ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ನಗರಸಭೆ ಕಾರ್ಯಾಲಯ ಸಭಾಂಗಣದಲ್ಲಿ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಗರಸಭೆ ವಿಶೇಷ ಸಾಮಾನ್ಯ ಸಭೆ ಜರುಗಿತು.2025 -2026ನೇ ಸಾಲಿನ ಎಸ್‌ಎಫ್‌ಸಿ ಮುಕ್ತನಿಧಿ ಶೇ.5ರ ಯೋಜನೆಯಲ್ಲಿ ನಗರದಲ್ಲಿ ವಾಸವಾಗಿರುವ ದಿವ್ಯಾಂಗರ ಅನಿಲ ರಹಿತ ಕುಟುಂಬಗಳಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಅಡುಗೆ ಅನಿಲ ಸಂಪರ್ಕ ಪಡೆಯಲು ಸಹಾಯಧನ ಒದಗಿಸುವುದು. ಅಗತ್ಯವಿದ್ದಲ್ಲಿ ಸಂಪರ್ಕದೊಂದಿಗೆ ಒಂದು ಸ್ಟೌವ್ ಹಾಗೂ ಒಂದು ಸಿಲಿಂಡರ್ ಒದಗಿಸಲು ಫಲಾನುಭವಿಗಳನ್ನು ಆಯ್ಕೆ ಮಾಡುವುದು.
2025-2026ನೇ ಸಾಲಿನ ನಗರ ಸಭೆ ನಿಧಿಯ ಶೇ 24.10 ರಷ್ಟು ಯೋಜನೆಯಲ್ಲಿ ನಗರದ ವ್ಯಾಪ್ತಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ ಪತ್ರಕರ್ತರಿಗೆ ಲ್ಯಾಪ್ ಟಾಪ್ ಖರೀದಿಸಲು ಸಹಾಯಧನ ನೀಡುವ ಬಗ್ಗೆ ಹಾಗೂ ಫಲಾನುಭವಿಗಳನ್ನು ಆಯ್ಕೆ ಮಾಡುವ ವಿಚಾರ ಕುರಿತು ಮತ್ತು ನಗರಸಭೆ ಘನತ್ಯಾಜ್ಯ ವಸ್ತು ನಿರ್ವಹಣೆ ಸಂಸ್ಕರಣ ಘಟಕಕ್ಕೆ ವಾಹನ ಚಾಲಕರು, ಸಿಬ್ಬಂದಿ ಹಾಗೂ ಸಹಾಯಕರನ್ನು ಹೊರ ಗುತ್ತಿಗೆ ಆಧಾರದ ಮೇಲೆ ನಿಯೋಜಿಸಿಕೊಳ್ಳಲು ಬಂದಿರುವ ಟೆಂಡರ್ ಪರಿಶೀಲಿಸಿ ಅನುಮೋದಿಸುವ ವಿಚಾರವಾಗಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.ಈ ವೇಳೆ ನಗರಸಭೆ ಸದಸ್ಯ ಮಹೇಶ್ ಪಲ್ಲವ ಮಾತನಾಡಿ, ನಗರಸಭೆ ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದು, 47ಜನ ಕಾರ್ಮಿಕರನ್ನು ನೇಮಿಸಿಕೊಂಡಿದ್ದು, ಇದೀಗ ಅವರಲ್ಲಿ ಕೆಲವರನ್ನು ಹೊರ ಹಾಕುವುದು ಯಾಕೆ ಎಂದು ಪ್ರಶ್ನಿಸಿದರು. ಜತೆಗೆ ಪೌರ ಕಾರ್ಮಿಕರಾಗಿದ್ದುಕೊಂಡು ಸೂಪರ್ ವೈಸರ್ ಎಂದು ಹೇಳಿಕೊಂಡು ಕಚೇರಿಯಲ್ಲಿಯೇ ಕಾಲ ಹಾಕುತ್ತಿದ್ದಾರೆ. ಅವರು ಮೊದಲು ಕೆಲಸ ಮಾಡಲಿ ಎಂದರು.
ಸದಸ್ಯ ಮಂಜುನಾಥ್ ಮಾತನಾಡಿ, ನಗರಸಭೆಗೆ ಎಷ್ಟು ಜನ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ಇದೆ, ಈಗ ಎಷ್ಟು ಜನ ಕೆಲಸಕ್ಕೆ ತೆಗೆದುಕೊಂಡಿರುವುದು ಹಾಗೂ ಆರೇಳು ತಿಂಗಳಿಂದ ಕರ್ತವ್ಯ ನಿರ್ವಹಿಸಿರುವವರನ್ನು ಸಹ ಕೆಲಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿ ಎಂದರು.ಮಾಜಿ ನಗರಸಭೆ ಅಧ್ಯಕ್ಷ ಹಾಲಿ ಸದಸ್ಯ ಅಜಯ್ ಕುಮಾರ್ ಮಾತನಾಡಿ, 2011ರಲ್ಲಿ ನಗರದಲ್ಲಿ 56,416 ಮಂದಿ ಜನಸಂಖ್ಯೆ ಇತ್ತು. ಇಂದಿಗೆ ಸುಮಾರು 75 ಸಾವಿರ ದಷ್ಟು ಜನಸಂಖ್ಯೆ ಹೆಚ್ಚಿದೆ. ಸುಮಾರು 500 ಜನಕ್ಕೆ ಒಬ್ಬರಂತೆ 75 ಜನರನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಅವಕಾಶ ನೀಡಿದ್ದರು. ಇದೀಗ ಅವರಲ್ಲಿ ಯಾರನ್ನೂ ಕೆಲಸದಿಂದ ತೆಗೆಯುವುದು ಬೇಡ ಎಂದರು.
ಬಿ.ಎನ್. ಪ್ರಕಾಶ್ ಮಾತನಾಡಿ, ಪೌರ ಕಾರ್ಮಿಕರನ್ನು ಬೀದಿ ಪಾಲು ಮಾಡುವ ಹಾಗಿಲ್ಲ. ಹೆಚ್ಚಿಗೆ ಇರುವ ಆರೇಳು ಕಾರ್ಮಿಕರನ್ನು ತೆಗೆದುಕೊಳ್ಳಲು ಸಚಿವರಿಂದ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಸೋಣ. ಜನಸಂಖ್ಯೆ ಆಧಾರದ ಮೇಲೆ ಉಳಿದವರನ್ನು ಅನುಮತಿ ಮಾಡಿಸಿ ಸಂಬಳ ಕೊಡಿಸಬೇಕು ಎಂದರು.ಸದಸ್ಯರ ಮಾತಿಗೆ ಪೌರಾಯುಕ್ತ ಎ.ವಾಸಿಂ ಉತ್ತರಿಸಿ, ಸೊಮೇರಹಳ್ಳಿ ತಾಂಡಾ ನಗರಸಭೆಗೆ ಸೇರಿದೆ. ಹಾಗಾಗಿ ಜನಸಂಖ್ಯೆ ಹೆಚ್ಚಾದದ್ದನ್ನು ತೋರಿಸಿ ಉಳಿದವರನ್ನು ಸಹ ಕೆಲಸದಲ್ಲೇ ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುವುದು ಎಂದರು.
ಈ ವೇಳೆ ನಗರಸಭೆ ಪೌರಾಯುಕ್ತ ಎ.ವಾಸಿಂ, ನಗರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ವಿಠ್ಠಲ ಪಾಂಡುರಂಗ, ಮಮತಾ, ಎಂಡಿ ಸಣ್ಣಪ್ಪ, ರತ್ನಮ್ಮ, ನಗರಸಭೆ ಸದಸ್ಯರಾದ ಗುಂಡೇಶ್ ಕುಮಾರ್, ಚಿತ್ರಜಿತ್ ಯಾದವ್, ಜಿ.ಎಸ್.ತಿಪ್ಪೇಸ್ವಾಮಿ, ಅನಿಲ್ ಕುಮಾರ್, ಈರಲಿಂಗೇಗೌಡ, ಸಮೀವುಲ್ಲಾ, ಜಗದೀಶ್, ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.ಸಂತೆ ಮಾರುಕಟ್ಟೆಯಾದ ನಗರಸಭೆ ಸಾಮಾನ್ಯ ಸಭೆ:
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪೌರಕಾರ್ಮಿಕರ ನೇಮಕಾತಿಯ ವಿಚಾರವಾಗಿ ಚರ್ಚೆ ನಡೆಯುತ್ತಿದ್ದಾಗ ಪ್ರತಿಯೊಬ್ಬ ನಗರಸಭೆ ಸದಸ್ಯರೂ ಒಬ್ಬೊಬ್ಬ ನೌಕರರನ್ನು ಸೂಚಿಸಿ ಎಂದಾಗ ನಾಮ ನಿರ್ದೇಶಿತ ಸದಸ್ಯರು ಹಳ್ಳಿಗಳ ನೌಕರರನ್ನು ಆಯ್ಕೆ ಮಾಡಬಾರದು. ನಮಗೂ ಸಲಹೆ ನೀಡುವ ಅಧಿಕಾರವಿದೆ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಆಗ ಚುನಾಯಿತ ಸದಸ್ಯರು ಎಲ್ಲರೂ ಒಗ್ಗೂಡಿ ನೀವು ಸಲಹೆ ನೀಡಬೇಕಷ್ಟೆ, ಆಯ್ಕೆ ಸ್ವಾತಂತ್ರ್ಯ ನಮ್ಮದು ಎಂದು ಎಲ್ಲರೂ ಹೊರ ನಡೆಯಲು ಪ್ರಯತ್ನಿಸಿದರು. ಆಗ ಚುನಾಯಿತ ಸದಸ್ಯರಿಗೂ, ನಾಮ ನಿರ್ದೇಶಿತ ಸದಸ್ಯರಿಗೂ ಏರು ಧ್ವನಿಯ ವಾಗ್ವಾದ ನಡೆಯಿತು.