ಬೆಟಗೇರಿ ಗ್ರಾಮದ ರೈತರು ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಮೆಕ್ಕೆಜೋಳ ಮತ್ತು ಸಜ್ಜೆ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಿದ್ದಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಜಿಲ್ಲೆಯಲ್ಲಿ ತೀವ್ರ ಬರದಿಂದ ಶೇ. 98ರಷ್ಟು ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತವೇ ವರದಿ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಟಗೇರಿ ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ವಿಮೆ ಪರಿಹಾರಕ್ಕಾಗಿ ನಡೆಸಿದ ಆಣೆವಾರು ಲೆಕ್ಕಾಚಾರದಲ್ಲಿ ಉತ್ತಮ ಇಳುವರಿ ದಾಖಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೊಲದಲ್ಲಿ ಬೆಳೆ ಸರಿಯಾಗಿ ಬಾರದಿದ್ದರೂ ಉತ್ತಮ ಇಳುವರಿ ಬಂದಿದೆ ಎಂದು ತೋರಿಸಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.ಈ ಕುರಿತು ಬೆಟಗೇರಿ ಗ್ರಾಮದ ಹಲವು ರೈತರು ಆಣೆವಾರು ಲೆಕ್ಕಾಚಾರದಲ್ಲಿ ಲೋಪವಾಗಿದೆ ಎಂದು ಈಗಾಗಲೇ ದೂರು ಸಲ್ಲಿಸಿದ್ದಾರೆ. ಆದರೆ, ರೈತರ ದೂರಿಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಪಿಡಿಒ, ಲೆಕ್ಕಾಚಾರದಲ್ಲಿ ಯಾವುದೇ ತಪ್ಪಾಗಿಲ್ಲ, ನಿಯಮಾನುಸಾರವೇ ಮಾಡಲಾಗಿದೆ ಎಂದು ಹಿಂಬರಹ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ರೈತರ ಅನುಮಾನ ಮತ್ತಷ್ಟು ಹೆಚ್ಚಾಗಿದೆ.
ಆಗಿದ್ದೇನು?: ಬೆಟಗೇರಿ ಗ್ರಾಮದ ರೈತರು ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಮೆಕ್ಕೆಜೋಳ ಮತ್ತು ಸಜ್ಜೆ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಿದ್ದಾರೆ. ಬೆಳೆ ವಿಮೆ ಪರಿಹಾರ ನಿರ್ಧರಿಸುವ ಪ್ರಕ್ರಿಯೆಯ ಭಾಗವಾಗಿ ಪ್ರಯೋಗ ಸಂಖ್ಯೆ 7182006ರ ಸರ್ವೆ ನಂ. 4-2 ಮತ್ತು 6ರಲ್ಲಿ ಹಾಗೂ ಪ್ರಯೋಗ ಸಂಖ್ಯೆ 7182007ರ ಸರ್ವೆ ನಂ. 590-4 ಮತ್ತು 590-5ರಲ್ಲಿ ಮೆಕ್ಕೆಜೋಳದ ಬೆಳೆ ಕಟಾವು ಪ್ರಯೋಗ ನಡೆಸಲಾಗಿದೆ. ಈ ಪ್ರಕ್ರಿಯೆಯನ್ನು ರೈತರ ಸಮ್ಮುಖದಲ್ಲಿಯೇ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.ಆದರೆ, ಸಂಬಂಧಪಟ್ಟ ರೈತರು ಸ್ಥಳದಲ್ಲಿರಲಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಅಷ್ಟಕ್ಕೂ ಹೊಲದಲ್ಲಿ 20 ಕೆ.ಜಿ.ಯಷ್ಟೂ ಮೆಕ್ಕೆಜೋಳದ ಇಳುವರಿ ಬಂದಿರಲಿಲ್ಲ. ಹೀಗಾಗಿ ಬೆಳೆ ಕಟಾವು ಮಾಡದೆ ಹೊಲವನ್ನು ಹರಗಲಾಗಿದೆ. ಆದರೆ, ಆಣೆವಾರು ಲೆಕ್ಕಾಚಾರದಲ್ಲಿ ಉತ್ತಮ ಇಳುವರಿ ದಾಖಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಇದರಿಂದ ಈ ವರ್ಷವೂ ಬೆಳೆ ವಿಮೆ ಪರಿಹಾರ ಕೈತಪ್ಪುವ ಆತಂಕ ಎದುರಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ನಿಯಮಾನುಸಾರ ಪ್ರಾಯೋಗಿಕವಾಗಿ ಆಯ್ಕೆ ಮಾಡಿದ ಹೊಲದಲ್ಲಿ ಬೆಳೆ ಇಲ್ಲದಿದ್ದರೆ ಮುಂದಿನ ಸರ್ವೆ ನಂಬರ್ನಲ್ಲಿ ಪರಿಶೀಲನೆ ನಡೆಸಬೇಕು. ಆದರೆ, ಈ ಪ್ರಕರಣದಲ್ಲಿ ಹಿಂದಿನ ಹೊಲದಲ್ಲಿಯೇ ಪರಿಶೀಲನೆ ನಡೆಸಲಾಗಿದೆ ಎಂಬುದು ರೈತರ ಮತ್ತೊಂದು ಆಕ್ಷೇಪವಾಗಿದೆ.ಜಿಲ್ಲೆಯಲ್ಲಿ ಬರದಿಂದ ಬೆಳೆ ನಷ್ಟವಾಗಿದ್ದರೂ ತಪ್ಪಾದ ಲೆಕ್ಕಾಚಾರದಿಂದ ಪರಿಹಾರ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪಾರದರ್ಶಕವಾಗಿ ಮರು ಆಣೆವಾರು ಲೆಕ್ಕಾಚಾರ ನಡೆಸಿ ನ್ಯಾಯ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಹತ್ತು ವರ್ಷಗಳ ಹಿಂದಿನ ಯಡವಟ್ಟು!: ಸುಮಾರು ಹತ್ತು ವರ್ಷಗಳ ಹಿಂದೆ ಇದೇ ರೀತಿಯ ಲೋಪದಿಂದಾಗಿ ಬೆಟಗೇರಿ ಭಾಗದ ಸುಮಾರು 1,500 ರೈತರಿಗೆ ₹3 ಕೋಟಿ ಬೆಳೆ ವಿಮೆ ಪರಿಹಾರ ಸಿಗದಂತಾಗಿತ್ತು ಎಂಬುದು ರೈತರ ಆರೋಪ. ಶಾಲೆ ಇರುವ ಸರ್ವೆ ನಂಬರ್ನಲ್ಲಿ ಆಣೆವಾರು ಲೆಕ್ಕಾಚಾರ ನಡೆಸಿದ್ದರಿಂದ ಈ ಸಮಸ್ಯೆ ಉಂಟಾಗಿತ್ತು ಎನ್ನಲಾಗಿದೆ. ಬಳಿಕ ಮರು ತನಿಖೆ ನಡೆಸಿದ ಸಂದರ್ಭದಲ್ಲಿ ಸ್ಥಳೀಯ ಗ್ರಾಪಂ ಕಾರ್ಯದರ್ಶಿ ಅಮಾನತುಗೊಂಡಿದ್ದರು ಎಂದು ರೈತರು ನೆನಪಿಸಿಕೊಳ್ಳುತ್ತಾರೆ.ನಂತರ ಸರ್ಕಾರ ಮಧ್ಯಪ್ರವೇಶಿಸಿ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಸೂಚಿಸಿತಾದರೂ, ಇದುವರೆಗೆ ಪರಿಹಾರ ದೊರೆತಿಲ್ಲ ಎಂದು ರೈತರು ದೂರಿದ್ದಾರೆ. ಹೀಗಾಗಿ ಹಿಂದಿನ ತಪ್ಪು ಮರುಕಳಿಸದಂತೆ ಈ ಬಾರಿಯ ಲೆಕ್ಕಾಚಾರವನ್ನು ತಕ್ಷಣ ಸರಿಪಡಿಸಬೇಕು ಎಂಬುದು ಅವರ ಒತ್ತಾಯವಾಗಿದೆ.
ಮಧ್ಯವರ್ತಿಗಳ ಹಾವಳಿ?: ಬೆಟಗೇರಿ ಮತ್ತು ಅಳವಂಡಿ ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ವಿಮೆ ಪರಿಹಾರ ಕೊಡಿಸುವ ಹೆಸರಿನಲ್ಲಿ ಮಧ್ಯವರ್ತಿಗಳ ಪ್ರಭಾವವಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಕೆಲವರ ಮೂಲಕವೇ ವಿಮೆ ಪಾವತಿಸಿ, ಪಾಲು ನೀಡುವ ಒಪ್ಪಂದ ಮಾಡಿಕೊಂಡವರಿಗೆ ಮಾತ್ರ ಪರಿಹಾರ ಸಿಗುತ್ತದೆ ಎಂಬ ಆರೋಪವನ್ನು ರೈತರು ಮಾಡಿದ್ದಾರೆ. ಈ ಕುರಿತು ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪಿಸಿದ್ದರು.ಈ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿದರೆ ರೈತರ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳು ಬೆಳಕಿಗೆ ಬರಲಿವೆ ಎಂಬುದು ಗ್ರಾಮಸ್ಥರ ಅಭಿಪ್ರಾಯ. ಆದರೆ, ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ದೃಢಪಡಬೇಕಿದೆ.
ಪಿಡಿಒ ಪ್ರತಿಕ್ರಿಯೆಗೆ ಪ್ರಯತ್ನ: ಪ್ರಕರಣದ ಕುರಿತು ವಿವರಣೆ ಪಡೆಯಲು ಪಿಡಿಒ ಸಂಜಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.ನಮ್ಮ ಹೊಲದಲ್ಲಿ ಬೆಳೆ ಸರಿಯಾಗಿ ಬಂದಿಲ್ಲ. ಕಾಳು ತುಂಬದ ತೆನೆಗಳೇ ಇವೆ. ಆದರೂ ಉತ್ತಮ ಇಳುವರಿ ಬಂದಿದೆ ಎಂದು ಲೆಕ್ಕಾಚಾರ ಮಾಡಿದ್ದಾರಂತೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ನಿಜವಾದ ಸ್ಥಿತಿಯನ್ನು ದಾಖಲಿಸಬೇಕು ಎಂದು ರೈತ ತಿವೇಂದ್ರಪ್ಪ ತಿಳಿಸಿದರು.