ಸಾರಾಂಶ
ಗುರುಮಠಕಲ್‌ದ ಸೈದಾಪುರ ಪಟ್ಟಣದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಮಹಿಳೆಯರು ಮಕ್ಕಳ ತೆಲೆಯ ಮೇಲೆ ಹಣ್ಣು ಸೇರಿದಂತೆ ಇತರೆ ವಸ್ತುಗಳನ್ನು ಎರೆದು ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಸೈದಾಪುರ ಪಟ್ಟಣದಲ್ಲಿ ಸಂಕ್ರಾಂತಿ ಹಬ್ಬವನ್ನು ವಿವಿಧ ಧಾರ್ಮಿಕ ಆಚರಣೆಯೊಂದಿಗೆ ಮಹಿಳೆಯರು, ಮಕ್ಕಳು ಸಂಭ್ರಮದಿಂದ ಆಚರಿಸಿದರು.ಎಳ್ಳು-ಬೆಲ್ಲ ತಗೊಂಡು ಒಳ್ಳೆ ಮಾತನಾಡೋಣ ಎಂದು ಶುಭ ಹಾರೈಸಿದರು. ಮಕ್ಕಳ ತಲೆ ಮೇಲೆ ಹಣ್ಣು, ಕಬ್ಬಿನ ಹಾಗೂ ಬಾಳೆ ಹಣ್ಣಿನ ತುಂಡುಗಳನ್ನು ಚುರುಮುರಿಯಲ್ಲಿ ಬೆರೆಸಿ ಎರೆದು ಆರತಿ ಮಾಡಿದರು.
ಈ ವೇಳೆ ಉಪನ್ಯಾಸಕಿ ಶ್ವೇತಾ ರಾಘವೇಂದ್ರ ಪೂರಿ ಮಾತನಾಡಿ, ಹಬ್ಬದ ಸಂತಸದೊಡನೆ ಮಕ್ಕಳ ಹಟಮಾರಿತನ ತುಂಟತನ ಕಡಿಮೆ ಆಗುವವೆಂಬ ಭಾವನೆ ಇದೆ. ಎಳ್ಳಿನಿಂದ ರಟ್ಟುಗಳಲ್ಲಿ ಬಳೆ, ಕಿರೀಟ, ಸೊಂಟಪಟ್ಟಿ, ಕಾಲಿಗೆ ಗೆಜ್ಜೆಯಂತೆ, ಕೈಯಲ್ಲಿ ಕೊಳಲು, ಸರ ಹೀಗೆ ತಯಾರಿಸಿ ಮಕ್ಕಳಿಗೆ ಅವುಗಳನ್ನು ದಾರಗಳಿಂದ ಕಟ್ಟಿ ಕೃಷ್ಣ ರಾಧೆಯರನ್ನಾಗಿ ಕೆಲವರು ಆಚರಿಸಿ ಹಬ್ಬದ ಮೆರುಗು ಹೆಚ್ಚಿಸುತ್ತಾರೆ ಎಂದು ಹೇಳಿದರು.ಎಳ್ಳು ಕೊಬ್ಬರಿಗಳಲ್ಲಿ ಎಣ್ಣೆ ಅಂಶ ಇರುತ್ತದೆ. ಇವು ಶೀತ ವಾತವನ್ನು ದೂರ ಮಾಡುತ್ತವೆ. ಚಳಿಗಾಲದಲ್ಲಿ ಪಚನ ಶಕ್ತಿ ಕಡಿಮೆ ಆಗಿರುವುದರಿಂದ ಈ ವೇಳೆಯಲ್ಲಿ ತಿನ್ನುವ ಕಬ್ಬು ಪಚನ ಕ್ರಿಯೆಗೆ ಸಹಾಯ ಮಾಡುತ್ತದೆ. ಎಳ್ಳು ಕಡಲೇ ಬೀಜಗಳು ಕ್ಯಾಲ್ಸಿಯಂನ ಆಗರವಾದರೆ ಬೆಲ್ಲದ ಕಬ್ಬಿಣಾಂಶದಿಂದ ದೇಹಕ್ಕೆ ಪೋಷಕಾಂಶಗಳು ದೊರಕುತ್ತವೆ. ಇದನ್ನು ಪರಿಗಣಿಸಿ ಎಳ್ಳು ತೈಲಯುಕ್ತವಾಗಿದ್ದು, ಅದು ಪಿತ್ತಕಾರಕವಾದದುರಿಂದ ಅದರ ಜೊತೆ ಬೆಲ್ಲ ಸೇರಿಸುತ್ತಾರೆ. ಒಣಕೊಬ್ಬರಿ ಹರಿಗಡಲೆ ಬೆರೆಸಿ ಮಾಡುವ ಮಿಶ್ರಣವೇ ಎಳ್ಳು ಬೆಲ್ಲವಾಗಿದೆ ಎಂದು ಹಬ್ಬದ ಮಹತ್ವ ತಿಳಿಸಿದರು. ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.