ಸಾರಾಂಶ
ರಾತ್ರಿಯ ವೇಳೆಯಲ್ಲಿ ಜರುಗಿದ ವಿಶೇಷ ಪ್ರಾರ್ಥನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರದ್ಧೆ ಸಂಭ್ರಮದಿಂದ ಭಾಗವಹಿಸಿದ್ದರು. ಐ.ಸಿ.ವೈ.ಎಮ್. ಘಟಕದ ಸದಸ್ಯರು ಕ್ರಿಸ್ಮಸ್ ಕ್ಯಾರಲ್ಸ್ ಗೀತೆಗಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕೊಳಲಗಿರಿಯ ಸೆಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಮಂಗಳವಾರ ರಾತ್ರಿ ಯೇಸು ಕ್ರಿಸ್ತರ ಜನ್ಮ ದಿನದ ಸ್ಮರಣೆಗಾಗಿ ಆಚರಿಸುವ ಕ್ರಿಸ್ಮಸ್ ಹಬ್ಬವನ್ನು ಮಂಗಳವಾರ ರಾತ್ರಿಯಂದು ಭಕ್ತಿ, ಶ್ರದ್ಧೆ ಮತ್ತು ಸಡಗರದಿಂದ ಆಚರಿಸಲಾಯಿತು.ಈ ಪ್ರಯುಕ್ತ ಚರ್ಚನ್ನು ವಿದ್ಯುತ್ ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಚರ್ಚ್ ಆವರಣದಲ್ಲಿ ಐ.ಸಿ.ವೈ.ಎಮ್. ಕಾರ್ಯಕರ್ತರು ಬಹಳ ಪರಿಶ್ರಮದಿಂದ ಆಕರ್ಷಕ ಗೋದಲಿಯನ್ನು ರಚಿಸಿದ್ದರು. ನೂರಾರು ಸಂಖ್ಯೆಯಲ್ಲಿ ನಕ್ಷತ್ರ ಗೂಡು ದೀಪಗಳನ್ನು ಅಳವಡಿಸಲಾಗಿತ್ತು.
ರಾತ್ರಿಯ ವೇಳೆಯಲ್ಲಿ ಜರುಗಿದ ವಿಶೇಷ ಪ್ರಾರ್ಥನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರದ್ಧೆ ಸಂಭ್ರಮದಿಂದ ಭಾಗವಹಿಸಿದ್ದರು. ಐ.ಸಿ.ವೈ.ಎಮ್. ಘಟಕದ ಸದಸ್ಯರು ಕ್ರಿಸ್ಮಸ್ ಕ್ಯಾರಲ್ಸ್ ಗೀತೆಗಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಿದರು. ಯೇಸು ಕಂದನಿಗೆ ಪವಿತ್ರ ಬಲಿಪೂಜೆಯ ಮೂಲಕ ನಮಿಸಲಾಯಿತು.ಹಬ್ಬದ ಬಲಿಪೂಜೆಯನ್ನು ಮೂಡುಬೆಳ್ಳೆ ಕಾಪುಜಿನ್ ಗುರುಗಳ ಕಾನ್ವೆಂಟಿನ ಸದಸ್ಯರಾದ ಅತೀ ವಂದನೀಯ ಲಾರೆನ್ಸ್ ರೋಡ್ರಿಗಸ್ ನೆರವೇರಿಸಿದರು. ಅವರೊಂದಿಗೆ ಸಹ ಯಾಜಕರಾಗಿ ಜೋಸೆಫ್ ಮಚಾದೋ, ದಿಯೋಕಾನ್ ಬ್ರದರ್ ಒಸ್ವಲ್ಡ್ ವಾಜ್ ಸಹಕರಿಸಿದರು. ಗುರುಗಳು ಭಕ್ತಾದಿಗಳಿಗೆ ಮನಮಟ್ಟುವ ಕ್ರಿಸ್ಮಸ್ ಸಂದೇಶವನ್ನು ನೀಡಿದರು.ಬಲಿಪೂಜೆಯ ಬಳಿಕ ಐ.ಸಿ.ವೈ.ಎಮ್. ಘಟಕ ಹಾಗೂ ಕಥೊಲಿಕ್ ಸಭಾ ವತಿಯಿಂದ ಸಾಂತಕ್ಲೋಸ್ ಪ್ರದರ್ಶನ, ಕೇಕ್ ವಿತರಣೆ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆದವು.