ಪುಟ್ಬಾಲ್‌ ಪಂದ್ಯಾವಳಿಯ ವೇಳೆ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ವಿರಾಜಪೇಟೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಫುಟ್ಬಾಲ್ ಪಂದ್ಯಾವಳಿಯ ವೇಳೆ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ವಿರಾಜಪೇಟೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ವಿರಾಜಪೇಟೆ ತಾಲೂಕು ಕ್ರೀಡಾಂಗಣದಲ್ಲಿ ಮೆಮೋರಿಯಲ್ ಫುಟ್ಬಾಲ್ ಕಪ್ ನಡೆದ ಪಂದ್ಯದಲ್ಲಿ ಕಡಂಗ ಹಾಗೂ ಸುಂಟಿಕೊಪ್ಪ ತಂಡಗಳ ನಡುವೆ ಗಲಾಟೆ ನಡೆದಿದೆ.

ಒಂದು ಪಂದ್ಯಾಟದಲ್ಲಿ ಗೆದ್ದಿದ್ದ ಸುಂಟಿಕೊಪ್ಪ ತಂಡ ಗೆದ್ದು ಸಂಭ್ರಮಿಸುತ್ತಿದ್ದವರ ಮೇಲೆ ಡ್ರಮ್ ಹಾಗೂ ಚೇರ್ ಗಳನ್ನು ಎಸೆದಿದ್ದಾರೆ.

ಇದೇ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಕೂಡಲೇ ವಿರಾಜಪೇಟೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಿ ಪೊಲೀಸರು ಮತ್ತೆ ಪಂದ್ಯಾವಳಿ ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಇದರಿಂದ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡುಬಂತು.

------------------------------------

ಕಾರು- ಪವರ್ ಬಸ್ ಮುಖಾಮುಖಿ ಡಿಕ್ಕಿ: ಕಾರಿನ ಚಾಲಕನಿಗೆ ಗಂಭೀರ ಗಾಯ

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಇಲ್ಲಿಗೆ ಸಮೀಪದ ಶಾಂತಗಿರಿ ತಿರುವಿನಲ್ಲಿ ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಪವರ್ ಬಸ್( ಎಲೆಕ್ಟ್ರಿಕ್ ಬಸ್) ಮತ್ತು ಮಡಿಕೇರಿ ಕಡೆಗೆ ಬರುತ್ತಿದ್ದ ವ್ಯಾಗನರ್ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸ್ಪೆಕ್ಟರ್‌ ಸೈಮನ್ ಮತ್ತು ಹೆದ್ದಾರಿ ಗಸ್ತು ಪಡೆಯ ಸಹಾಯಕ ಸಬ್‌ಇನ್ಸ್ಪೆಕ್ಟರ್ ಶೇಷಪ್ಪ ಸ್ಥಳಕ್ಕೆ ಧಾವಿಸಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಿ ಮುಂದಿನ ಕ್ರಮ ಕೈಗೊಂಡರು.

ವ್ಯಾಗನರ್ ಕಾರು ಬಸ್ ಡಿಕ್ಕಿಯಾದ ರಭಸಕ್ಕೆ ಕಾರಿನ ಬಲಭಾಗದ ಟೈಯರ್ ರಸ್ತೆಯ ಬಲಭಾಗಕ್ಕೆ ಹಾರಿ ಬಿದ್ದಿದೆ. ಕಾರಿನ ಅತಿವೇಗ, ಒವರ್‌ಟೇಕ್ ಪರಿಣಾಮ ಈ ಅವಘಡ ಸಂಭವಿಸಿದೆ. ರಸ್ತೆ ಬದಿಯಲ್ಲಿರುವ ಮೋರಿಗೆ ಕಾರು ಅಪ್ಪಳಿಸಿದರೆ ಜೀವಹಾನಿಗೊಳ್ಳುವ ಸಂಭವವಿತ್ತು.ಇತರೆ ವಾಹನಗಳಿಗೆ ಡಿಕ್ಕಿಗೊಂಡಿದ್ದಲ್ಲಿ ಸರಣಿ ಅಪಘಾತ ಸಂಭವಿಸಿ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾರಿ ವಾಹನ ದಟ್ಟಣೆ ಕಂಡು ಬಂತು.