿ ಅವರು ಪ್ರಯತ್ನಿಸುತ್ತಿದ್ದಾರೆ. ಪಟ್ಟಣಕ್ಕೆ ವಾರಾಂತ್ಯದಲ್ಲಿ ಬಂದು ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳುವೆ. ಇನ್ನುಳಿದ ದಿನಗಳಲ್ಲಿ ನಮ್ಮ ಮಾವನವರಾದ ಶಿವಪ್ಪ ಮುಂಡರಗಿ ಅವರು ಜಮೀನನ್ನು ನೋಡಿಕೊಂಡು ಹೋಗುತ್ತಿದ್ದರು. ಸಾಂಪ್ರದಾಯಿಕ ಬೆಳೆಗಳ ಜತೆಗೆ ರೈತರು ೧ ಅಥವಾ ೨ ಎಕರೆ ಜಮೀನಿನಲ್ಲಿ ಇಂತಹ ಬೆಳೆಗಳನ್ನು ಬೆಳೆಯುವುದರಿಂದ ಸಾಲದ ಸುಳಿಗೆ ಸಿಲುಕುವುದರಿಂದ ಪಾರಾಗಬಹುದು ಎಂದು ಸೇಬು ಬೆಳೆದ ಪರಶುರಾಮ ಕಲಾಲಬಂಡಿ ಹೇಳುತ್ತಾರೆ.