ಸಾರಾಂಶ
ಮನ-ಮನೆಗಳಲ್ಲಿ ಸಂಭ್ರಮದ ದೀಪಾವಳಿ
ಕನ್ನಡಪ್ರಭ ವಾರ್ತೆ ಶಹಾಪುರ
ಬರದ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ತಾಲೂಕಿನ ಜನತೆ ಸಿದ್ಧತೆ ನಡೆಸಿದ್ದು, ನಗರದ ಮಾರುಕಟ್ಟೆಯಲ್ಲಿ ಸೋಮವಾರ ಹಬ್ಬದ ಸಾಮಗ್ರಿಗಳ ಖರೀದಿ ಜೋರಾಗಿತ್ತು.ನಗರದಲ್ಲಿ ಕಳೆದೆರಡು ದಿನಗಳಿಂದ ಹಬ್ಬದ ಖರೀದಿಗಾಗಿ ಭರ್ಜರಿಯಾಗಿ ನಡೆದಿದೆ. ಅಂಗಡಿ ಮುಂಗಟ್ಟುಗಳನ್ನು ಅಲಂಕರಿಸಿರುವುದರಿಂದ ಮಾರುಕಟ್ಟೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ನಗರದ ಮಾರುಕಟ್ಟೆ, ಮಾರುತಿ ರೋಡ್, ಬಸವೇಶ್ವರ ವೃತ್ತ, ಹಳೆ ಬಸ್ ನಿಲ್ದಾಣ ರಸ್ತೆಯುದ್ದಕ್ಕೂ ಬೀದಿ ವ್ಯಾಪಾರಿಗಳು ಸೇಬು, ದಾಳಿಂಬೆ, ಸೀತಾಫಲ, ಕಿತ್ತಳೆ, ಚಿಕ್ಕು, ಪೇರಲ, ಮೋಸಂಬಿ, ಕಿವಿ, ಡ್ರ್ಯಾಗನ್, ಪಪ್ಪಾಯ ಹಣ್ಣುಗಳು, ತೆಂಗಿನಕಾಯಿ ಮತ್ತು ಹೂವುಗಳು, ಬಾಳೆ ದಿಂಡು ಬೂದಗುಂಬಳಕಾಯಿಯ ವ್ಯಾಪಾರ ವಹಿವಾಟು ಭರ್ಜರಿಯಾಗಿತ್ತು.ಮಣ್ಣಿನ ದೀಪಗಳಿಗೆ ಕುಂದಿದ ಬೇಡಿಕೆ:
ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿವಿಧ ರೀತಿಯ ಅಲಂಕಾರಿಕ ಮಣ್ಣಿನ ದೀಪಗಳನ್ನು ನಗರದ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಮಾರಾಟಕ್ಕಿಡಲಾಗಿದೆ. ಚಿಕ್ಕ ದೀಪಗಳು 15 ರು.ಗೆ ನಾಲ್ಕರಂತೆ ಮಾರಾಟವಾಗುತ್ತಿವೆ. ಸೈಜಿಗೆ ತಕ್ಕಂತೆ ರೇಟು ಇದೆ. ಈ ಸಲ ಮಣ್ಣಿನ ದೀಪ ಖರೀದಿ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಬೇರೆ ಕಡೆಯಿಂದ ಸಾಲ ಮಾಡಿ ಹೆಚ್ಚಿನ ದೀಪಗಳನ್ನು ಖರೀದಿಸಿ ತಂದಿದ್ದೇವೆ. ಈಗಕೊಳ್ಳುವವರಿಲ್ಲದೆ ತಂದಿರುವ ದೀಪಗಳು ಹಾಗೆ ಉಳಿದಿದೆ ಸಾಲ ಹೇಗೆ ತೀರಿಸುವುದು ಹೇಗೆ ಅಂತ ಚಿಂತೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ಕುಂಬಾರ ಅಮರಪ್ಪ .ಪಟಾಕಿ ವ್ಯಾಪಾರ ಜೋರು:
ದೀಪಾವಳಿ ಹಬ್ಬದಲ್ಲಿ ನಾಗರಿಕರು ಪಟಾಕಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳ ಕಂಡಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಪಟಾಕಿ ವ್ಯಾಪಾರ ಜೋರಾಗಿದೆ. ಪಟಾಕಿ ಬೆಲೆಯಲ್ಲಿ ಹೆಚ್ಚಳ ಕಂಡರೂ ಕೊಳ್ಳುವವರ ಸಂಖ್ಯೆ ಈ ವರ್ಷ ಜಾಸ್ತಿ ಆಗಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರಿಯೊಬ್ಬರು.ದೀಪಾವಳಿ ಹಬ್ಬಕ್ಕ ಹೋದ ವರ್ಷಕ್ಕಿಂತಲೂ ಈ ವರ್ಷ ಹಣ್ಣಿನ ವ್ಯಾಪಾರ ಜಾಸ್ತಿ ಇದೆ. ನಾಲ್ಕು ಕಾಸು ಉಳಿತಾಯ ಆಗಿದೆ ಎಂದು ಹಣ್ಣಿನ ವ್ಯಾಪಾರಿ ಮಲ್ಲಮ್ಮ ಸಂತಸ ವ್ಯಕ್ತಪಡಿಸಿದರು.
ದೀಪಾವಳಿ ಹಬ್ಬಕ್ಕೆ ಬೇಕಾದ ಕಿರಾಣಿ ವ್ಯಾಪಾರ ಈ ವರ್ಷ ಉತ್ತಮವಾಗಿದೆ. ಹಬ್ಬಕ್ಕೆ ಬ್ಯಾಳಿ, ಎಣ್ಣೆ, ಬೆಲ್ಲ, ಹಿಟ್ಟು ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಕೊಳ್ಳುವವರ ಸಂಖ್ಯೆ ಜಾಸ್ತಿ ಕಂಡು ಬಂದಿತ್ತು.- ರಹಿಮತ್, ಕಿರಾಣಿ ವ್ಯಾಪಾರಿ. ಶಹಾಪುರ.