ಸಾರಾಂಶ
ಡಂಬಳ ಹೋಬಳಿಯಲ್ಲಿ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು ರಸ್ತೆ ಪಕ್ಕ ಗಿಡ ನೆಟ್ಟಿದ್ದು, ಬೆಂಕಿ ಶಾಪವಾಗಿದ್ದು, ಅವುಗಳ ಸುರಕ್ಷತೆ ಕುರಿತಂತೆ ಪರಿಸರ ಪ್ರೇಮಿಗಳು ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಯಾಜಅಹ್ಮದ ಎಂ. ದೊಡ್ಡಮನಿ
ಕನ್ನಡಪ್ರಭ ವಾರ್ತೆ ಡಂಬಳಡಂಬಳ ಹೋಬಳಿಯಲ್ಲಿ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು ರಸ್ತೆ ಪಕ್ಕ ಗಿಡ ನೆಟ್ಟಿದ್ದು, ಬೆಂಕಿ ಶಾಪವಾಗಿದ್ದು, ಅವುಗಳ ಸುರಕ್ಷತೆ ಕುರಿತಂತೆ ಪರಿಸರ ಪ್ರೇಮಿಗಳು ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಗಿಡ ಬೆಳೆಸಿ, ಪರಿಸರ ಉಳಿಸಿ ಎಂಬುವುದು ಬರೀ ಘೋಷಣೆಯಾಗಿಯೇ ಉಳಿದಿದೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸಸಿಗಳನ್ನು ನೆಟ್ಟು ಅವುಗಳಿಗೆ ನೀರು ಹಾಕದೆ ಅವುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿವೆ.ಡಂಬಳ ಗ್ರಾಮದಿಂದ ಜಂತ್ಲಿ- ಶಿರೂರ ಸೇರಿದಂತೆ ಕೆಲವೆಡೆ ರಸ್ತೆಯ ಪಕ್ಕದಲ್ಲಿ ಕಳೆದ ಕೆಲ ತಿಂಗಳ ಹಿಂದಷ್ಟೇ ಸಾವಿರಾರು ಸಸಿಗಳನ್ನು ಸಾಮಾಜಿಕ ಅರಣ್ಯ ವಲಯದಿಂದ ನೆಡಲಾಗಿತ್ತು. ಬಿಸಿಲಿಗೆ ಗಿಡಗಳು ಒಣಗುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕಾಲಕಾಲಕ್ಕೆ ನೀರು ಹಾಕಿ ಸಸಿಗಳ ಪಾಲನೆ ಪೋಷಣೆ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ರಸ್ತೆ ಪಕ್ಕದ ಗಿಡಗಳಿಗೆ ಬೆಂಕಿ:ಗ್ರಾಮಗಳ ಬಹುತೇಕ ರಸ್ತೆಯ ಪಕ್ಕ ಹಚ್ಚಿರುವ ನೂರಾರು ಗಿಡಗಳು ಬೆಂಕಿಗೆ ತುತ್ತಾಗುತ್ತಿವೆ. ಅವುಗಳ ಸುರಕ್ಷತೆಗಾಗಿ ಕಾವಲುಗಾರರ ನಿಯೋಜನೆ ಮತ್ತು ಟ್ಯಾಂಕರ್ ಮೂಲಕ ನೀರು ಹಾಕಬೇಕು ಎನ್ನುವ ಕೂಗ ಕೇಳಿ ಬಂದಿದೆ.
ನರೇಗಾ ಯೋಜನೆಯಡಿ ಲಕ್ಷಾಂತರ ವೆಚ್ಚದಲ್ಲಿ ಸರಕಾರಿ ಜಾಗೆಗಳಲ್ಲಿ ಸಾವಿರಾರು ಸಸಿಗಳನ್ನು ನೆಡಲಾಗಿದೆ. ಆದರೆ ಅವುಗಳನ್ನು ಕೇವಲ ನರೇಗಾ ಬಿಲ್ ಪಡೆದುಕೊಳ್ಳಲು ಮಾಡುತ್ತಾರೆ ಎಂಬ ಅನುಮಾನ ದಟ್ಟವಾಗಿದೆ. ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆಯೋ ಇಲ್ಲವೋ ಎನ್ನುವ ಕುರಿತು ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮುಂದಾಗಬೇಕು ಎನ್ನುತ್ತಾರೆ ಪರಿಸರವಾದಿಗಳು. ಕಳೆದ ಕೆಲ ತಿಂಗಳ ಹಿಂದೆ ನೆಟ್ಟ ಸಸಿಗಳಿಗೆ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ನೀರು ಹಾಕಿಲ್ಲ. ಇದರಿಂದ ಸಸಿಗಳು ಒಣಗಿದ್ದು, ರಣ ಬಿಸಿಲಿನಲ್ಲಿ ಸಸಿ ಹಾಳಾಗುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಟ್ಯಾಂಕರ್ ಮೂಲಕ ನೀರು ಹಾಕಬೇಕು ಎಂಬ ಆದೇಶ ಇದ್ದರೂ ಅಧಿಕಾರಿಗಳು ಮಾತ್ರ ಸಸಿಗಳಿಗೆ ಬೇಕಾಗುವಷ್ಟು ನೀರು ಹಾಕುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.ಬೆಂಕಿ ಹಚ್ಚದಂತೆ ರಸ್ತೆ ಪಕ್ಕದ ರೈತರಿಕೆ ತಿಳುವಳಿಕೆ ನೀಡಲಾಗಿದೆ ಮತ್ತು ಬೆಂಕಿ ಬೀಳದಂತೆ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ 8 ರಸ್ತೆಗಳಲ್ಲಿ ಪ್ರತಿ ರಸ್ತೆಗಳಿಗೆ 900 ಸಸಿಗಳನ್ನು ಹಚ್ಚಲಾಗಿದೆ. ಅದರಲ್ಲಿ ರಸ್ತೆಗಳ ಪಕ್ಕ ಇರುವ ಸಸಿಗಳಿಗೆ ನೀರು ಹಾಕಲಾಗಿದೆ. ಮತ್ತೊಮ್ಮೆ ಗಿಡಗಳಿಗೆ ನೀರು ಹಾಕಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮುಂಡರಗಿ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಸುನೀತಾ ಬಿ.ಎಸ್. ಹೇಳಿದರು.ಡಂಬಳ ಹೋಬಳಿಯ ಗ್ರಾಮೀಣ ರಸ್ತೆಗಳ ಪಕ್ಕ ಇರುವ ಸಸಿಗಳಿಗೆ ಮುಳ್ಳುಕಂಟಿಯ ಜಾಲರಿ ಕಟ್ಟಿರುವುದಿಲ್ಲ. ಸರಿಯಾದ ಸುರಕ್ಷತೆ ಮತ್ತು ನೀರು ಇಲ್ಲದೆ ಸಸಿಗಳು ಒಣಗುತ್ತಿದ್ದು, ಇಲಾಖೆ ಎಚ್ಚೆತ್ತುಕೊಂಡು ಸಸಿಗಳಿಗೆ ನೀರು ಒದಗಿಸಲು ಮುಂದಾಗಬೇಕು ಜಂತ್ಲಿ ಶಿರೂರು ಗ್ರಾಮಸ್ಥ ರಮೇಶ ಜಂತ್ಲಿ ಹೇಳಿದರು.