ನಾಡಿನ ಸಂಸ್ಕೃತಿ ಉಳಿಸುವ ವೇದಿಕೆ ಅಗತ್ಯ: ಶಾಸಕ ಕೆ.ಷಡಕ್ಷರಿ

| Published : Nov 17 2024, 01:16 AM IST

ನಾಡಿನ ಸಂಸ್ಕೃತಿ ಉಳಿಸುವ ವೇದಿಕೆ ಅಗತ್ಯ: ಶಾಸಕ ಕೆ.ಷಡಕ್ಷರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳನ್ನು ಕೇವಲ ನಾಲ್ಕು ಗೋಡೆಗಳ ಮಧ್ಯೆ ಅಂಕಗಳಿಕೆಯ ಶಿಕ್ಷಣಕ್ಕೆ ಸೀಮಿತವಾಗಿಸದೆ ದೇಶಾಭಿಮಾನ ಮೂಡಿಸುವಂತಹ ವೇದಿಕೆಗಳ ಸೃಷ್ಟಿಸಿ ಕೊಡಬೇಕಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು. ತಿಪಟೂರಿನಲ್ಲಿ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಕನ್ನಡನಾಡಿನ ಮಾತೃಭಾಷೆ ಕನ್ನಡ, ಸಂಸ್ಕೃತಿ, ನಾಡು-ಜಲ, ಕಲೆ ಸಾಹಿತ್ಯ ಉಳಿಯಬೇಕೆಂದರೆ ಅದು ನಮ್ಮ ಮಕ್ಕಳು ಹಾಗೂ ಯುವಕರಿಂದ ಮಾತ್ರ ಸಾಧ್ಯವಿದ್ದು ಮಕ್ಕಳನ್ನು ಕೇವಲ ನಾಲ್ಕು ಗೋಡೆಗಳ ಮಧ್ಯೆ ಅಂಕಗಳಿಕೆಯ ಶಿಕ್ಷಣಕ್ಕೆ ಸೀಮಿತವಾಗಿಸದೆ ದೇಶಾಭಿಮಾನ ಮೂಡಿಸುವಂತಹ ವೇದಿಕೆಗಳ ಸೃಷ್ಟಿಸಿ ಕೊಡಬೇಕಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದ ಕಲ್ಪತರು ವಿದ್ಯಾಸಂಸ್ಥೆಯ ಕಲ್ಪತರು ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆಲ್ಲಾ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಕನ್ನಡ ರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ಆಚರಣೆಗಳು ಒಂದು ದಿನಕ್ಕೆ ಸೀಮಿತವಾಗುತ್ತಿದ್ದು ನಮ್ಮ ಕಣ್ಮುಂದೆಯೇ ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಆಚಾರ-ವಿಚಾರಗಳು ನಶಿಸಿ ಹೋಗುತ್ತಿರುವುದು ನೋವಿನ ಸಂಗತಿ. ಮಕ್ಕಳ ವಿಚಾರವಂತರಾಗಬೇಕು. ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವಂತಹ ಮನೋಭಾವವನ್ನು ಅವರಲ್ಲಿ ಬೆಳೆಸಬೇಕು. ಕಲ್ಪತರು ನಾಡು ಸಾಹಿತಿಗಳು, ಕಲಾವಿದರ ಬೀಡಾಗಿದ್ದು ಅವರ ಚಿಂತನೆಗಳು, ದೂರದೃಷ್ಟಿಯ ಬಗ್ಗೆ ಮಕ್ಕಳಿಗೆ ಪಠ್ಯದ ಜೊತೆಗೆ ತಿಳಿಸಬೇಕು. ಕಸಾಪದಿಂದ ಉತ್ತಮ ಸಭೆ, ಸಮ್ಮೇಳನಗಳು ನಡೆಯುತ್ತಿದ್ದು ಅದರಲ್ಲಿ ಮಕ್ಕಳ ಸಮ್ಮೇಳನ ತುಂಬಾ ವಿಶೇಷವಾದದ್ದು. ಮುಂದಿನ ಬಾರಿ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಮಕ್ಕಳ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಬೇಕು. ಅದಕ್ಕೆ ಬೇಕಾದ ಸಹಕಾರ, ಪ್ರೋತ್ಸಾಹ ನೀಡುತ್ತೇನೆ. ಅಂದು ಒಂದು ದಿನ ತಾಲೂಕು ಮತ್ತು ನಗರ ಪ್ರದೇಶದ ಶಾಲೆಗಳಿಗೆ ರಜೆ ಘೋಷಿಸಿ ಸಂಭ್ರಮದಿಂದ ಆಚರಿಸೋಣ ಎಂದರು.ಸಮ್ಮೇಳನಾಧ್ಯಕ್ಷರಾಗಿದ್ದ ಕಲ್ಪತರು ಸೆಂಟ್ರಲ್ ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಚರಿತ ಎಸ್. ಸುಜ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ನಾಡು ನುಡಿ ಉಳಿಸಿ ಬೆಳೆಸಿ ಎಂದು ಕರೆ ಕೊಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಾದ ನಾವು ಕನ್ನಡ ಭಾಷೆಯ ನಡುವೆ ಸಂಬಂಧವನ್ನು ಬೆಸೆಯುವ ಜವಾಬ್ದಾರಿ ಹೊರಬೇಕು. ಕನ್ನಡ ಭಾಷೆ ಮಾತೃಭಾಷೆಯಾಗಿ ಆಡಳಿತ ಭಾಷೆಯಾಗಿ ಯಶಸ್ವಿಯಾಗಿದ್ದರೂ ಉದ್ಯೋಗದ ಭಾಷೆಯಾಗಿಲ್ಲ. ನಾವೆಲ್ಲರೂ ಕನ್ನಡ ಭಾಷೆ ಉಳಿವಿಗಾಗಿ ಜಾಗರೂಕರಾಗಬೇಕು ಇಂತಹ ವೇದಿಕೆಗಳಲ್ಲಿ ಸಿಕ್ಕುವ ಅವಕಾಶಗಳನ್ನು ಬಳಸಿಕೊಳ್ಳಬೇಕೆಂದರು.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ಕೆ.ಟಿ ತಿಪ್ಪೇಸ್ವಾಮಿ ಮಾತನಾಡಿ ಮೌಲ್ಯಗಳು ಕಳೆದು ಹೋಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಸಾಹಿತ್ಯದ ವಿಷಯಗಳು ಮನಸ್ಸಿಗೆ ತಲುಪಿಸಬೇಕು. ಮಕ್ಕಳು ನಾಳಿನ ಪ್ರಜೆಗಳಲ್ಲ ಇಂದಿನ ಪ್ರಜೆಗಳಾಗಿದ್ದು ಮಕ್ಕಳ ವಿಕಾಸಕ್ಕಾಗಿ ಕೆಲಸ ಮಾಡಬೇಕಿದೆ. ಪ್ರತಿ ಶಾಲೆಗಳಲ್ಲಿ ೩ನೇ ಶನಿವಾರ ಸಂಭ್ರಮ ಶನಿವಾರ ಎಂದು ಆಚರಿಸುವ ಮೂಲಕ ಮಕ್ಕಳಲ್ಲಿ ವಿಶ್ವಾಸ ಮೂಡಿಸುವ, ನಾಯಕತ್ವಗುಣ ಬೆಳೆಸುವಂತಾಗಬೇಕಿದ್ದು ಈ ಬಗ್ಗೆ ಶಾಸಕರು ಗಮನಹರಿಸಬೇಕಿದೆ. ಕನ್ನಡ ಭಾಷೆ ಬಗ್ಗೆ ಹಿಂಜರಿಕೆ ಬೇಡ ಇಂಗ್ಲೀಷ್ ಭಾಷೆಗೆ ಸಮರ್ಥವಾಗಿ ಕನ್ನಡ ಭಾಷೆಯನ್ನು ಬೆಳೆಸಬೇಕಿದೆ ಎಂದರು.ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ಮಕ್ಕಳಲ್ಲಿ ನಮ್ಮ ಸಾಹಿತ್ಯ, ಕಲೆ, ಭಾಷೆಯ ಬಗ್ಗೆ ಉತ್ತೇಜನ ನೀಡಲು ಇದು ಉತ್ತಮ ವೇದಿಕೆಯಾಗಿದೆ. ಕನ್ನಡ ಭಾಷೆಯನ್ನು ಯಾರು ಮರೆಯಬಾರದು, ಅನ್ಯ ಭಾಷಿಕರಿಗೂ ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸುವಂತಾಗಬೇಕು ಎಂದರು. ಕಸಾಪ ತಾ.ಅಧ್ಯಕ್ಷ ಬಸವರಾಜಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಕ್ಕಳ ಸಾಹಿತಿ ನಾಗರಾಜಶೆಟ್ಟಿ, ತಹಸೀಲ್ದಾರ್ ಪವನ್‌ಕುಮಾರ್, ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ, ತಾ.ಪಂ ಇಓ ಸುದರ್ಶನ್, ಬಿಇಓ ಚಂದ್ರಯ್ಯ, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ವಿಚಾರಗೋಷ್ಠಿ ಅಧ್ಯಕ್ಷೆ ಮನುಜ, ಕವಿಗೋಷ್ಠಿ ಅಧ್ಯಕ್ಷೆ ಕೆ.ವರ್ಷ ಸೇರಿದಂತೆ ಕಸಾಪ ಪದಾಧಿಕಾರಿಗಳು, ವಿವಿಧ ಶಾಲೆಗಳ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ, ಸ್ವಾಗತ ಸೇರಿದಂತೆ ಪೂರ್ಣ ಜವಾಬ್ದಾರಿಯನ್ನು ಮಕ್ಕಳೇ ನಿರ್ವಹಿಸಿದರು. ನಂತರ ವಿವಿಧ ಶಾಲಾ ಮಕ್ಕಳಿಂದ ವಿಚಾರಗೋಷ್ಠಿ, ಮಕ್ಕಳ ಕವಿ ಗೋಷ್ಠಿ ನಡೆಯಿತು. ಮಕ್ಕಳು ಶಿವಶರಣ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಕಾರ್ಯಕ್ರಮಕ್ಕೂ ಮೊದಲು ಸಿಂಗ್ರಿನಂಜಪ್ಪ ವೃತ್ತದಿಂದ ವೇದಿಕೆಯವರೆಗೂ ಮಕ್ಕಳ ಸಾಂಸ್ಕೃತಿಕ ತಂಡಗಳ ಕಲಾ ಪ್ರದರ್ಶನದೊಂದಿಗೆ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.