ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ, ಬಾಬುರಾನಕೊಪ್ಪಲು ಹಾಗೂ ಪಾಂಡವಪುರ ಹೆದ್ದಾರಿಯಲ್ಲಿ ಟ್ರಾಪಿಕ್ ಸಿಗ್ನಲ್ ದೀಪಗಳ ಅಳವಡಿಕೆ, ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಡ್ರಗ್ಸ್, ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದು. ಜೊತೆಗೆ ಕೆಲ ಹೆದ್ದಾರಿ ಗಸ್ತು ಕಾರ್ಯನಿರ್ವಹಿಸುತ್ತಿರುವ ಪೊಲೀಸರೇ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ.ಹೀಗೆ ಹತ್ತು ಹಲವು ದೂರುಗಳು ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿಬಂದವು.
ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಉಪವಿಭಾಗೀಯ ಮಟ್ಟದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಅನಾವರಣ ಮಾಡಿದರು.ರಾತ್ರಿ ವೇಳೆ ಟೌನ್ ಹಾಗೂ ಗ್ರಾಮೀಣ ಭಾಗಗಳ ಮನೆಯಲ್ಲಿನ ಹಣ, ಚಿನ್ನಾಭರಣ ಸೇರಿದಂತೆ ಸಣ್ಣ- ಪುಟ್ಟ ಕಳ್ಳತನಗಳು ಹಾಗೂ ರೈತರ ಜಮೀನಿನ ವಿದ್ಯುತ್ ಪಂಪ್‌ಸೆಟ್‌ಗಳು ಕಳ್ಳತನವಾಗುತ್ತಿವೆ. ಇದರಿಂದ ರೈತರ ಬೆಳೆ ಸಂಪೂರ್ಣವಾಗಿ ಅರ್ಧಕ್ಕೆ ನಿಂತು ಹೋಗಿ, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಮತ್ತೊಂದು ಪಂಪ್‌ಸೆಟ್ ತೆಗೆದುಕೊಳ್ಳಲು ಹಣ, ಸಮಯ ಬೇಕಾಗುತ್ತದೆ. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನೈಟ್ ಬೀಟ್ ಪೊಲೀಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಗ್ರಾಮದ ಸಣ್ಣ- ಪುಟ್ಟ ಅಂಗಡಿಗಳಲ್ಲೂ ಸಹ ಡ್ರಗ್ಸ್, ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಯುವಕರು ಚಿಕ್ಕ ವಯಸ್ಸಿನಲ್ಲೇ ಮದ್ಯವ್ಯಸನಿಗಳಾಗುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಕ್ರಮ ವಹಿಸುವಂತೆ ಒತ್ತಾಯಿಸಿದರು.ಶ್ರೀರಂಗಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಯುವಕರು ರಾತ್ರಿ ವೇಳೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುತ್ತಾರೆ. ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಜೊತೆಗೆ ಖಾಸಗಿ ಬಸ್ ನಿಲ್ದಾಣವನ್ನು ಕೆಲ ಕಿಡಿಗೇಡಿ ಯುವಕರು ಅಡ್ಡೆ ಮಾಡಿಕೊಂಡಿದ್ದಾರೆ. ಗಲಾಟೆ ಮಾಡುವುದು, ರಾಜೀ- ಸಂಧಾನ ಮಾಡಿಕೊಳ್ಳುವಂತಹ ಕೃತ್ಯಗಳು ನಡೆಯುತ್ತಿವೆ ಎಂದು ದೂರಿದರು.
ಹೆದ್ದಾರಿ ಗಸ್ತು ಕಾರ್ಯನಿರ್ವಹಿಸುವ ಕೆಲ ಪೊಲೀಸರು ಹೆಚ್ಚಾಗಿ ಹೊರ ರಾಜ್ಯದಿಂದ ಬರುವ ವಾಹನಗಳನ್ನು ತಡೆದು ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಪ್ರಶ್ನಿಸಿದರೆ ನೀವು ಹೊರ ರಾಜ್ಯಕ್ಕೆ ಹೋದ ವೇಳೆ ಅಲ್ಲಿನ ಪೊಲೀಸರು ಹೀಗೆ ನಿಮ್ಮಿಂದ ಹಣ ವಸೂಲಿ ಮಾಡಿಲ್ಲವೇ ಸುಮ್ಮನೆ ಹೋಗಿ ಎಂದು ಹೆದರಿಸಿ ಕಳುಹಿಸುತ್ತಾರೆ ಎಂದು ಎಸ್‌ಪಿ ಅವರ ಮುಂದೆ ಪೊಲೀಸರ ವಿರುದ್ಧ ಆರೋಪಿಸಿದರು.ನಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಸಾರ್ವಜನಿಕರಿಂದ ಸಂಪೂರ್ಣವಾಗಿ ಕುಂದು ಕೊರತೆ ವಿಚಾರಿಸಿ ಮಾತನಾಡಿ, ಸಭೆಯಲ್ಲಿ ವೈಯಕ್ತಿಕ ವಿಷಯಗಳನ್ನು ಹೊರತುಪಡಿಸಿ, ಕೇವಲ ಸಾರ್ವಜನಿಕರ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿರುವುದು ಸಂತಸದ ವಿಷಯ. ಈಗಾಗಲೇ ಪಂಪ್‌ಸೆಟ್ ಕಳ್ಳತನಗಳ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ತಾಲೂಕಿನ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಳ್ಳತನವಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಮೇಲಿಂದ ಮೇಲೆ ಪಂಪ್‌ಸೆಟ್ ಮಾರಾಟ ಮಾಡುತ್ತಿರುವವರ ಬಗ್ಗೆ ನಿಗಾ ವಹಿಸುವಂತೆ ಕ್ರೈಂ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳ್ಳಿ ಮದ್ಯ ಹಾಗೂ ಡ್ರಗ್ಸ್ ಮಾರಾಟವಾಗುತ್ತಿರುವ ಸಂಬಂಧ ಅಬಕಾರಿ ಡೀಸಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದಾಗಿ ಭರವಸೆ ನೀಡಿದರು.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಡಿವೈಎಸ್‌ಪಿ ಮುರಳಿ, ಇನ್ಸ್‌ಪೆಕ್ಟರ್‌ಗಳಾದ ಪುನೀತ್, ಬಿ.ಜಿ ಕುಮಾರ್, ಪ್ರಕಾಶ್, ವಿವೇಕಾನಂದ, ಎಸ್‌ಐ ಶಿವಲಿಂಗ ದಳವಾಯಿ, ರಮೇಶ್ ಸೇರಿದಂತೆ ರೈತ, ದಲಿತ, ಕನ್ನಡ ಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.