ಸಾರಾಂಶ
ಕನಕಗಿರಿ:
ಮೊಹರಂ ಹಬ್ಬದಂಗವಾಗಿ ಪಟ್ಟಣದ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರುಗಳು ಭಾನುವಾರ ಸಂಜೆ ಸಾವಿರಾರು ಜನಸ್ತೋಮ ಮಧ್ಯೆ ಸಂಭ್ರಮದ ವಿದಾಯಕ್ಕೆ ಸಾಕ್ಷಿಯಾಯಿತು.ಮೊಹರಂ ಕೊನೆಯ ದಿನವಾದ ಭಾನುವಾರ ಸಂಜೆ ಹಟೇಲಭಾಷಾ, ಹುಸೇನಭಾಷಾ, ಹೊನ್ನೂರಭಾಷಾ, ಹಸೇನಭಾಷಾ, ಲಾಲಾಸಾಬ್, ಮೌಲಾಲಿ, ಕಾಶಿಂಭಾಷಾ
ಸೇರಿ ನಾನಾ ಅಲಾಯಿ ದೇವರುಗಳು ರಾಜಬೀದಿಯ ಗಜಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಸೇರಿ ಪರಸ್ಪರ ಆಲಂಗಿಸಿಕೊಂಡು ವಿಸರ್ಜನೆಗಾಗಿ ಹಳ್ಳಕ್ಕೆ ತೆರಳಿದವು.ಅಲಾಯಿ ದೇವರುಗಳ ವಿಸರ್ಜನೆ ನಿಮಿತ್ತ ಗಜಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಯುವಕರು ಹಲಗೆ, ತಾಷಾ ಬಾರಿಸುವ ಮೂಲಕ ಅಲಾಯಿ ಹೆಜ್ಜೆ ಹಾಕಿದರು. ಯುವಕರ ಕೋಲಾಟ ಗಮನ ಸೆಳೆಯಿತು. ರಸ್ತೆಯ ಅಕ್ಕಪಕ್ಕದ ಅಂಗಡಿ, ಮನೆಗಳ ಮೇಲ್ಚಾವಣಿ ಮೇಲೆ ಮಹಿಳೆಯರು, ಚಿಕ್ಕಮಕ್ಕಳು ನಿಂತು ಅಲಾಯಿ ದೇವರುಗಳ ವಿಸರ್ಜನಾ ಮುನ್ನಾ ನಡೆದ ದೇವರುಗಳ ಸಮಾಗಮದ ಕ್ಷಣ ಕಣ್ತುಂಬಿಕೊಂಡರು. ಈ ಸುಸಂದರ್ಭದಲ್ಲಿ ಪುಷ್ಪ ಹಾಗೂ ಮಂಡಕ್ಕಿ ಅರ್ಪಿಸಿ, ಚಪ್ಪಾಳೆ ತಟ್ಟಿ ಖುಷಿಪಟ್ಟರು.
ಹುಲಿಹೈದರದಲ್ಲಿ ಮೊಹರಂ ಸಂಭ್ರಮ:ತಾಲೂಕು ವ್ಯಾಪ್ತಿಯ ಹುಲಿಹೈದರ ಗ್ರಾಮದಲ್ಲಿ ಕಳೆದ ವರ್ಷದಿಂದ ಮೊಹರಂ ಆರಂಭಗೊಂಡಿದ್ದು, ಈ ಬಾರಿ ಸಂಭ್ರಮದಿಂದ ಆಚರಿಸಲಾಯಿತು. ಮಳೆ, ಬೆಳೆ ಉತ್ತಮವಾಗಿ ಆಗಲಿ, ರೈತ ಬಾಳು ಹಸನಾಗಲೆಂದು ಇದೇ ವೇಳೆ ಗ್ರಾಮಸ್ಥರು ಪ್ರಾರ್ಥಿಸಿದರು.
ಬಿಬಿ ಫಾತೀಮಾಗೆ ನಮನ:ಸುಮಾರು ೧೫ಕ್ಕೂ ಹೆಚ್ಚು ಅಲಾಯಿ ದೇವರು ಸರದಿಯಲ್ಲಿ ಬಂದು ಮಾತೃ ಸ್ವರೂಪಿಯಾದ ಬಿಬಿ ಫಾತೀಮಾ ಅವರಿಗೆ ಮಂಡಿಯೂರಿ ನಮಸ್ಕರಿಸುವ ಸನ್ನಿವೇಶ ನೆರದಿದ್ದವರನ್ನು ಭಾವುಕಗೊಳಿಸಿತು. ತಾಯಿಗೆ ನಮಿಸುವಾಗ ಚಿಕ್ಕಮಕ್ಕಳು, ಮಹಿಳೆಯರು ಮಂಡಕ್ಕಿ, ಪುಷ್ಪ ಅರ್ಪಿಸಿ ನಮಸ್ಕರಿಸುವ ಮೂಲಕ ಅಂತಿಮ ವಿದಾಯ ಹೇಳಿದರು.
ವ್ರತ ವಿಸರ್ಜನೆ:ಮೊಹರಂ ನಿಮಿತ್ತ ಐದು ದಿನ ಫಕೀರರಾಗಿ ವ್ರತಾಚರಣೆ ನಡೆಸಿದ ಭಕ್ತರು ಅಲಾಯಿ ದೇವರ ದಫನ್ ಬಳಿಕ ಮಸೀದಿಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿ ವಿಸರ್ಜಿಸಿದರು. ಭಕ್ತರು ಐದು ದಿನ ಚಪ್ಪಲಿ ಹಾಕದೆ, ಸ್ನಾನ ಮಾಡದೆ ಕೆಂಪು ಲಾಡಿ(ದಾರ) ಕಟ್ಟಿಕೊಂಡು ವ್ರತಾಚರಣೆ ಕೈಗೊಂಡಿರುತ್ತಾರೆ. ದಫನ್ ನಂತರ ವಿಸರ್ಜನೆ ನಡೆಸಿ ನಂತರ ಮನೆಯಲ್ಲಿ ಸಾಮೂಹಿಕ ಊಟೋಪಚಾರ ನಡೆಯಿತು.