ಸಾರಾಂಶ
ಅಂಕೋಲಾ: ಸುಕ್ರಿಗೌಡ ಅವರ ಅಂತ್ಯಕ್ರಿಯೆ ಗುರುವಾರ ಬಡಗೇರಿಯ ಸ್ವಂತ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸಂಪ್ರದಾಯಬದ್ಧ ವಿಧಿ ವಿಧಾನಗಳನ್ನು ಪೂರೈಸಿ ಮನೆಯ ಮುಂಭಾಗದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಜಾನಪದ ಕೋಗಿಲೆಯ ಅಂತಿಮ ದರ್ಶನವನ್ನು ಸಹಸ್ರಾರು ಜನರು ಪಡೆದು ಕಂಬನಿ ಮಿಡಿದರು. ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆಯಿಂದ ಸಕಲ ಸರಕಾರಿ ಗೌರವಗಳನ್ನು ನೀಡಿ ಗೌರವಿಸಲಾಯಿತು.
ಕುಟುಂಬಸ್ಥರ ಆಕ್ರಂದನ: ಸುಕ್ರಿಗೌಡ ಅವರನ್ನು ಅತ್ಯಂತ ಕಾಳಜಿ ಮತ್ತು ಕಳಕಳಿಯಿಂದ ನೋಡಿಕೊಳ್ಳುತ್ತಿದ್ದ ಅವರ ಸೊಸೆ, ಮೊಮ್ಮಗಳು ಮತ್ತು ಕುಟುಂಬದವರು ಕಣ್ಣೀರಿಟ್ಟರು. ಮತ್ತೆ ಅಜ್ಜಿ ಹುಟ್ಟಿ ಬನ್ನಿ ಎನ್ನುವ ಮಾತುಗಳು ಬಡಗೇರಿಯಲ್ಲಿ ಕೇಳಿ ಬಂದವು.
4 ಕಿಮೀ ಮೆರವಣಿಗೆ: 4 ಕಿಮೀ ಮೆರವಣಿಗೆಯಲ್ಲಿ ತೆರಳಿ ಸುಕ್ರಿ ಗೌಡ ಅವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಮಾಜಿ ಸಚಿವ ಆನಂದ ಅಸ್ನೋಟಿಕರ್ 4 ಕಿಮೀ ಕಾಲ್ನಡಿಗೆಯಲ್ಲಿಯೇ ತೆರಳಿ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಮಾಜಿ ಶಾಸಕಿ ರೂಪಾಲಿ ನಾಯ್ಕ ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪ್ರಮುಖರಿಂದ ಗೌರವ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಶಾಸಕ ಸತೀಶ್ ಸೈಲ್, ವಿಧಾನಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಇತರರು ಇದ್ದರು
.ವ್ಯಕ್ತಿ ಮೇಲೆ ಹಲ್ಲೆ: ಮೂವರು ಅಪರಾಧಿಗಳಿಗೆ ಶಿಕ್ಷೆ
ಶಿರಸಿ: ಸಿದ್ದಾಪುರ ತಾಲೂಕಿನ ಹಳದೋಟದಲ್ಲಿ ಮೂವರು ಸೇರಿ ಮನೆಯೊಳಗಡೆ ಅಕ್ರಮ ಪ್ರವೇಶಿಸಿ, ಹಲ್ಲೆ ನಡೆಸಿದ ಮೂವರು ಅಪರಾಧಿಗಳಿಗೆ ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿದೆ.ಅಪರಾಧಿಗಳಾದ ಸಿದ್ದಾಪುರ ತಾಲೂಕಿನ ಹಳದೋಟದ ಚಂದ್ರಶೇಖರ ರಾಮಚಂದ್ರ ಹೆಗಡೆ, ಸದಾಶಿವ ಸೀತಾರಾಮ ಹೆಗಡೆ, ಪ್ರಸನ್ನ ಸೀತಾರಾಮ ಹೆಗಡೆಗೆ ಕೆಳ ನ್ಯಾಯಾಲಯವು ವಿಧಿಸಿದ ಶಿಕ್ಷೆಯನ್ನು ಕಾಯಂಗೊಳಿಸಿ ಆದೇಶ ಮಾಡಿದೆ.
ಮೂವರು ಸೇರಿಕೊಂಡು ಮನೆಯ ಬಾಗಿಲನ್ನು ಮುರಿದು ಅಕ್ರಮವಾಗಿ ಪ್ರವೇಶಿಸಿ, ಹಲ್ಲೆ ನಡೆಸಿದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಸಿದ್ದಾಪುರದ ಜೆಎಂಎಫ್‌ಸಿ ನ್ಯಾಯಾಲಯವು 2024ರ ಸೆ. ೫ರಂದು ಆರೋಪವು ದೃಢವಾಗಿದ್ದರಿಂದ ಮೂವರು ಅಪರಾಧಿರಿಗೆ ೩ ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು ಒಬ್ಬ ಅಪರಾಧಿಗೆ ₹೨೧ ಸಾವಿರದಂತೆ ಒಟ್ಟು ₹೬೩ ಸಾವಿರ ದಂಡ ವಿಧಿಸಿ ಹಾಗೂ ದಂಡದ ಹಣವನ್ನು ಗಾಯಾಳುವಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ತೀರ್ಪು ನೀಡಿತ್ತು. ತೀರ್ಪಿನ ಆದೇಶದ ವಿರುದ್ಧ ಅಪರಾಧಿಗಳು ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಕೆಳ ನ್ಯಾಯಾಲಯದ ತೀರ್ಪನ್ನೆ ಎತ್ತಿ ಹಿಡಿದಿದ್ದಾರೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ವಾದ ಮಂಡಿಸಿದ್ದರು.