ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ತೋಟಗಾರಿಕೆ ಕಚೇರಿ ಆವರಣದಲ್ಲಿ ಶುಕ್ರವಾರದಿಂದ 5 ದಿನಗಳ ಕಾಲ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ಹಾಗೂ ಜವಳಿ ಇಲಾಖೆ ವತಿಯಿಂದ ಆಯೋಜಿಸಿರುವ ಮಧುರ ವಸ್ತ್ರೋತ್ಸವಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.ನಗರದ ತೋಟಗಾರಿಕೆ ಉದ್ಯಾನವನದಲ್ಲಿ ಆಕರ್ಷಕ ಬಣ್ಣದ ವಿವಿಧ ಜಾತಿಯ ಹೂಗಳಿಂದ ಹಲವು ಕಲಾಕೃತಿಗಳು ಅರಳಿ ನಿಂತಿದ್ದು, ಜನರನ್ನು ಕೈ ಬೀಸಿ ಕರೆಯುತ್ತಿವೆ. ವಿವಿಧ ಹೂ, ಅಲಂಕಾರಿಕ ಕುಂಡಗಳ ಜೋಡಣೆ, ವಿವಿಧ ತರಕಾರಿ ಬೆಳೆಗಳು, ಪೌಷ್ಟಿಕ ಕೈತೋಟ ಮಾದರಿ, ತರಕಾರಿ ಕೆತ್ತನೆ ಪ್ರದರ್ಶನ ಮತ್ತು ಜಿಲ್ಲೆಯ ತೋಟಗಾರಿಕೆ ಬೆಳೆಗಳ ವೈವಿಧ್ಯತೆಯ ಮಾದರಿಗಳ ಪ್ರದರ್ಶನ ಹಾಗೂ ರೈತರಿಂದ ಗ್ರಾಹಕರಿಗೆ ನೇರ ಮಾರಾಟ, ವಿವಿಧ ಅಭಿವೃದ್ಧಿ ಇಲಾಖೆಗಳ ಕಾರ್ಯಕ್ರಮಗಳ ಸಮಗ್ರ ಮಾಹಿತಿ ಇಲ್ಲಿ ದೊರೆಯಲಿದೆ.
ರಾತ್ರಿ 10ರವರೆಗೆ ವೀಕ್ಷಣೆಗೆ ಅವಕಾಶ:ಪ್ರತಿ ದಿನ ಬೆಳಗ್ಗೆ 10ರಿಂದ ರಾತ್ರಿ 10ಗಂಟೆಯವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಸಂಜೆ 6ರಿಂದ ರಾತ್ರಿ 10ಗಂಟೆವರೆಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಯಸ್ಕರಿಗೆ ಟಿಕೆಟ್ ದರ 30, 6- 12 ವರ್ಷದ ಮಕ್ಕಳಿಗೆ 20 ಹಾಗೂ ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳ ಗುಂಪುಗಳಿಗೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತವಾಗಿದೆ.
ಪ್ರಮುಖ ಆಕರ್ಷಣೆ:ಫಲಪುಷ್ಪ ಪ್ರದರ್ಶನದಲ್ಲಿ 9 ಲಕ್ಷ ವಿವಿಧ ಬಣ್ಣದ ಸೇವಂತಿಗೆ ಮತ್ತು ವಿವಿಧ ಬಣ್ಣದ ಗುಲಾಬಿ ಹೂವುಗಳನ್ನು ಬಳಸಿ ಪ್ರಸಿದ್ಧ ದೇವಾಲಯ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನಿರ್ಮಿಸಲಾಗಿದೆ. ಯುವ ಜನತೆಯನ್ನು ಸೆಳೆಯಲು ಹತ್ತು ವಿವಿಧ ಕಡೆಗಳಲ್ಲಿ ಸೆಲ್ಫಿ ಪಾಯಿಂಟ್, ಹೂವಿನ ಆಕೃತಿಯ ಕ್ಷಯ ರೋಗ ಕುರಿತು ಜಾಗೃತಿ, ನರೇಗಾ ಯೋಜನೆಯ ಮಾಹಿತಿಯನ್ನೊಳಗೊಂಡ ಸ್ತಬ್ಧ ಚಿತ್ರ, ವಿವಿಧ ಆಕರ್ಷಕ ಬಗೆಯ ಅಡಿನಿಯಂ ಗಿಡಗಳ ಪ್ರದರ್ಶಿಕೆ, ಬೋನ್ಸಾಯ್ ಗಿಡಗಳ ಪ್ರದರ್ಶಿಕೆ, ವಿವಿಧ ತರಕಾರಿ ಹಣ್ಣುಗಳನ್ನು ಬಳಸಿ ಕಲಾಕೃತಿಗಳ ಕೆತ್ತನೆ ಹಾಗೂ ಇಕೆಬನಾ ಜೋಡಣೆ ಎಲ್ಲರನ್ನೂ ಆಕರ್ಷಿಸಲಿವೆ.
35 ಸಾವಿರಕ್ಕೂ ಹೆಚ್ಚು 40 ಬಗೆಯ ವಿವಿಧ ಜಾತಿಯ ಹೂವುಗಳ ಅಲಂಕಾರಿಕ ಕುಂಡಗಳ ಜೋಡಣೆ, 1.50 ಲಕ್ಷ ವಿವಿಧ ಜಾತಿಯ ಅಲಂಕಾರಿಕ ಗಿಡಗಳಾದ ಪೆಟೊನಿಯಾ, ಸಾಲ್ವಿಯಾ, ಅಂಟಿರೈನಂ, ಸೆಲೋಶಿಯಾ, ಮಾರಿಗೋಲ್ಡ್, ಜೀನಿಯಾ, ಸೇವಂತಿಗೆ, ಪಾಯ್ನಿಸೆಟಿಯಾಗಳು ಗಮನ ಸೆಳೆಯುತ್ತಿವೆ.ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆ, ಕೈಗಾರಿಕೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ವತಿಯಿಂದ ಕಲಾಕೃತಿಗಳನ್ನು ಹಾಗೂ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ್, ಸಿಇಒ ಶೇಖ್ ತನ್ವೀರ್ ಅಸಿಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ನಾಗೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಕೈಮಗ್ಗ ಇಲಾಖೆ ಉಪನಿರ್ದೇಶಕ ರಂಗಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.ಹೂವುಗಳಿಂದ ಅರಳಿದ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಲೋಗೋ:
ಮಂಡ್ಯ: ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಆರೋಗ್ಯ ಅಭಿಯಾನಕ್ಕೆ ಆದ್ಯತೆ ನೀಡಲಾಗಿದೆ.ಜಿಲ್ಲೆಯಲ್ಲಿ ಜನರಿಗೆ ಕ್ಷಯ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಆರೋಗ್ಯ ಇಲಾಖೆ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಲೋಗೋವನ್ನು ಹೂವಿನಲ್ಲಿ ಅರಳಿಸಿದೆ. ಪುಷ್ಪಗಳಿಂದ ಅಲಂಕೃತ ಗೊಂಡಿರುವ ಕಾರ್ಯಕ್ರಮದ ಲೋಗೋ ವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ದಿ.ನಟ ಪುನೀತ್ ರಾಜ್ ಕುಮಾರ್ ಭಾವಚಿತ್ರದೊಂದಿಗೆ ಕ್ಷಯರೋಗವನ್ನು ಕೊನೆಗಾಣಿಸಬಹುದು ಎಂಬ ಸಂದೇಶವೂ ಗಮನ ಸೆಳೆಯುತ್ತಿದೆ.
ಶಾಸಕ ಪಿ.ರವಿಕುಮಾರ್, ಡೀಸಿ ಡಾ.ಕುಮಾರ, ಜಿಪಂ ಸಿಇಒರಿಶೇಕ್ ತನ್ವೀರ್ ಆಸಿಫ್ , ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ , ಡಿಎಚ್ ಒ ಡಾ.ಕೆ.ಮೋಹನ್ , ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ.ಆಶಾಲತಾ ರವರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.