ಚೌಡೇಶ್ವರಿ ದೇವಾಲಯದ ಅನುವಂಶಿಕ ಧರ್ಮದರ್ಶಿಗಳಾದ ಡಾ. ರಾಮಪ್ಪನವರ ಅವಿರತ ಶ್ರಮ ಮತ್ತು ಭಕ್ತಿಯ ಪ್ರತೀಕವಾಗಿ ಇಂದು ಇಡೀ ದೇಶಾದ್ಯಂತ ಭಕ್ತರು ದೇವಿಯನ್ನು ಕಣ್ತುಂಬಿಕೊಳ್ಳಲು ಅವಕಾಶವಾಗಿದೆ ಎಂದು ಸಾಗರ ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಚೌಡೇಶ್ವರಿ ದೇವಾಲಯದ ಅನುವಂಶಿಕ ಧರ್ಮದರ್ಶಿಗಳಾದ ಡಾ. ರಾಮಪ್ಪನವರ ಅವಿರತ ಶ್ರಮ ಮತ್ತು ಭಕ್ತಿಯ ಪ್ರತೀಕವಾಗಿ ಇಂದು ಇಡೀ ದೇಶಾದ್ಯಂತ ಭಕ್ತರು ದೇವಿಯನ್ನು ಕಣ್ತುಂಬಿಕೊಳ್ಳಲು ಅವಕಾಶವಾಗಿದೆ ಎಂದು ಸಾಗರ ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಅವರು ಶ್ರೀ ಕ್ಷೇತ್ರ ಸಿಗಂದೂರಿನ ಹೀಗೆ ಕಣಿವೆಯ ಮೂಲಸ್ಥಾನದಲ್ಲಿ ಧರ್ಮ ಜ್ಯೋತಿಗೆ ಚಾಲನೆ ನೀಡಿ ಬಳಿಕ ಮಕರ ಸಂಕ್ರಮಣದ ಜಾತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀ ಕ್ಷೇತ್ರವು ಈ ಮಟ್ಟಕ್ಕೆ ಬೆಳೆದು ನಿಂತಿರುವುದು ಅತ್ಯಂತ ಸಂತೋಷವನ್ನುಂಟು ಮಾಡಿದ್ದು, ಇದಕ್ಕೆ ಪ್ರಮುಖ ಕಾರಣ ದೇವಿಯ ಅಪಾರ ಮಹಿಮೆ ಮತ್ತು ಬಡವ ಬಲ್ಲಿದ ಎನ್ನದೆ ಮೊದಲಿನಿಂದಲೂ ಸಹಕಾರ ಮನೋಭಾವನೆಯನ್ನು ಬೆಳೆಸಿಕೊಂಡಿರುವ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಸಹಕಾರ ಮನೋಭಾವನೆ ಪ್ರಮುಖ ಕಾರಣವಾಗಿದೆ ಎಂದರು. ಜನರು ಮೂಢನಂಬಿಕೆಗಳನ್ನು ಬಿಟ್ಟು ದೇವರ ಕೃಪಗೆ ಪಾತ್ರರಾದಲ್ಲಿ ಯಶಸ್ಸು ಖಂಡಿತ ದೊರಕುತ್ತದೆ.

ಈ ಹಿಂದೆ ಲಾಂಚ್‌ನಲ್ಲಿ ಪ್ರಯಾಣಿಸುವ ಸಂಬಂಧ ಆರು ಗಂಟೆಗೆ ಜಾತ್ರೆಯ ಕಳೆ ಅಡಗಿ ಹೋಗುತ್ತಿತ್ತು, ಆದರೆ ಸೇತುವೆಯಾದ್ದರಿಂದ ಜಾತ್ರೆಗೆ ಹೊಸ ಕಳೆ ಬಂದಿದೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ ಕ್ಷೇತ್ರದ ಡಾ. ಶ್ರೀ ರಾಮಪ್ಪನವರು ಮಾತನಾಡಿ, ಸಿಗಂದೂರು ಸೇತುವೆಯಾಗಿರುವುದು ದೇವಿಯ ಕೃಪೆಯಿಂದ ಹೊರತು ಬೇರೆ ಯಾವ ಕಾರಣದಿಂದಲ್ಲ. ಹಲವು ವರ್ಷಗಳಿಂದ ಮುಳುಗಡೆ ಸಂತ್ರಸ್ತರು ಅನುಭವಿಸಿದ ನರಕ ಯಾತನೆಗೆ ದೇವಿ ಕರುಣಿಸಿದ ಪುಣ್ಯ ಪ್ರಸಾದ ಎಂದರು. ದೇವಸ್ಥಾನವು ಯಾವಾಗಲೂ ಕಷ್ಟದಲ್ಲಿರುವ ಮತ್ತು ನಾರಾಯಣ ಗುರುಗಳ ಮಾರ್ಗದರ್ಶನದಂತೆ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ದೇವಸ್ಥಾನದ ಉನ್ನತೀಕರಣಕ್ಕೆ ಸಾಕ್ಷಿಯಾಗಿದೆ ಎಂದರು.

ಜಾತ್ರೆಯ ಅಂಗವಾಗಿ ಪ್ರಾತಕಾಲದಿಂದಲೇ ನವಚಂಡಿಕಾ ಹವನ, ಚಂಡಿಕಾ ಹವನ ನಡೆದವು. ಈ ವೇಳೆ ಸಾರಗನ ಜಡ್ಡು ಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೇರವೇರಿದವು. ಅಶೀರ್ವಚನ ನೀಡಿದ ಅವರು, ಸಂಕ್ರಾಂತಿ ಹಬ್ಬ ಎಲ್ಲ ಸಮುದಾಯದವರಿಗೆ ಸಮೃದ್ಧಿ ತರಲಿ ಎಂದರು.ಮೂಲಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು: ಹೀಗೆ ಕಣಿವೆಯ ದೇವಿಯ ಮೂಲ ಸ್ಥಳದಿಂದ ನೂರಾರು ಮಹಿಳೆಯರು ಪೂರ್ಣ ಕುಂಭ ಕಳಶ ಹೊತ್ತು ಚೌಡೇಶ್ವರಿ ದೇವಿಗೆ ಉಘೇ ಉಘೇ ಎಂದು ಎರಡು ಕಿಲೋಮೀಟರ್‌ಗಿಂತಲೂ ಹೆಚ್ಚು ಮೆರವಣಿಗೆಯಲ್ಲಿ ಪಾಲ್ಗೊಂಡು ದೇವಸ್ಥಾನದತ್ತ ಹೆಜ್ಜೆ ಹಾಕಿರುವುದು ವಿಶೇಷವಾಗಿತ್ತು.

ಪತ್ರಿಕೆಗಳು ಜನಪರವಾಗಿರಲಿ:

ಸಮಾಜದ ನ್ಯೂನ್ಯತೆಗಳನ್ನು ಎತ್ತಿ ಹಿಡಿಯಬೇಕಾದ ಪತ್ರಿಕೆಗಳು ಇಂದು ಜನರಿಗೆ ಸಾಮಾಜಿಕ ನ್ಯಾಯ ನೀಡುವಲ್ಲಿ ಎಡವುತ್ತಿವೆ. ನಾಡಿಗಾಗಿ ಮನೆ, ಭೂಮಿ ಕಳೆದುಕೊಂಡ ನೊಂದವರ ವಿರುದ್ಧವೇ ಬಲಾಢ್ಯ ಶಕ್ತಿಗಳು, ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅರಣ್ಯ, ಜೀವ ವೈವಿಧ್ಯ ಹೆಸರಿನಲ್ಲಿ ದಮನಿತರ ಸಮುದಾಯಗಳ ಧ್ವನಿ ಆಡಗಿಸುವ ಕಾರ್ಯ ನಡೆಯುತ್ತಿದೆ ಎಂದು ಧರ್ಮಾಧಿಕಾರಿ ಎಸ್ ರಾಮಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅನ್ನದಾಸೋಹದಲ್ಲಿ ತುಂಬಿ ತುಳುಕಿದ ಭಕ್ತರು: ಪ್ರಥಮ ದಿನದ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಅನ್ನಪ್ರಸಾದ ಪಡೆದರು. ಭಕ್ತಾದಿ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ನಿರಂತರವಾಗಿ ಬೆಳಗ್ಗೆ, ಮಧ್ಯಾಹ್ನ, ಸಂಜೆ, ದೇವಸ್ಥಾನದ ಸಮಿತಿಯಿಂದ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.

ದೇವಿ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ಕೆಲವು ತಿಂಗಳುಗಳ ಹಿಂದೆ ಲಾಂಚಿನಲ್ಲಿ ಪ್ರಯಾಣಿಸಿ ಸಿಗಂದೂರು ತಲುಪಬೇಕಾದ ಪರಿಸ್ಥಿತಿ ಇದ್ದರಿಂದ ಭಕ್ತರ ಸಂಖ್ಯೆ ಕಡಿಮೆ ಇರುತ್ತಿತ್ತು. ಆದರೆ ಸಿಗಂದೂರು ಸೇತುವೆ ಆದ ನಂತರದಲ್ಲಿ ಸಾವಿರಾರು ಭಕ್ತರು ತಂಡೋಪತಂಡವಾಗಿ ಹರಿದು ಬಂದದ್ದು ವಿಶೇಷವಾಗಿತ್ತು . ಅದರಲ್ಲೂ ಮಹಿಳಾ ಭಕ್ತರು ಆಗಮಿಸಿ ದೇವಿಗೆ ಮಡಿಲ ಅಕ್ಕಿ, ಬೆಲ್ಲ ವಿವಿಧ ಸೇವೆ ಹಾಗೂ ಹರಕೆ ಪೂಜೆ ಸಲ್ಲಿಸಿ ಮುಡಿಗಂಧ ಪ್ರಸಾದ ಸ್ವೀಕರಿಸಿದರು.

ವಿದ್ಯುತ್ ದೀಪಗಳಿಂದ ಸೇತುವೆಗೆ ಅಲಂಕಾರ

ಶರಾವತಿ ನದಿಗೆ ಹೊಸದಾಗಿ ಸೇತುವೆ ನಿರ್ಮಾಣವಾದ ನಂತರ ನಡೆದ ಮೊದಲ ಜಾತ್ರೆಗೆ ಹಲವಾರು ಭಕ್ತರು ವಾಹನಗಳಲ್ಲಿ ಆಗಮಿಸಿದ್ದು, ಸೇತುವೆಯುದ್ದಕ್ಕೂ ತಳಿರು ತೋರಣ ಹಾಗೂ ವಿಶೇಷ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸೇತುವೆಯ ಮೇಲೆ ನಿಂತು ಪ್ರವಾಸಿಗರು ಫೋಟೋ ತೆಗೆದುಕೊಳ್ಳುವುದು ಮಾಮೂಲಿಯಾಗಿತ್ತು.