ಕನ್ನಡಪ್ರಭ ವಾರ್ತೆ ಮಂಡ್ಯ

ಮಾ.28ರಂದು ನಡೆಯುವ ವಿಶ್ವ ವಿಖ್ಯಾತ ಶ್ರೀಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವಕ್ಕೆ ಮೇಲುಕೋಟೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ವೈರಮುಡಿ ವೀಕ್ಷಣೆಗೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ಅನಾನುಕೂಲವಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು ೨ ಲಕ್ಷ ಭಕ್ತಾದಿಗಳು ಆಗಮಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕ್ಷೇತ್ರದಲ್ಲಿನ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರಸ್ತೆಗಳು, ಚರಂಡಿಗಳು, ವಾಹನ ಪಾರ್ಕಿಂಗ್ ಸ್ಥಳ, ಕಲ್ಯಾಣಿಗಳು ಹಾಗೂ ದೇವಾಲಯಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿಲಾಗಿದೆ ಎಂದರು.

೧೪೦ ಬಸ್ಸುಗಳ ವ್ಯವಸ್ಥೆ:

ಶ್ರೀವೈರಮುಡಿ ಕಿರೀಟಧಾರಣೆ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯಿಂದ ಮೇಲುಕೋಟೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಪ್ರಮುಖ ಪಟ್ಟಣ-ನಗರ ಭಾಗಗಳಿಂದ ಸುಮಾರು ೧೪೦ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮುಂಗಡ ಸೀಟು ಕಾಯ್ದಿರಿಸುವ ವ್ಯವಸ್ಥೆ, ಮಂಡ್ಯ ನಗರದಿಂದ ನಿರಂತರ ಬಸ್ ವ್ಯವಸ್ಥೆ ಮಾಡಲಾಗಿದೆ. ಮೇಲುಕೋಟೆಯ ವಲಯ ಅರಣ್ಯಾಧಿಕಾರಿಗಳ ಕಛೇರಿಯ ಎದುರಿನ ಅವರಣದಲ್ಲಿ ಸಾರಿಗೆ ವಾಹನಗಳಿಗೆ ತಾತ್ಕಾಲಿವಾಗಿ ನಿಲ್ಯಾಣ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳದಿಂದ ದೇವಾಲಯದವರೆಗೆ ಓಡಾಡಲು ಎಲ್ಲಾ ಹಿರಿಯ ನಾಗರೀಕರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ಗರ್ಭಿಣಿಯರಿಗೆ ೫ ಉಚಿತ ಮಿನಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು, ಭಕ್ತಾಧಿಗಳ ಓಡಾಟಕ್ಕೆ ತೊಂದರೆಯಾಗದಂತೆ ವಾಹನಗಳ ದಟ್ಟಣೆ ನಿರ್ವಹಿಸಲು ಅಗತ್ಯ ಬ್ಯಾರಿಕೇಡ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.


ಸೂಕ್ತ ಪಾರ್ಕಿಂಗ್ ಸೌಲಭ್ಯ:

ಕ್ಷೇತ್ರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಗ್ರಾಮದ ಹೊರ ಭಾಗದಲ್ಲಿ ಮೇಲುಕೋಟೆ ಗ್ರಾಮದ ಬಿಸಿಲು ಮಾರಮ್ಮ ದೇವಾಲಯಯದ ಬಳಿ ಮತ್ತು ಧನುಷೋಟಿಗೆ ಹೋಗುವ ರಸ್ತೆ ಬಳಿ ಗಣ್ಯರ ವಾಹನಗಳಿಗೆ, ಯದುಶೈಲ ಪ್ರೌಢ ಶಾಲೆ ಆವರಣದಲ್ಲಿ ದ್ವಿಚಕ್ರ ವಾಹನಗಳಿಗೆ, ಎಸ್‌ಇಟಿ ಕಾಲೇಜು ಮೈದಾನದಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಹಾಗೂ ಜಕ್ಕನಹಳ್ಳಿ ರಸ್ತೆಯ ಕಣಿವೆ ಸರ್ಕಲ್ ವರಿಗೆ ೧೧ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳಿಗೆ ವಾಹನ ಪ್ರವಾಸಿ ಮಂದಿರದ ರಸ್ತೆಯಲ್ಲಿ ಗೌರಿಕಟ್ಟೆಯವರೆಗೆ (೧೪ ಸ್ಥಳಗಳಲ್ಲಿ) ನಾಲ್ಕು ಚಕ್ರದ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.

ದಾಸೋಹ ವ್ಯವಸ್ಥೆ:

ದೇವಾಲಯದ ದಾಸೋಹ ಭವನದಲ್ಲಿ ವೈರಮುಡಿ ಬ್ರಹೋತ್ಸವ ನಡೆಯುವ ದಿನ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ ಮಾ.೨೮ ರಂದು ಬೆಳಗ್ಗೆ ೮ ರಿಂದ ಮಾ.೨೯ ರಂದು ಬೆಳಗ್ಗೆ ೮ ಗಂಟೆಯವರೆಗೆ ನಿರಂತರವಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಗುವುದು ಎಂದರು.

ಶೌಚಾಲಯ ವ್ಯವಸ್ಥೆ:

ಕ್ಷೇತ್ರಕ್ಕೆ ಬರುವ ಪುರುಷ ಮತ್ತು ಮಹಿಳಾ ಭಕ್ತಾದಿಗಳಿಗೆ ಪ್ರತ್ಯೇಕವಾಗಿ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಸುಮಾರು ೫೨ ತಾತ್ಕಾಲಿಕ ಶೌಚಾಲಯ, ಬಯೋಕೆಮಿಕಲ್ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳನ್ನು ಹೊರತುಪಡಿಸಿ ಈ ವರ್ಷದಲ್ಲಿ ಕ್ಷೇತ್ರದ ಬಸ್ ನಿಲ್ದಾಣದ ಬಳಿ ಪ್ರವಾಸಿಮಂದಿರದ ಬಳಿ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಒಟ್ಟು ೨೦ ಶಾಶ್ವತ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

೪೦ ಶಾಶ್ವತ, ೪೦ ಹೆಚ್ಚುವರಿ ಸೀಸಿ ಕ್ಯಾಮೆರಾ:

ಕ್ಷೇತ್ರದ ಭದ್ರತೆಯ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ದೇವಾಲಯ ಮತ್ತು ಗ್ರಾಮದ ಪ್ರಮುಖ ಭಾಗಗಳಾದ ಬಸ್ ನಿಲ್ದಾಣ, ವಾಹನ ಪಾರ್ಕಿಂಗ್, ದೊಡ್ಡ ಕಲ್ಯಾಣಿ ಬಳಿ,ದಾಸೋಹ ಭವನ, ಮುಖ್ಯ ರಸ್ತೆಗಳು, ಪೊಲೀಸ್ ಠಾಣೆ ಬಳಿ, ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದ ಸುತ್ತಲು ಸುಮಾರು ೪೦ ಶಾಶ್ವತ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವಾಹನ ಪಾರ್ಕಿಂಗ್ ಮತ್ತು ಇತರ ಕಡೆಗಳಲ್ಲಿ ಹೆಚ್ಚುವರಿ ೪೦ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ವಹಿಸಲಾಗಿದೆ ಎಂದರು.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ:

ಮೇಲುಕೋಟೆಯ ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ತೊಂದರೆಯಾಗದಂತೆ ಪ್ರಮುಖ ಸ್ಥಳಗಳಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಸ್ಥಳಗಳಲ್ಲಿ, ಕಲ್ಯಾಣಿಗಳು, ಮಾರಿಗುಡಿಯ ಬಳಿ, ಪುತಿನ ಮೈದಾನ, ರಾಯಗೋಪುರ, ದಾಸೋಹ ಸ್ಥಳ, ಗೌರಿಕಟ್ಟೆ, ಹೊಸಹಳ್ಳಿ ಕಣಿವೆ ಬಳಿ ಹಾಗೂ ಹೆಚ್ಚು ಜನ ಸೇರುವ ಇತರ ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ ಹೆಚ್ಚುವರಿ ತಾತ್ಕಾಲಿಕ ನಲ್ಲಿಗಳನ್ನು ಅಳವಡಿಸುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.

೨೪ ಗಂಟೆ ಅರೋಗ್ಯ ಸೇವೆ:

ತುರ್ತು ಚಿಕಿತ್ಸೆಗಾಗಿ ಹಾಗೂ ೨೪*೭ (ಹಗಲು-ರಾತ್ರಿ) ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗುವಂತೆ ಹೆಚ್ಚುವರಿ ಆರೋಗ್ಯ ಸಿಬ್ಬಂದಿಗಳು, ನುರಿತ ವೈದ್ಯರು ಆಂಬ್ಯುಲೆನ್ಸ್ ವಾಹನದ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ವೈರಮುಡಿ ಬ್ರಹೋತ್ಸವ ಕಾಲದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ದಾನಿಗಳು ಅನ್ನದಾನ, ಪ್ರಸಾದ ವಿನಿಯೋಗ ಮಾಡುವುದರಿಂದ ಮುನ್ನೆಚ್ಚರಿಕೆಯಾಗಿ ತಯಾರಿಸಲಾದ ಪ್ರಸಾದದ ಗುಣಮಟ್ಟದ ಬಗ್ಗೆ ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಲು ನುರಿತ ಆಹಾರ ಪರೀಕ್ಷಕರನ್ನು ಸಹ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಏ.೧ರಂದು ತೆಪ್ಪೋತ್ಸವ:

ಏ.೧ ರಂದು ತೆಪ್ರೋತ್ಸವ ಕಾರ್ಯಕ್ರಮ ನಡೆಯಲಿದ್ದು, ದೊಡ್ಡ ಕಲ್ಯಾಣಿಯಲ್ಲಿ ಕಲ್ಯಾಣಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಿಸಲಾಗಿದ್ದು ಕಲ್ಯಾಣಿಯ ವಿವಿಧ ವೇದಿಕೆಗಳಲ್ಲಿ ಮ್ಯಾಂಡಲಿನ್ ವಾದನ, ಓಕಲ್, ಭರತ ನಾಟ್ಯ ಚಂಡೆ ಮದ್ದಳೆ ಮತ್ತು ನಾದಸ್ವರ ವಾದನ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಕಸ್ಮಿಕ ಅವಘಡಗಳನ್ನು ತಡೆಗಟ್ಟಲು ಕಲ್ಯಾಣಿಯ ಬಳಿ ೫ ಮಂದಿ ನುರಿತ ಈಜುಗಾರರನ್ನು ಜೀವ ರಕ್ಷಕ ಸಾಮಗ್ರಿಗಳೊಂದಿಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ವಿಶೇಷ ವಿದ್ಯುತ್ ದೀಪಾಲಂಕಾರ:

ವಿಶೇಷ ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರ ವ್ಯವಸ್ಥೆಯನ್ನು ಕಳೆದ ಬಾರಿಯಂತೆ ಈ ವರ್ಷವೂ ಸಹ ಕ್ಷೇತ್ರದಲ್ಲಿ ವಿಶೇಷ ದೀಪಾಲಂಕಾರ ಮತ್ತು ಹೂವಿನ ಅಲಂಕಾರ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಪೊಲೀಸ್ ಅಧಿಕ್ಷಕರು ವಿ.ಜೆ ಶೋಭರಾಣಿ ಮಾತನಾಡಿ, ವೈರಮುಡಿ ಬ್ರಹ್ಮೋತ್ಸವದಲ್ಲಿ ಸಾರ್ವಜನಿಕರಿಗೆ ತುರ್ತು ಅವಘಡಗಳ ನಿರ್ವಹಣೆಗಾಗಿ ಎರಡು ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಕ್ಷೇತ್ರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತಾ ಹಿತದೃಷ್ಟಿಯಿಂದ ೧,೨೦೦ ಕ್ಕೂ ಹೆಚ್ಚು ಆರಕ್ಷಕ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಉಪಸ್ಥಿತರಿದ್ದರು.