43 ಗಂಟೆ ಕಾಲ ಸಮುದ್ರದಲ್ಲಿ ಈಜಿ ಬದುಕುಳಿದ ಮೀನುಗಾರ

| Published : Nov 11 2023, 01:15 AM IST

43 ಗಂಟೆ ಕಾಲ ಸಮುದ್ರದಲ್ಲಿ ಈಜಿ ಬದುಕುಳಿದ ಮೀನುಗಾರ
Share this Article
  • FB
  • TW
  • Linkdin
  • Email

ಸಾರಾಂಶ

ದೋಣಿಯಿಂದ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದ ಮೀನುಗಾರನೋಬ್ಬ ಸತತ ಎರಡು ದಿನ ಈಜಾಡುತ್ತಾ ಜೀವನ್ಮರಣದ ಹೋರಾಟ ನಡೆಸಿ ಬದುಕುಳಿದಿದ್ದು, ನಂಬಲಸಾಧ್ಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ದೋಣಿಯಿಂದ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದ ಮೀನುಗಾರನೋಬ್ಬ ಸತತ ಎರಡು ದಿನ ಈಜಾಡುತ್ತಾ ಜೀವನ್ಮರಣದ ಹೋರಾಟ ನಡೆಸಿ ಬದುಕುಳಿದಿದ್ದು, ನಂಬಲಸಾಧ್ಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೇರಳದಿಂದ ಮೀನುಗಾರಿಕೆಗೆ ಬಂದಿದ್ದ ಲಿಪ್ಟನ್ ಮೆರಿನಾ ಎಂಬ ಬೋಟು ಇಲ್ಲಿನ ಗಂಗೊಳ್ಳಿ ಬಂದರಿನ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಭಾನುವಾರ ಮುಂಜಾನೆ ತಮಿಳುನಾಡು ಮೂಲದ ಮುರುಗನ್ (25) ಎಂಬ ಮೀನುಗಾರ ಆಯತಪ್ಪಿ ನೀರಿಗೆ ಬಿದ್ದ. ಕತ್ತಲಿದ್ದುದರಿಂದ ಇತರ ಮೀನುಗಾರರಿಗೆ ಆತ ಕಾಣಲಿಲ್ಲ. ಅಲೆಗಳ ಅಬ್ಬರಕ್ಕೆ ಆತನಿಗೆ ಬೋಟಿನ ಕಡೆಗೆ ಈಜಲಾಗದೇ ಕೊಚ್ಚಿ ಹೋಗಿದ್ದ. ಹಗಲಿಡೀ ಆ ಕಡೆಯಿಂದ ಸಾಗುವ ಯಾವ ದೋಣಿಯೂ ಕಾಣಲಿಲ್ಲ. ರಾತ್ರಿ ಕಳೆದು ಸೋಮವಾರ ಹಗಲಾದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಮಂಗಳವಾರ ಮುಂಜಾನೆ 7.30ಕ್ಕೆ ಗಂಗೊಳ್ಳಿ ಬಂದರಿನಿಂದ 16 ನಾಟಿಕಲ್ ಮೈಲು ದೂರದಲ್ಲಿ ವಿ.ಕೆ.ಅಬ್ಬುಲ್ಲ ಎಂಬವರ ಬೋಟಿನ ಮೀನುಗಾರರು ಈಜುತ್ತಿದ್ದ ಆತನನ್ನು ಗಮನಿಸಿ ರಕ್ಷಿಸಿದ್ದಾರೆ.

ತೀರಾ ನಿತ್ರಾಣನಾಗಿದ್ದ ಆತನನ್ನು ವಿಚಾರಿಸಿದಾಗ ತಾನು 2 ಹಗಲು, 2 ರಾತ್ರಿ ಸೇರಿ ಸುಮಾರು 43 ಗಂಟೆ ಕಾಲ ಸಮುದ್ರದಲ್ಲಿ ಈಜುತ್ತಿದ್ದೇನೆ ಎಂದು ಹೇಳಿದ್ದಾನೆ.

ಆತನನ್ನು ರಕ್ಷಿಸಿದ ಮೀನುಗಾರರು ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಕೇರಳದ ಮೀನುಗಾರಿಕಾ ಬೋಟಿನವರಿಗೆ ಮಾಹಿತಿ ನೀಡಿದ್ದು, ಅವರು ಬಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕ.ಕ.ಪಡೆ ಪೊಲೀಸರು ತಿಳಿಸಿದ್ದಾರೆ.