ನಿರ್ಮಿತಿ ಕೇಂದ್ರದಲ್ಲಿ ನಕಲಿ ಎಂಜಿನಿಯರ್‌ಗಳ ದರ್ಬಾರ್..!

| Published : Mar 13 2025, 12:50 AM IST

ನಿರ್ಮಿತಿ ಕೇಂದ್ರದಲ್ಲಿ ನಕಲಿ ಎಂಜಿನಿಯರ್‌ಗಳ ದರ್ಬಾರ್..!
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ನೀಡಿರುವ ದೂರಿನನ್ವಯ ತನಿಖೆಗೆ ಸೂಚಿಸಿರುವ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿಲ್ಲಾ ಯೋಜನಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಪ್ರತಾಪ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿರ್ಮಿತಿ ಕೇಂದ್ರದಲ್ಲಿ ನಕಲಿ ಎಂಜಿನಿಯರ್‌ಗಳ ದರ್ಬಾರ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೂವರ ವಿರುದ್ಧ ತನಿಖೆ ನಡೆಸುವಂತೆ ಮೂವರು ಅಧಿಕಾರಿಗಳನ್ನು ನೇಮಕ ಮಾಡಿ ೧೫ ದಿನಗಳೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸೂಚಿಸಿದ್ದಾರೆ.

ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್‌ಗಳಾದ ಬಿ.ಎಲ್.ವೇಣುಗೋಪಾಲ್, ಕೆ.ಪ್ರಶಾಂತ್ ಮತ್ತು ಎಂಜಿನಿಯರ್ ಶ್ರೀಧರ್ ಅವರು ಹುದ್ದೆಗೆ ಪೂರಕವಾದ ವಿದ್ಯಾಭ್ಯಾಸ ಹೊಂದಿಲ್ಲದಿರುವುದಿಲ್ಲವೆಂಬ ಆರೋಪ ಕೇಳಿಬಂದಿರುವುದರಿಂದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ದಾಖಲೆ ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ನೀಡಿರುವ ದೂರಿನನ್ವಯ ತನಿಖೆಗೆ ಸೂಚಿಸಿರುವ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿಲ್ಲಾ ಯೋಜನಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಪ್ರತಾಪ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಿಸಿದ್ದಾರೆ.

ಈಗಾಗಲೇ ನಕಲಿ ಎಂಟೆಕ್ ಪದವಿ ಪ್ರಮಾಣಪತ್ರ ಸಲ್ಲಿಸಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ನೇಮಕಗೊಂಡಿದ್ದ ಆರೋಪದಡಿ ಬೆಂಗಳೂರು ಜಿಲ್ಲೆ ನೆಲಮಂಗಲ ತಾಲೂಕು ಅರಿಶಿನಕುಂಟೆ ಆದರ್ಶ ನಗರ ನಿವಾಸಿ ವಿ.ವಿನೋದ್ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕಳೆದೊಂದು ತಿಂಗಳ ಹಿಂದೆ ಎಫ್‌ಐಆರ್ ದಾಖಲಾಗಿತ್ತು. ಇದೇ ಮಾದರಿಯ ನಕಲಿ ಪ್ರಮಾಣಪತ್ರ ಸಲ್ಲಿಸಿ ಮಂಡ್ಯ ನಿರ್ಮಿತಿ ಕೇಂದ್ರದಲ್ಲಿ ಐವರು ಕಾರ್ಯನಿರ್ವಹಿಸುತ್ತಿರುವ ಆರೋಪವೂ ಕೇಳಿಬಂದಿತ್ತು.

ಮಂಡ್ಯ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ವ್ಯವಸ್ಥಾಪಕರಾಗಿದ್ದ ವಿ.ವಿನೋದ್ ಎಂಬಾತ ೧೩.೧೦.೨೦೨೨ರಂದು ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ಜೊತೆ ಎಂಟೆಕ್ ಇನ್ ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್‌ ಮಾಡಿರುವುದಾಗಿ ೨೦೧೬ರ ನಕಲಿ ಸ್ನಾತಕೋತ್ತರ ಪದವಿ ದಾಖಲೆ ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ೮.೯.೨೦೨೩ರಂದು ನಿರ್ಮಿತಿಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ವಿ.ವಿನೋದ್ ಅವರನ್ನು ಆಯ್ಕೆ ಮಾಡಲಾಗಿತ್ತು. ನಂತರದಲ್ಲಿ ಬೆಂಗಳೂರು ಜಯನಗರದ ರವಿಕುಮಾರ್ ಎಂಬ ಗುತ್ತಿಗೆದಾರ ವಿ.ವಿನೋದ್ ಬಿಇ ಸಿವಿಲ್ ಎಂಜಿನಿಯರಿಂಗ್ ಮಾತ್ರ ಮಾಡಿದ್ದು, ಎಂಟೆಕ್ ಪದವಿ ಪಡೆದಿಲ್ಲವೆಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿಗಳು ಪ್ರಮಾಣಪತ್ರದ ನೈಜತೆಯ ಪರಿಶೀಲನೆಗೆ ಮುಕ್ತ ವಿವಿ ಪರೀಕ್ಷಾಂಗ ಉಪ ಕುಲಸಚಿವರಿಗೆ ಪತ್ರ ಬರೆದಿದ್ದರು.

ನಂತರ ವಿ.ವಿನೋದ್ ಅವರು ಮುಕ್ತ ವಿಶ್ವವಿದ್ಯಾಲಯದಿಂದ ಎಂಟೆಕ್ ಇನ್ ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆದಿರುವುದಿಲ್ಲವೆಂದು ಪರೀಕ್ಷಾಂಗ ಉಪ ಕುಲಸಚಿವರು ಸ್ಪಷ್ಟಪಡಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ವಿನೋದ್ ವಿರುದ್ಧ ಒಂದು ತಿಂಗಳ ಹಿಂದೆ ಎಫ್‌ಐಆರ್ ದಾಖಲಾಗಿತ್ತು.

ಈ ಪ್ರಕರಣದ ನಂತರ ಕಳೆದ ಎರಡು ವರ್ಷಗಳಿಂದ ಮಂಡ್ಯದ ನಿರ್ಮಿತಿ ಕೇಂದ್ರದಲ್ಲಿ ಸೈಟ್ ಎಂಜಿನಿಯರ್ ಆಗಿ ಕರ್ತವ್ಯನಿರ್ವಹಿಸುತ್ತಿರುವ ಬಿ.ಎಲ್.ವೇಣುಗೋಪಾಲ್ ಬಿ-ಟೆಕ್ ಸಿವಿಲ್ ಎಂಜಿನಿಯರಿಂಗ್ ಅಂಕಪಟ್ಟಿ ಮತ್ತು ದಾಖಲೆಗಳನ್ನು ಜಾರ್ಖಂಡ್‌ನ ದಕ್ಷ ಯೂನಿವರ್ಸಿಟಿಯಿಂದ ಪಡೆದಿರುವ ಬಗ್ಗೆ ಕೆ.ಆರ್.ರವೀಂದ್ರ ದೂರು ದಾಖಲಿಸಿದ್ದರು.

ವಾಸ್ತವದಲ್ಲಿ ದಕ್ಷ ಯೂನಿವರ್ಸಿಟಿ ಎಂಬುದೇ ಜಾರ್ಖಂಡ್‌ನಲ್ಲಿ ಇಲ್ಲ. ಆದರೂ ಬಿ-ಟೆಕ್ ಸಿವಿಲ್ ಎಂಜಿನಿಯರಿಂಗ್ ನಕಲಿ ಪದವಿ ಅಂಕಪಟ್ಟಿ ಮತ್ತು ದಾಖಲೆ ಸಲ್ಲಿಸಿರುವ ಬಗ್ಗೆ ತನಿಖೆಯಿಂದ ದೃಢಪಟ್ಟಿದ್ದರೂ ಇದುವರೆಗೂ ಇವರನ್ನು ಕರ್ತವ್ಯದಿಂದ ತೆಗೆದುಹಾಕದೆ ಕ್ರಿಮಿನಲ್ ಪ್ರಕರಣ ದಾಖಲಿಸದೆ ಅಧಿಕಾರಿಗಳು ಮೌನ ವಹಿಸಿರುವುದಾಗಿ ಆರೋಪಿಸಿದ್ದರು.

ಇದಲ್ಲದೇ, ನಿರ್ಮಿತಿ ಕೇಂದ್ರದಲ್ಲಿ ಸೈಟ್ ಎಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಪ್ರಶಾಂತ್ ಮತ್ತು ಶ್ರೀಧರ್ ಅವರು ಡಿಪ್ಲೋಮಾ ಪದವಿ ಪಡೆದಿಲ್ಲದ್ದಿರೂ ನಕಲಿ ಪ್ರಮಾಣಪತ್ರಗಳನ್ನು ನೀಡಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿರುವುದರಿಂದ ಬಿ.ಎಸ್.ವೇಣುಗೋಪಾಲ್, ಕೆ.ಪ್ರಶಾಂತ್, ಶ್ರೀಧರ್ ವಿರುದ್ಧ ಜಿಲ್ಲಾಧಿಕಾರಿ ಡಾ.ಕುಮಾರ ತನಿಖೆಗೆ ಆದೇಶಿಸಿದ್ದಾರೆ.