ಸಾರಾಂಶ
ದೇಶದ ವೀರಯೋಧರ ಪರ ಮೊಳಗಿದ ಜಯಘೋಷ । ಭಾರತ ಸೇನಾನಿಗಳ ಕೆಚ್ಚೆದೆಯ ಹೋರಾಟಕ್ಕೆ ಸೆಲ್ಯೂಟ್
ಕನ್ನಡಪ್ರಭ ವಾರ್ತೆ ಬಳ್ಳಾರಿಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆ ನಗರದಲ್ಲಿ ಶನಿವಾರ ತಿರಂಗಾ ಯಾತ್ರೆ ನಡೆಯಿತು.
ಬಿಜೆಪಿ ನೇತೃತ್ವದಲ್ಲಿ ನಡೆದ ಯಾತ್ರೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಸೇರಿದಂತೆ ಮಾಜಿ ಸೈನಿಕರು, ನಗರದ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇಶದ ವೀರಯೋಧರ ಪರ ಜಯಘೋಷ ಕೂಗಿದರು.ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭಗೊಂಡ ತಿರಂಗಾಯಾತ್ರೆ ಡಬಲ್ ರಸ್ತೆ (ಮಯೂರ ಹೋಟೆಲ್ ಮುಂಭಾಗ) ಗಡಗಿ ಚನ್ನಪ್ಪ ವೃತ್ತದ ಮೂಲಕ ಬೆಂಗಳೂರು ರಸ್ತೆ, ಹಳೆಯ ಬ್ರೂಸ್‌ಪೇಟೆ ಠಾಣೆ ವೃತ್ತ, ಜೈನ್ ಮಾರ್ಕೆಟ್ ರಸ್ತೆಯಿಂದ ಗವಿಯಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು.
ಗವಿಯಪ್ಪ ವೃತ್ತದಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಆಪರೇಷನ್ ಸಿಂದೂರ ಮೂಲಕ ಭಯೋತ್ಪಾದನೆಗೆ ದಿಟ್ಟ ಉತ್ತರ ನೀಡಿದ ಭಾರತ ಸೇನಾನಿಗಳ ಕೆಚ್ಚೆದೆಯ ಹೋರಾಟ ಸ್ಮರಿಸಿದರು.ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಪ್ರತೀಕವಾಗಿರುವ ಸಿಂದೂರವನ್ನೇ ಅಳಸಿ ಹಾಕಿದ ಉಗ್ರರಿಗೆ ಹಾಗೂ ಉಗ್ರವಾದವನ್ನು ಪೋಷಣೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರ ದಿಟ್ಟ ಉತ್ತರ ನೀಡಿದೆ. ಧರ್ಮವನ್ನು ಕೇಳಿ ಹತ್ಯೆ ಮಾಡಿರುವ ಹಂತಕರ ಭಯೋತ್ಪಾದನಾ ತಾಣಗಳ ಮೇಲೆ ದಾಳಿ ನಡೆಸಿದ ಭಾರತೀಯ ಸೇನೆ, 100 ಕ್ಕೂ ಅಧಿಕ ಉಗ್ರರನ್ನು ಸದೆಬಡೆದಿದೆ ಎಂದು ತಿಳಿಸಿದರು.
ಪಾಕಿಸ್ತಾನ ವಿರುದ್ಧ ಭಾರತ ಕದನ ವಿರಾಮ ಘೋಷಣೆ ಮಾಡಿದೆ. ಹಾಗಂತ ಯುದ್ಧಕ್ಕೆ ಹಿಂದೇಟು ಹಾಕಿದಂತಲ್ಲ. ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನಕ್ಕೆ ಟ್ರೇಲರ್ ಅಷ್ಟೇ ತೋರಿಸಲಾಗಿದೆ. ಸಿನಿಮಾ ಇನ್ನೂ ಬಾಕಿಯಿದೆ. ಪಾಕಿಸ್ತಾನ ಮತ್ತೆ ಭಾರತದ ತಂಟೆಗೆ ಬಂದರೆ ಪಾಕಿಸ್ತಾನವನ್ನು ಸಂಪೂರ್ಣವಾಗಿ ಬಗ್ಗುಬಡಿಯಲು ಭಾರತೀಯ ಸೇನೆ ಸದಾ ಸನ್ನದ್ಧವಾಗಿದೆ ಎಂದು ಹೇಳಿದರು.ಪಹಲ್ಗಾಂ ದಾಳಿಯ ಬಳಿಕ ಭಯೋತ್ಪಾದಕರ ಹುಟ್ಟಡಗಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಿರಿಯಸೇನಾ ಅಧಿಕಾರಿಗಳು ತೆಗೆದುಕೊಂಡ ನಿಲುವುಗಳನ್ನು ವಿಶ್ವದ ಅನೇಕ ರಾಷ್ಟ್ರಗಳು ಕೊಂಡಾಡುತ್ತಿವೆ. ಉಗ್ರ ಪೋಷಿತ ಪಾಕಿಸ್ತಾನವನ್ನು ದಮನ ಮಾಡಲು ಭಾರತಕ್ಕೆ ಮಾತ್ರ ಸಾಧ್ಯ ಎಂದು ಹೇಳಿವೆ. ಆದರೆ, ಕಾಂಗ್ರೆಸ್ ನಾಯಕರು ವಿನಾಕಾರಣ ದ್ವಂದ್ವ ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಆಪರೇಷನ್ ಸಿಂದೂರ ಕುರಿತು ಕೈ ನಾಯಕರು ಅಪ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನೀತಿ ಹಾಗೂ ದೇಶದ ಬಗ್ಗೆ ಅವರಿಗಿರುವ ಬದ್ಧತೆ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಹಿರಿಯ ಮುಖಂಡರಾದ ಎಚ್.ಹನುಮಂತಪ್ಪ, ಎಸ್.ಗುರುಲಿಂಗನಗೌಡ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಕೆ.ಎಂ. ಮಹೇಶ್ವರಸ್ವಾಮಿ, ಬುಡಾ ಮಾಜಿ ಅಧ್ಯಕ್ಷ ಪಾಲಣ್ಣ, ಮಾರುತಿ ಪ್ರಸಾದ್, ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ಗುಡಿಗಂಟಿ ಹನುಮಂತು, ಗೋವಿಂದರಾಜುಲು, ಬಿಜೆಪಿ ಮಹಿಳಾ ಘಟಕದ ಪುಷ್ಪಲತಾ, ಮದಿರೆ ಕುಮಾರಸ್ವಾಮಿ, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ವಿದ್ಯಾಲಯದ ಪ್ರಾಂಶುಪಾಲ ಡಾ. ಸತೀಶ್ ಹಿರೇಮಠ, ರೈಲ್ವೆ ಕ್ರಿಯಾ ಸಮಿತಿ ಮುಖಂಡ ಬಂಡೇಗೌಡ, ಜನತಾ ಬಜಾರ್ ಮಾಜಿ ಅಧ್ಯಕ್ಷ ನೀಲಕಂಠಪ್ಪ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಸೇರಿದಂತೆ ಕೊಟ್ಟೂರುಸ್ವಾಮಿ ಬಿಎಡ್ ಕಾಲೇಜು, ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ, ಎಸ್‌ಜಿಟಿ ಕಾಲೇಜು ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.