ಪ್ರೀತಿಯಿಂದ ಸಾಕುತ್ತಿರುವ ಹಸುವಿಗೆ ಮನೆಯ ಸದಸ್ಯಳಂತೆ ಗರ್ಭಿಣಿಯರಿಗೆ ಮಾಡುವ ಸಂಪ್ರದಾಯಕವಾದ ಸೀಮಂತ ಶಾಸ್ತ್ರ ಮಾಡಿ ರೈತ ಕುಟುಂಬವೊಂದು ಗಮನ ಸೆಳೆದಿದೆ. ಜಿ.ಮಾದೇಗೌಡ ಬಡಾವಣೆಯಲ್ಲಿ ವಾಸವಿರುವ ದೇವರಹಳ್ಳಿಯ ಚಂದ್ರಶೇಖರ್ ಅವರ ಕುಟುಂಬ ಕಳೆದ 20 ವರ್ಷಗಳಿಂದ ಹೈನುಗಾರಿಕೆಯನ್ನು ಜೀವನೋಪಾಯವನ್ನಾಗಿ ಮಾಡಿಕೊಂಡು ಬರುತ್ತಿದೆ.
ಬಿ.ಎಸ್.ಸುನೀಲ್
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿಪ್ರೀತಿಯಿಂದ ಸಾಕುತ್ತಿರುವ ಹಸುವಿಗೆ ಮನೆಯ ಸದಸ್ಯಳಂತೆ ಗರ್ಭಿಣಿಯರಿಗೆ ಮಾಡುವ ಸಂಪ್ರದಾಯಕವಾದ ಸೀಮಂತ ಶಾಸ್ತ್ರ ಮಾಡಿ ರೈತ ಕುಟುಂಬವೊಂದು ಗಮನ ಸೆಳೆದಿದೆ.
ಜಿ.ಮಾದೇಗೌಡ ಬಡಾವಣೆಯಲ್ಲಿ ವಾಸವಿರುವ ದೇವರಹಳ್ಳಿಯ ಚಂದ್ರಶೇಖರ್ ಅವರ ಕುಟುಂಬ ಕಳೆದ 20 ವರ್ಷಗಳಿಂದ ಹೈನುಗಾರಿಕೆಯನ್ನು ಜೀವನೋಪಾಯವನ್ನಾಗಿ ಮಾಡಿಕೊಂಡು ಬರುತ್ತಿದೆ.ತಮ್ಮ ಹೈನುಗಾರಿಕೆಯನ್ನು ಮರೆಯದೇ ಮುಂದುವರಿಸಿಕೊಂಡು ಬರುತ್ತಿರುವ ಈ ಕುಟುಂಬ ಪ್ರಸ್ತುತ ಸುಮಾರು 8 ಹಸುಗಳನ್ನು ಸಾಕುತ್ತಿದ್ದು, ಇದರಲ್ಲಿ ಒಂದು ಹಸು ಮನೆಯಲ್ಲಿ ಹುಟ್ಟಿ ಬೆಳೆದಿತ್ತು. ಮನೆಯಲ್ಲೇ ಮಗಳಂತೆ ಸಾಕಿಕೊಂಡಿರುವ ಹಸು ಗರ್ಭ ಧರಿಸಿ ತಿಂಗಳು ತುಂಬಿತ್ತು.
ಕುಟುಂಬದ ಆರೈಕೆಯಲ್ಲಿ ಪ್ರೀತಿಯಿಂದ ಬೆಳೆಸಿರುವ ಹಸು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಮನೆಯ ಹೆಣ್ಣು ಮಕ್ಕಳಿಗೆ ಮಾಡುವ ಸೀಮಂತ ಶಾಸ್ತ್ರ ರೀತಿಯಲ್ಲೇ ಹಸುವಿಗೆ ಮಾಡಲು ನಿರ್ಧರಿಸಿ ಸಂಭ್ರಮದಿಂದ ಶಾಸ್ತ್ರವನ್ನು ನೆರವೇರಿಸಿದ್ದಾರೆ.ಸೀಮಂತ ಶಾಸ್ತ್ರದ ಅಂಗವಾಗಿ ಚಂದ್ರಶೇಖರ್ ಕುಟುಂಬ ತಮ್ಮ ಮನೆ ಮುಂದೆ ತಳಿರು ತೋರಣ ಕಟ್ಟಿ, ಹಸುವಿಗೆ ಹೂವಿನ ಅಲಂಕಾರ ಮಾಡಿ ಅರಿಶಿನ–ಕುಂಕುಮದ ತಟ್ಟೆಗಳನ್ನು ಇಟ್ಟು ಮುತ್ತೈದೆಯರಿಂದ ಪೂಜೆ ಮಾಡಿಸಿ ಅರ್ಥ ಪೂರ್ಣವಾಗಿ ಹಸುವಿಗೆ ಸೀಮಂತ ಶಾಸ್ತ್ರ ನೆರವೇರಿಸಿ ಸಂಭ್ರಮಿಸಿದ್ದಾರೆ.
ಈ ಕುಟುಂಬ ಹಸುಗಳ ಆರೈಕೆ, ಆರೋಗ್ಯ ಮತ್ತು ಸಂತಾನೋತ್ಪತ್ತಿಯ ಸಂದರ್ಭಗಳನ್ನೂ ಮನೆ ಸಂಭ್ರಮದ ಭಾಗವಾಗಿಯೇ ಕಾಣುತ್ತಿದ್ದಾರೆ. ತಮಗೆ ಬದುಕು ಕಟ್ಟಿಕೊಟ್ಟಿರುವ ಜಾನುವಾರುಗಳನ್ನೂ ಪ್ರೀತಿ, ಕಾಳಜಿ ಮತ್ತು ಕೃತಜ್ಞತೆಯಿಂದ ಕಾಣಬಹುದು ಎಂಬ ಸಂದೇಶವನ್ನು ಸಾರಿದೆ.ಮನೆ ಅಂಗಳದಲ್ಲಿ ನಡೆದ ಈ ಅಪರೂಪದ ಸೀಮಂತ ಶಾಸ್ತ್ರ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಆತ್ಮೀಯ ಬಾಂಧವ್ಯಕ್ಕೆ ಸಾಕ್ಷಿಯಾಗಿತ್ತು. ಹಸುವಿಗೆ ಸೀಮಂತ ಮಾಡಿದ್ದು ಸಂಪ್ರದಾಯವಲ್ಲಬದುಕಿನ ಭಾಗವಾಗಿರುವ ಮೂಕಜೀವಿಯೊಂದಿಗಿನ ಪ್ರೀತಿ, ಕಾಳಜಿ ಮತ್ತು ಕೃತಜ್ಞತೆಯನ್ನು ಹಂಚಿಕೊಂಡ ಅಪರೂಪದ ಕ್ಷಣವಾಗಿದೆ.
ಹೈನುಗಾರಿಕೆಯನ್ನು ಜೀವನೋಪಾಯವನ್ನಾಗಿ ಮಾಡಿಕೊಂಡಿರುವ ಕುಟುಂಬ ಬೆಳಗ್ಗೆ ಮತ್ತು ಸಂಜೆ ಸೇರಿ ಪ್ರತಿದಿನ ಸುಮಾರು 100 ಲೀಟರ್ ಹಾಲನ್ನು ಡೈರಿಗೆ ಹಾಕುವ ಜೊತೆಗೆ ಸುತ್ತಮುತ್ತಲಿನ ಮನೆಗಳಿಗೂ ಹಾಲು ಪೂರೈಸುತ್ತಿದೆ. ಕುಟುಂಬದ ಮಾಹಿತಿಯಂತೆ ಹೈನುಗಾರಿಕೆಯಿಂದ ತಿಂಗಳಿಗೆ ಸುಮಾರು 1 ಲಕ್ಷದಷ್ಟು ಆದಾಯ ಗಳಿಸುತ್ತಿದ್ದು, ಹೈನುಗಾರಿಕೆಯಿಂದ ಆದಾಯದಿಂದ ಬಂದ ಹಣದಲ್ಲಿ ಸುಮಾರು 25 ಲಕ್ಷ ಮೌಲ್ಯದ ಥಾರ್ ಕಾರನ್ನು ಖರೀದಿಸಿದ್ದಾರೆ.ಹಾಲು ನೀಡುವ ಕೇವಲ ಜಾನುವಾರು ಎಂದು ನೋಡದೆ ಮನೆ ಸದಸ್ಯಳಂತೆ ಗೌರವಿಸಿ ಸೀಮಂತ ಶಾಸ್ತ್ರ ಮಾಡಿದ್ದೇವೆ. ಇದು ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಕೃತಜ್ಞತೆಯ ಅಪರೂಪ. ಇಂತಹ ಮಾನವೀಯ ಕಾಳಜಿ ಎಲ್ಲರಿಗೂ ಮಾದರಿಯಾಗಲಿ.-ಚಂದ್ರಶೇಖರ್, ರೈತ