ಗೆಳೆಯರ ಗುಂಡು ಪಾರ್ಟಿಯಲ್ಲಿ ಸಿಡಿಯಿತು ಗುಂಡು

| Published : Sep 27 2024, 01:31 AM IST

ಸಾರಾಂಶ

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಯುವಕ ಶ್ರೀಕಾಂತ್ ಪೂಜಾರಿ ಮೇಲೆ ಗುಂಡಿನ ದಾಳಿ, ಶ್ರೀಕಾಂತ್‌ನ ಎಡಗೈಗೆ ತಾಗಿದ ಒಂದು ಗುಂಡು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಆಳಂದ ತಾಲೂಕಿನಿಂದ ಗುಂಡಿನ ಸದ್ದು ಹಾಗೇ ಮುಂದುವರಿದಿದೆ. ಕಳೆದ 2 ವಾರಗಳ ಹಿಂದಷ್ಟೇ ಪಡಸಾವಳಗಿಯ ರಸ್ತೆಯಲ್ಲಿ ಗುಂಡಿನ ಚಕಮಕಿ ನಡೆದು ಕೊಲೆಯಾಗಿ ಸುದ್ದಿಯಾಗಿತ್ತು. ನಂತರದಲ್ಲಿ ಗುಂಡಿನ ದಾಳಿ ಮಾಡಿದ್ದ ಆರೋಪಿ ಸೆರೆಗೆ ಹೋಗಿದ್ದ ಪೊಲೀಸರು ಅಲ್ಲಿಯೂ ಆರೋಪಿ ಮೇಲೆ ಗುಂಡು ಹಾರಿಸಿದ್ದರು.

ಇದೀಗ ಅದೇ ಆಳಂದದ ಕಡಗಂಚಿಯಿಂದ ಗೆಳೆಯರ ಗುಂಡು ಪಾರ್ಟಿಯಲ್ಲಿ ಹಾರಿದ ಗುಂಡು ಭಾರಿ ಸದ್ದು ಮಾಡಿ ಜಿಲ್ಲೆಯ ಗಮನ ಸೆಳೆದಿದೆ.

ಗುಂಡುಪಾರ್ಟಿಯಲ್ಲಿದ್ದ ಗೆಳೆಯರಲ್ಲೇ ಗುಂಡಿನ ದಾಳಿ!:

ಗೆಳೆಯರೆಲ್ಲರೂ ಸೇರಿಕೊಂಡು ಗುಂಡು ಪಾರ್ಟಿ ಮಾಡುವ ವೇಳೆ ಸ್ನೇಹಿತನೊಬ್ಬನ ಮೇಲೆ ಗುಂಡಿನ ದಾಳಿ ಮಾಡಿರುವ ಘಟನೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ನಡೆದಿದೆ. ಕಡಗಂಚಿ ಗ್ರಾಮದ ಶ್ರೀಕಾಂತ ಪೂಜಾರಿ (28) ಎಂಬ ಯುವಕನ ಎಡಗೈಗೆ ಗುಂಡು ತಾಗಿದ್ದು, ಕಲಬುರಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಂತಪ್ಪ ದರೋಡೆ ಸೇರಿದಂತೆ ಹಲವರು ಪ್ರಕರಣಗಳ ಆರೋಪಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಕೋಪಕ್ಕೆ ತಿರುಗಿದ ಜಗಳ- ಗುಂಡಿನ ದಾಳಿ

ಬುಧವಾರ ತಡರಾತ್ರಿ ಕಡಗಂಚಿ ಗ್ರಾಮದ ಮನೆಯೊಂದರಲ್ಲಿ ಶ್ರೀಕಾಂತ್, ಮಾಳಪ್ಪ ಸೇರಿದಂತೆ ಆರೇಳು ಮಂದಿ ಸ್ನೇಹಿತರು ಸೇರಿಕೊಂಡು ಪಾರ್ಟಿ ಮಾಡುತ್ತಿರುವಾಗ ಜಗಳ ಉಂಟಾಗಿದೆ. ಬಳಿಕ ಈ ಜಗಳ ವಿಕೋಪಕ್ಕೆ ತಿರುಗಿ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಗುಂಡಿನ ದಾಳಿಯಲ್ಲಿ ಶ್ರೀಕಾಂತನ ಎಡಗೈಗೆ ಗಾಯಗಳಾಗಿವೆ.

ಪಿಸ್ತೂಲು ಸಹಿತ ಆರೋಪಿಗಳಾದ ಕಾಂತಪ್ಪ ಮತ್ತು ಮಾಳಪ್ಪ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆ ಕುರಿತು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 4 ದಿನಗಳ ಹಿಂದಷ್ಟೇ ಇದೇ ಆಳಂದದಲ್ಲಿ ಸಂಭವಿಸಿದ್ದ ಪಡಸಾವಳಗಿ ಗುಂಡಿನ ಕಾಳಗ, ಕೊಲೆ ವಿಚಾರದಲ್ಲಿ ಆರೋಪಿಗೆ ಬಂಧಿಸಲು ಹೋಗಿದ್ದ ನಿಂಬಗ್ರಾ ಪೊಲೀಸರು ಕಾಲಿಗೆ ಗುಂಡು ಹೊಡೆದು ಆರೋಪಿ ವಶಕ್ಕೆ ಪಡೆದು ಸುದ್ದಿಯಾಗಿತ್ತು. ಇದೀಗ ಅದೇ ಆಳಂದದಿಂದ ಗುಂಡಿನ ದಾಳಿಯ ಸದ್ದು ಹಾಗೇ ಮುಂದುವರಿದಿರೋದು ಆತಂಕ ಮೂಡಿಸಿದೆ.