ಕನ್ನಡ ಚಿತ್ರರಂಗದ ‘ಕರುನಾಡ ಚಕ್ರವರ್ತಿ’ ನಟ ಡಾ. ಶಿವರಾಜ್‌ಕುಮಾರ್ ಅವರು ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ತಮ್ಮ ಮುಂಬರುವ ಚಿತ್ರ ‘ಎ ಫಾರ್ ಆನಂದ್’ ಚಿತ್ರೀಕರಣ ಆರಂಭಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡ ಚಿತ್ರರಂಗದ ‘ಕರುನಾಡ ಚಕ್ರವರ್ತಿ’ ನಟ ಡಾ. ಶಿವರಾಜ್‌ಕುಮಾರ್ ಅವರು ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ತಮ್ಮ ಮುಂಬರುವ ಚಿತ್ರ ‘ಎ ಫಾರ್ ಆನಂದ್’ ಚಿತ್ರೀಕರಣ ಆರಂಭಿಸಿದರು.ಶಿವಣ್ಣ ಅವರ ಆಗಮನವು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಭ್ರಮ ಮತ್ತು ತಾರಾ ಮೆರುಗು ತುಂಬಿ ವಿದ್ಯಾರ್ಥಿಗಳಿಗೆ ಅವಿಸ್ಮರಣೀಯ ಕ್ಷಣವಾಯಿತು. ನೆಚ್ಚಿನ ನಟನನ್ನು ಸ್ವಾಗತಿಸಲು ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದೇ ವೇಳೆ ಜನಪ್ರಿಯ ಕನ್ನಡ ಹಾಗೂ ಶಿವರಾಜ್‌ಕುಮಾರ್ ಅವರ ಹಿಟ್ ಹಾಡುಗಳಿಗೆ ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸಿದಾಗ ಕ್ಯಾಂಪಸ್‌ನ ರಂಗು ಹೆಚ್ಚಿಸಿತ್ತು.
ತೆರೆಯ ಮೇಲೆ ತಮ್ಮ ಚೈತನ್ಯಶೀಲ ಅಭಿನಯ ಮತ್ತು ಅಭಿಮಾನಿಗಳೊಂದಿಗೆ ಬೆರೆಯುವ ಸ್ನೇಹಪರ ಸ್ವಭಾವಕ್ಕೆ ಹೆಸರುವಾಸಿಯಾದ ಶಿವಣ್ಣ, ವಿದ್ಯಾರ್ಥಿಗಳ ಉತ್ಸಾಹಕ್ಕೆ ಸ್ಪಂದಿಸಿ ಅವರೊಂದಿಗೆ ತಾವೂ ಹೆಜ್ಜೆ ಹಾಕಿದ್ದು ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ನಂತರ ನಟ ಮತ್ತು ವಿದ್ಯಾರ್ಥಿಗಳ ನಡುವಿನ ಈ ಸಂವಾದವು ಚಿತ್ರೀಕರಣದ ಸುತ್ತಲಿನ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿತು.‘ಎ ಫಾರ್ ಆನಂದ್’ ಚಿತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ನಟಿಸುತ್ತಿದ್ದು, ಇದು ವಿದ್ಯಾರ್ಥಿ ಜೀವನದ ಕಥಾಹಂದರವನ್ನು ಹೊಂದಿದೆ. ಚಿತ್ರೀಕರಣಕ್ಕಾಗಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವನ್ನು ಪ್ರಮುಖ ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಗಿದ್ದು, ಚಿತ್ರದ ಬಹುಭಾಗದ ಚಿತ್ರೀಕರಣವು ಇಲ್ಲಿಯೇ ನಡೆಯಲಿದೆ. ಇದರೊಂದಿಗೆ, ಬೆಂಗಳೂರು ಉತ್ತರದಲ್ಲಿರುವ ಪ್ರೆಸಿಡೆನ್ಸಿ ಶಾಲೆಯಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುವುದು. ಚಿತ್ರೀಕರಣಕ್ಕೆ ಸ್ಥಳಾವಕಾಶ ಕಲ್ಪಿಸಿದ್ದಲ್ಲದೆ, ಚಿತ್ರತಂಡಕ್ಕೆ ಬೆಂಬಲ ನೀಡಿದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ.ನಿಸಾರ್ ಅಹ್ಮದ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಡಾ.ಶಿವರಾಜ್‌ಕುಮಾರ್ ತಿಳಿಸಿದರು.