ಪಕ್ಷ ಸಂಘಟಿಸಲು ಕಾರ್ಯಕರ್ತರ ಪಡೆ ಅಗತ್ಯ

| Published : Jul 19 2025, 01:00 AM IST

ಸಾರಾಂಶ

ಅವಿಭಜಿತ ಕೋಲಾರ ಜಿಲ್ಲೆಯ ಚಿಲಕಲನೇರ್ಪು ಹೋಬಳಿಯ ಪಕ್ಷದ ಕಾರ್ಯಕರ್ತರ ಕಾಳಜಿ, ಪ್ರೀತಿ, ಅಭೂತಪೂರ್ವ ಬೆಂಬಲ ಲಭಿಸಿದೆ. ಅವಿಭಜಿತ ಕೋಲಾರ ಜಿಲ್ಲೆಯ ೧೧ ಕ್ಷೇತ್ರಳಲ್ಲಿ ೧೦ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಸಕ್ರಿಯ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವುದರ ಜೊತೆಗೆ ಸದಸ್ಯತ್ವ ನೋಂದಣಿ ಮೂಲಕ ಇದನ್ನು ಸಾಧಿಸಬಹುದಾಗಿದೆ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಪಕ್ಷದ ಬಲವರ್ಧನೆ ಮತ್ತು ಬಲಿಷ್ಠ ಕಾರ್ಯಕರ್ತರ ಪಡೆಯನ್ನು ಕಟ್ಟಿ ಪಕ್ಷವನ್ನು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡುವುದು ತಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ನುಡಿದರು.

ತಾಲೂಕಿನ ಕೆಂಚರ‍್ಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಅಭಿನಂದನಾ ಮತ್ತು ಸಂಘಟನಾ ಪರ್ವ ಕಾರ್ಯಕ್ರಮದಲ್ಲಿ ದೀಪ ಬೆಳಗಿ ಮಾತನಾಡಿ, ಈ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿಯಾಗಿದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೫೦ ಸಾವಿರ ಸದಸ್ಯತ್ವ ನೋಂದಣಿಯಾಗಿದೆ ಎಂದರು.

11ರಲ್ಲಿ 10 ಕ್ಷೇತ್ರ ಗೆಲ್ಲಬೇಕು

ಅವಿಭಜಿತ ಕೋಲಾರ ಜಿಲ್ಲೆಯ ಚಿಲಕಲನೇರ್ಪು ಹೋಬಳಿಯ ಪಕ್ಷದ ಕಾರ್ಯಕರ್ತರ ಕಾಳಜಿ, ಪ್ರೀತಿ, ಅಭೂತಪೂರ್ವ ಬೆಂಬಲ ಲಭಿಸಿದೆ. ಅವಿಭಜಿತ ಕೋಲಾರ ಜಿಲ್ಲೆಯ ೧೧ ಕ್ಷೇತ್ರಳಲ್ಲಿ ೧೦ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಸಕ್ರಿಯ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವುದರ ಜೊತೆಗೆ ಸದಸ್ಯತ್ವ ನೋಂದಣಿ ಮೂಲಕ ಇದನ್ನು ಸಾಧಿಸಬಹುದಾಗಿದೆ ಎಂದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ಜನವಿರೋಧಿ ಧೋರಣೆ ಮತ್ತು ಆಡಳಿತವನ್ನು ನೀಡುತ್ತಿದ್ದು ಒಂದೆಡೆ ಹಲವು ಗ್ಯಾರಂಟಿಗಳ ನೆಪದಲ್ಲಿ ಅದಕ್ಕೆ ಹಣಕಾಸನ್ನು ಸರಿದೂಗಿಸಲು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಮುಂದಿನ ಚುನಾವಣೆಗಳಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ತರುವಲ್ಲಿ ಯಶಸ್ವಿಯಾಗಬೇಕು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಧೂಳಿಪಟ ಮಾಡಬೇಕೆಂದು ಕಾರ್ಯಕರ್ತರಿಗೆ ಹೇಳಿದರು.

ಮೋದಿ ಯೋಜನೆಗಳ ಪ್ರಚಾರ

ಮಾಜಿ ಶಾಸಕ ರಾಜಣ್ಣ ಮಾತನಾಡಿ ಅಭಿನಂದನಾ ಮತ್ತು ಸಂಘಟನಾ ಪರ್ವದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ, ಚುನಾವಣೆಗಳಲ್ಲಿ ಗೆಲ್ಲುವು ಯುವಕರು ಮತ್ತು ನಿಷ್ಠಾವಂತ ಕಾರ್ಯಕರ್ತರು, ಕೆಎಂಕೆ ರವರ ನಿಸ್ವಾರ್ಥ ಸೇವೆ, ನರೇಂದ್ರ ಮೋದಿ ಜನಪರ ಯೋಜನೆಗಳನ್ನು ಬೂತ್ ಮಟ್ಟದಿಂದ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದರು.

ಮುನಿರಾಜು ಮಾತನಾಡಿ ಜಿಲ್ಲೆಯಲ್ಲಿ ತಳಮಟ್ಟದಿಂದ ಬಿಜೆಪಿ ಪಕ್ಷವನ್ನು ಬೆಳೆಸುವ ಜವಾಬ್ದಾರಿ ರಾಮಚಂದ್ರಗೌಡರ ಮೇಲಿದ್ದು ಅದನ್ನು ಅವರು ಸಂಪೂರ್ಣವಾಗಿ ನಿಭಾಯಿಸುವುದರ ಜೊತೆಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ರಚಿಸುವಲ್ಲಿ ನೆರವಾಗಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದನ್ನು ಪ್ರತಿಯೊಂದು ಮನೆ ಮನೆಗೆ ತಲುಪಿಸುವುದು ಕಾರ್ಯಕರ್ತರ ಕರ್ತವ್ಯವಾಗಿದೆ. ರಾಜ್ಯದಲ್ಲಿ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ಸಿಎಂ ಮತ್ತು ಡಿಸಿಎಂ ಕಿತ್ತಾಟ ನಡೆಯುತ್ತಿದ್ದು ದಕ್ಷ ಆಡಳಿತ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ಬೂತ್‌ ಮಟ್ಟದಿಂದ ಸಂಘಟಿಸಿ

ಬಿಜೆಪಿ ಗ್ರಾಮಾಂತರ ಮಂಡಳ ಅಧ್ಯಕ್ಷ ಆನಂದಗೌಡ ಬೂತ್ ಮಟ್ಟದಿಂದ ಸಂಘಟನೆಗೆ ಒತ್ತು ಕೊಡಬೇಕೆಂದರು ಪಕ್ಷವನ್ನು ಗಟ್ಟಿಯಾಗಿ ನೆಲೆಯೂರುವಂತೆ ಮಾಡುವುದರ ಜೊತೆಗೆ ಸನಾತನ ಧರ್ಮದ ಉಳಿವಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಂತೆ ದೇಶದ ಮೂಲೆ ಮೂಲೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದರ ಮೂಲಕ ದೇಶದ ಸುಭದ್ರತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆಯೆಂದು ಪ್ರಸ್ತಾವಿಕ ನುಡಿಗಳನ್ನು ನುಡಿದರು.

ಗ್ರಾಪಂ ಅಧ್ಯಕ್ಷ ಬ್ಯಾಂಕ್ ಕೃಷ್ಣಾರೆಡ್ಡಿ ಮಾತನಾಡಿ, ಎನ್‌ಡಿಎ ಮೈತ್ರಿ ಕೂಟದಲ್ಲಿ ಜೆಡಿಎಸ್ ಒಂದಾಗಿದ್ದು ನಮ್ಮ ನಾಯಕರಾದ ಹೆಚ್.ಡಿ.ದೇವೇಗೌಡ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿ ಎನ್‌ಡಿಎ ಮೈತ್ರಿ ಮಾಡಿಕೊಂಡಿದ್ದಾರೆ. ಆದರಂತೆ ಹೆಚ್.ಡಿ.ಕುಮಾರಸ್ವಾಮಿ ಬೃಹತ್ ಕೈಗಾರಿಕಾ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದು, ಈ ಮೈತ್ರಿಯ ಮೂಲಕ ದೇಶದ ಅಭಿವೃದ್ಧಿಗೆ ನಾವು ಸಹಕಾರ ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ರಾಜಶೇಖರರೆಡ್ಡಿ, ದಿಶಾ ವೆಂಕಟೇಶ್‌ಗೌಡ, ನಾರಾಯಣಸ್ವಾಮಿ, ಚೀಮಂಗಲ ನಾರಾಯಣಸ್ವಾಮಿ, ಕನಕಪ್ರಸಾದ್, ಮಿಟ್ಟಹಳ್ಳಿ ಮಂಜುನಾಥ್, ಆಂಜನೇಯಲು, ಪ್ರಸಾದ್‌ರೆಡ್ಡಿ, ಚಾತುರ್ಯ ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.