ಸಾರಾಂಶ
ಬಳ್ಳಾರಿ: ಹೊಸವರ್ಷದ ಮೊದಲ ದಿನವಾದ ಸೋಮವಾರ ನಗರದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನ, ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಬಾಲಾಜಿ ದೇವಸ್ಥಾನ, ಕೋಟೆ ಆಂಜಿನೇಯಸ್ವಾಮಿ, ಮದ್ದಾನೇಶ್ವರ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಜನಸ್ತೋಮ ಕಂಡುಬಂತು.ಇಲ್ಲಿನ ಕನಕ ದುರ್ಗಮ್ಮ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಭಕ್ತರ ಗುಂಪು ಇತ್ತು. ಸಾವಿರಾರು ಜನರು ಸರತಿಸಾಲಲ್ಲಿ ನಿಂತು ದೇವಿಯ ದರ್ಶನ ಪಡೆದು, ಇಡೀ ವರ್ಷ ಒಳಿತಾಗುವಂತೆ ಹರಕೆ ಮಾಡಿಕೊಂಡರು.
ಹೊಸ ವರ್ಷ ಹಿನ್ನೆಲೆಯಲ್ಲಿ ದೇವಿಯನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಯುವಕರು, ಮಹಿಳೆಯರ ಹೊಸವರ್ಷದ ಸಂಭ್ರಮ ನಗರದಲ್ಲಿ ಕಂಡುಬಂತು. ನಗರದ ಪ್ರಮುಖ ಬೇಕರಿಗಳ ಮುಂದೆ ಯುವಕ, ಯುವತಿಯರು ಕೇಕ್‌ಗಳನ್ನು ಖರೀದಿಸಲು ಮುಗಿಬೀಳುವ ದೃಶ್ಯಗಳು ಕಂಡುಬಂದವು. ಹೊಸ ವರ್ಷದ ಮೊದಲ ದಿನದಲ್ಲಿ ಹಬ್ಬದ ವಾತಾವರಣವಿತ್ತು. ಸಾರ್ವಜನಿಕರು ಮನೆಯಿಂದ ಹೊರಗಡೆ ಬರದೇ ಮನೆಯಲ್ಲಿಯೇ ವರ್ಷಾಚರಣೆ ಕೈಗೊಂಡಿದ್ದರಿಂದ ರಸ್ತೆಗಳು ಬಿಕೋ ಎಂದವು. ತಡರಾತ್ರಿವರೆಗೆ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದವರು ಇಡೀ ದಿನ ವಿಶ್ರಾಂತಿ ಪಡೆದರು. ಹೀಗಾಗಿ ನಗರದಲ್ಲಿ ಸಂಜೆಯಾದರೂ ಜನರ ಓಡಾಟ ವಿರಳವಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಗ್ರಾಹಕರಿಲ್ಲದೆ ಬಿಕೋ ಎಂದವು. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಗ್ರಾಹಕರು ಕಂಡುಬರಲಿಲ್ಲ.
ಸಂಭ್ರಮದಲ್ಲಿ ಹೊಸವರ್ಷದ ಸ್ವಾಗತ: ನೂತನ ವರ್ಷವನ್ನು ನಗರದ ಜನತೆ ಸಂಭ್ರಮದಿಂದ ಸ್ವಾಗತಿಸಿಕೊಂಡರು. ನಗರದ ಅನೇಕ ಬಡಾವಣೆಗಳಲ್ಲಿ ಭಾನುವಾರ ತಡರಾತ್ರಿಯವರೆಗೆ ವಿವಿಧ ಸಂಗೀತ ಕಾರ್ಯಕ್ರಮ, ಅಂತ್ಯಾಕ್ಷರಿ, ಕ್ರೀಡಾಸ್ಪರ್ಧೆಗಳು ನಡೆದವು. ಮ್ಯಾಜಿಕ್ ಕುರ್ಚಿ, ಕ್ಯೂ- ಬಾಲ್, ಕೇರಂ, ಚೆಸ್, ಹಗ್ಗಜಗ್ಗಾಟ, ಕೋಲಾಟ ಮತ್ತಿತರ ಸ್ಪರ್ಧೆಗಳಲ್ಲಿ ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು. ಮಕ್ಕಳು ಕುಟುಂಬ ಸದಸ್ಯರ ಜತೆಗಿದ್ದು ಹೊಸ ವರ್ಷವನ್ನು ಬರಮಾಡಿಕೊಂಡರು.ಹೊಸವರ್ಷಕ್ಕೆ ನಗರದ ಹೋಟೆಲ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಭರ್ತಿಯಾಗಿದ್ದವು. ಗ್ರಾಹಕರನ್ನು ಆಕರ್ಷಿಸಲು ಬಾರ್‌ಗಳಿಗೆ ವಿವಿಧ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ತಡರಾತ್ರಿ ಬಳಿಕ ಪರಸ್ಪರ ಹೊಸವರ್ಷದ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯಗಳು ಕಂಡುಬಂದವು. ಪೊಲೀಸರು ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.