ಒಂದರಿಂದ 7 ನೇ ತರಗತಿ ವರೆಗೆ ಹತ್ತೇ ಮಕ್ಕಳಿರುವ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಸ್ಕೂಲ್‌ಡೇ!

| N/A | Published : Feb 27 2025, 12:33 AM IST / Updated: Feb 27 2025, 12:04 PM IST

ಒಂದರಿಂದ 7 ನೇ ತರಗತಿ ವರೆಗೆ ಹತ್ತೇ ಮಕ್ಕಳಿರುವ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಸ್ಕೂಲ್‌ಡೇ!
Share this Article
  • FB
  • TW
  • Linkdin
  • Email

ಸಾರಾಂಶ

ಒಂದರಿಂದ 7 ನೇ ತರಗತಿ ವರೆಗೆ ಇರುವ ಈ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಬರುತ್ತಿರುವುದು ಹತ್ತೇ ಮಕ್ಕಳು.  ಊರವರು, ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಮುಖ್ಯ ಶಿಕ್ಷಕಿ ನೇತೃತ್ವದಲ್ಲಿ ಇತ್ತೀಚೆಗೆ ಸಂಭ್ರಮದಿಂದ ವಾರ್ಷಿಕೋತ್ಸವ ನೆರವೇರಿತು.

ದೀಪಕ್ ಅಳದಂಗಡಿ

  ಬೆಳ್ತಂಗಡಿ : ನಾವು ಸಂಖ್ಯೆಯಲ್ಲಿ ಕಡಿಮೆಯಾದರೇನು? ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದರಲ್ಲಿ ಇತರೆ ಪ್ರತಿಷ್ಠಿತ ಶಾಲೆಗಳಿಗಿಂತ ನಾವೇನೂ ಹಿಂದೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಫಂಡಿಜೆ ವಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು.

ಒಂದರಿಂದ 7 ನೇ ತರಗತಿ ವರೆಗೆ ಇರುವ ಈ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಬರುತ್ತಿರುವುದು ಹತ್ತೇ ಮಕ್ಕಳು. ಪಾಠ ಮಾಡಲು ಓರ್ವ ಪೂರ್ಣಪ್ರಮಾಣದ ಶಿಕ್ಷಕಿಯೊಬ್ಬರಿದ್ದರೆ, ಇನ್ನೊರ್ವ ಅತಿಥಿ ಶಿಕ್ಷಕಿಯಿದ್ದಾರೆ . ಮಕ್ಕಳ ಸಂಖ್ಯೆ ಕಡಿಮೆಯಿರುವುದರಿಂದ ವಾರ್ಷಿಕೊತ್ಸವ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಊರವರಿಗೂ ಉಮೇದೂ ಇರಲಿಲ್ಲ.

ಆದರೆ ಈ ಬಾರಿ ಮಾತ್ರ ಅಚಾನಕ್ ಆಗಿ ಸ್ಕೂಲ್ ಡೇ ನಡೆಸೇಬಿಡಬೇಕು ಎಂಬ ತೀರ್ಮಾನ ಮುಖ್ಯಶಿಕ್ಷಕಿ ಫ್ಲೇವಿಯಾ ಡಿಸೋಜ, ಶಾಲಾ ಉಸ್ತುವಾರಿ ಸಮಿತಿ ಮತ್ತು ಹಳೆವಿದ್ಯಾರ್ಥಿಗಳು ಮಾಡಿದ್ದರು.

ವಾಟ್ಸಪ್ ಗ್ರೂಪ್‌ ಸಂಘಟನೆ:

ಊರವರು ಮತ್ತು ಹಿರಿಯ ವಿದ್ಯಾರ್ಥಿಗಳು ಒಟ್ಟು ಸೇರಿ, ವಾಟ್ಸಾಪ್ ಗ್ರೂಪ್ ರಚಿಸಿ ವಾರ್ಷಿಕೋತ್ಸವದ ಚಟುವಟಿಕೆಗೆ ಚಾಲನೆ ನೀಡಿದರು. ಆರ್ಥಿಕ ಸಹಾಯದೊಂದಿಗೆ ಬಹಳಷ್ಟು ಊರಿನವರು ಶಾಲೆಯನ್ನು ಅಲಂಕರಿಸುವಲ್ಲಿ, ಶಾಲೆಯಲ್ಲಿ ವೇದಿಕೆ ನಿರ್ಮಿಸುವಲ್ಲಿ, ಊಟ ಬಡಿಸುವಲ್ಲಿ ಸಹಾಯ ಮಾಡುವ ಭರವಸೆ ಕೊಟ್ಟರಲ್ಲದೆ ನುಡಿದಂತೆ ನಡೆದುಕೊಂಡರು.

ಸುಮಾರು 42 ವರ್ಷಗಳ ಬಳಿಕ ಫೆ. 22ರಂದು ಸಂಜೆ ಶಾಲಾ ಮಕ್ಕಳ ಪ್ರತಿಭಾ ದಿನ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಿತು. 10 ಮಕ್ಕಳಾದರೇನು ? ನೃತ್ಯ, ವಿನೋದಗಳಿಗೆ ಕಡಿಮೆಯಿರಲಿಲ್ಲ. ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು, ಹಳೆ ವಿದ್ಯಾರ್ಥಿಗಳ, ಊರ ಕಲಾವಿದರ ಎಲ್ಲರ ಅಭಿನಯ, ಸಂಗೀತ, ನೃತ್ಯ ಮನ ಸೆಳೆಯಿತು. ಈ ನೆಪದಲ್ಲಿ ನೂರಾರು ಹಿರಿಯ ವಿದ್ಯಾರ್ಥೀಗಳು ಒಂದೆಡೆ ಸೇರಿದರು. ನಾಲ್ಕು ದಶಕಗಳ ಕನಸನ್ನು ನನಸು ಮಾಡಿಕೊಂಡರು.

ಮಕ್ಕಳ ಸಂಖ್ಯೆ ಕುಸಿತ:

ಒಂದಾನೊಂದು ಕಾಲದಲ್ಲಿ ಫಂಡಿಜೆ ಶಾಲೆಯೆಂದರೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ರಾಜಕೀಯ ಡೊಂಬರಾಟದಿಂದಾಗ ಸನಿಹದಲ್ಲೇ ಇನ್ನೊಂದು ಶಾಲೆ ಆರಂಭವಾದಾಗ ಫಂಡಿಜೆ ಶಾಲೆಯ ಮಕ್ಕಳ ಸಂಖ್ಯೆ ಕ್ಷೀಣವಾಗುತ್ತಾ ಬಂತು. ಆದರೆ ಸರ್ಕಾರ ಶಾಲೆಯನ್ನು ಇದುವರೆಗೂ ಬಂದ್ ಮಾಡಿಲ್ಲ. ಪ್ರಸ್ತುತ ಒಂದನೇ, ಮೂರನೇ ಹಾಗೂ ಏಳನೇ ತರಗತಿಯಲ್ಲಿ ತಲಾ ಒಂದು, ಐದನೇ ತರಗತಿಯಲ್ಲಿ ಮೂರು ಹಾಗೂ ಆರನೇ ತರಗತಿಯಲ್ಲಿ ನಾಲ್ಕು ಮಕ್ಕಳಿದ್ದರೆ, ಎರಡು ಮತ್ತು ನಾಲ್ಕನೇ ತರಗತಿಯಲ್ಲಿ ಮಕ್ಕಳಿಲ್ಲ. ಕೆಲ ವರ್ಷಗಳ ಹಿಂದೆ ಹತ್ತಕ್ಕಿಂತಲೂ ಕಡಿಮೆ ಸಂಖ್ಯೆಯ ಮಕ್ಕಳಿದ್ದರು.

ಇಂಗ್ಲಿಷ್‌ ಬೋಧನೆ:

ಶಾಲೆಯಲ್ಲಿ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತರೂ ಇಂಗ್ಲಿಷ್ ನಲ್ಲಿ ಮಾತನಾಡುವ ಸರ್ವ ಪ್ರಯತ್ನವನ್ನು ಮಾಡುತ್ತಾ ಇರುವವರು ಮುಖ್ಯ ಶಿಕ್ಷಕಿ ಫ್ಲೇವಿಯಾ ಅವರು. ಇಂಗ್ಲಿಷ್ ನಲ್ಲಿ ಮಾತನಾಡುವುದು ಕೂಡ ಇಂದಿನ ಕಾಲಕ್ಕೆ ಬಹಳ ಅವಶ್ಯಕ. ಇಂಗ್ಲಿಷ್ ಭಾಷಾ ಶಿಕ್ಷಕಿಯಾಗಿ ಅವರಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾ ಇದ್ದಾರೆ.

ಮಕ್ಕಳು ಇಂಗ್ಲಿಷ್ ಮಾತನಾಡಲು ಅನುಕೂಲವಾಗುವಂತಹ ಕ್ರಿಯೇಟಿವ್ ಕಾರ್ನರ್ ಎಂಬ ಚಾನೆಲ್ ನ್ನು ಕೂಡ ಅವರು ಮಾಡಿದ್ದಾರೆ.  

ನನ್ನ ಶಾಲೆಯ ಬಹಳಷ್ಟು ಹಳೆ ವಿದ್ಯಾರ್ಥಿಗಳನ್ನು ನೋಡುವ ಸೌಭಾಗ್ಯ ನನಗೆ ಸಿಕ್ಕಿತು. ಎಷ್ಟೋ ವರ್ಷಗಳ ಕನಸು ನನಸಾಯ್ತು. ನಮ್ಮ ಶಾಲೆಯ ಸದ್ಯದ ಅವಶ್ಯಕತೆ ದಾಖಲಾತಿಯನ್ನು ಹೆಚ್ಚಿಸುವುದು. 2025 -26ನೇ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 20 ಮಕ್ಕಳನ್ನಾದರೂ ಶಾಲೆಗೆ ಸೇರಿಸುವಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು,ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಈ ಒಂದು ನಿಟ್ಟಿನಲ್ಲಿ ಪ್ರಯತ್ನ ಮಾಡಿದರೆ ಖಂಡಿತ ನಮ್ಮ ಊರಿನ ಶಾಲೆಯನ್ನು ಉಳಿಸಿಕೊಳ್ಳಬಹುದು.

-ಫ್ಲೇವಿಯಾ ಡಿಸೋಜ, ಮುಖ್ಯ ಶಿಕ್ಷಕಿ.