ಸರ್ಕಾರಿ ಶಾಲೆಗೆ ದಾಖಲಾಗುವ ಪ್ರತಿ ಮಗುವಿಗೂ ₹1000 ನಿಶ್ಚಿತ ಠೇವಣಿ

| Published : Jun 10 2024, 12:48 AM IST / Updated: Jun 10 2024, 12:06 PM IST

ಸಾರಾಂಶ

ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸದಾ ಕೈಜೋಡಿಸುತ್ತಾ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಹಕರಿಸುತ್ತಿರುವ ಭಾಗ್ಯನಗರದ ಇನ್ನರ್‌ ವ್ಹೀಲ್‌ ಕ್ಲಬ್‌ನ ಕಾರ್ಯ ಶ್ಲಾಘನೀಯ.

 ಕೊಪ್ಪಳ :  ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸದಾ ಕೈಜೋಡಿಸುತ್ತಾ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಹಕರಿಸುತ್ತಿರುವ ಭಾಗ್ಯನಗರದ ಇನ್ನರ್‌ ವ್ಹೀಲ್‌ ಕ್ಲಬ್‌ನ ಕಾರ್ಯ ಶ್ಲಾಘನೀಯ ಎಂದು ಕೊಪ್ಪಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ ಹೇಳಿದರು.

ನಗರದ ಧನ್ವಂತರಿ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ದಾಖಲಾಗುವ ಪ್ರತಿ ಮಗುವಿಗೂ ₹1000 ನಿಶ್ಚಿತ ಠೇವಣಿ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಎಫ್.ಡಿ. ವಿತರಿಸಿ ಮಾತನಾಡಿದರು.

ಶಾರದಾ ಪಾನಘಂಟಿ ಅವರ ಅಧ್ಯಕ್ಷತೆಯಲ್ಲಿ ಶಾಲೆಯನ್ನು ಹ್ಯಾಪಿ ಸ್ಕೂಲ್ ಎಂಬ ತಲೆಬರಹದಡಿಯಲ್ಲಿ ಶಾಲೆಗೆ ಹೊಸದಾಗಿ ದಾಖಲಾಗುವ ಪ್ರತಿ ಮಗುವಿಗೂ ₹1000 ನಿಶ್ಚಿತ ಠೇವಣಿ ನೀಡುವುದರ ಜೊತೆಗೆ 5 ಡೆಸ್ಕ್, 30 ತಟ್ಟೆ ಲೋಟ, ಸ್ಪೀಕರ್, ರೇಡಿಯೋ 3 ನಲಿ-ಕಲಿ ರ್‍ರ್ಯಾಕ್, ಕುಡಿಯುವ ನೀರಿಗಾಗಿ 500 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್, ಮಿಕ್ಸರ್, ಫ್ಯಾನ್, ಥರ್ಮಲ್ ಸ್ಕ್ಯಾನರ್, ಪ್ರತಿ ಮಗುವಿಗೂ ಚೈಲ್ಡ್ ಪ್ರೋಫೈಲ್ ಫೈಲ್ ನೀಡುವುದರ ಜೊತೆಗೆ ಶೌಚಾಲಯ ದುರಸ್ತಿ ಮತ್ತು ಧ್ವಜ ಸ್ತಂಬ ಅಂದಚಂದವನ್ನು ಹೆಚ್ಚಿಸುವ ಕಾರ್ಯ ಹಾಗೂ ಕ್ರೀಡಾ ಸಾಮಗ್ರಿ ನೀಡಿರುವುದು ಶ್ಲಾಘನೀಯ ಕಾರ್ಯ ಎಂದರು.

ಶಾಲೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಇನ್ನರ್‌ ವ್ಹೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಪಾನಘಂಟಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಪ್ರತಿಭಾವಂತರಿರುತ್ತಾರೆ. ಅಂತಹ ಮಕ್ಕಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸಿದರೆ ಆ ಮಗು ಶಾಲೆಯಿಂದ ಹೊರಗುಳಿಯದೆ ಕಲಿಕೆಯಲ್ಲಿ ಉತ್ತಮ ಪ್ರಗತಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಇನ್ನರ್‌ ವ್ಹೀಲ್ ಕ್ಲಬ್ ಸಮಾಜಮುಖಿ ಕಾರ್ಯ ಮಾಡುವುದರ ಜೊತೆಗೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಶಾಲೆಯಲ್ಲಿನ ಸಿಬ್ಬಂದಿ ಕೂಡ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ನರ್‌ ವ್ವೀಲ್‌ ಕ್ಲಬ್ ಕಾರ್ಯದರ್ಶಿ ಸುವರ್ಣ ಗಂಟಿ, ಗೌರಿ, ನಿರ್ಮಲಾ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ಶರಣಪ್ಪ ರೆಡ್ಡರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಬಹದ್ದೂರು ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಹನುಮಂತಪ್ಪ ಕುರಿ, ಮುಖ್ಯೋಪಾಧ್ಯಾಯರಾದ ಮಮತಾ ಚಕ್ರಸಾಲಿ, ಶಿಕ್ಷಕರಾದ ಪೂರ್ಣಿಮಾ ಮಾಗಳ ಉಪಸ್ಥಿತರಿದ್ದರು.