ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಹಿಂದುಗಳ ಹೊಸ ವರ್ಷ ಯುಗಾದಿ. ಅಮಾವಾಸ್ಯೆಯ ದಿನ ದೇವರುಗಳ ಪಲ್ಲಕ್ಕಿಗಳನ್ನು ಕೃಷ್ಣೆಯಲ್ಲಿ ಸ್ನಾನ ಮಾಡಿಸುವುದು ನೂರಾರು ವರ್ಷಗಳ ಸಂಪ್ರದಾಯ.ಸೋಮವಾರ ಬೆಳಗ್ಗೆಯಿಂದಲೇ ಅವಳಿ ಜಿಲ್ಲೆಯ ವಿವಿಧೆಡೆಯಿಂದ ನೂರಾರು ದೇವ, ದೇವತೆಗಳ ಪಲ್ಲಕ್ಕಿಗಳು ಆಲಮಟ್ಟಿಯತ್ತ ಬಂದಿದ್ದವು. ಕೆಲವರು ಕಾಲ್ನಡಿಗೆ ಮೂಲಕ ಪಲ್ಲಕ್ಕಿಯನ್ನು ಹೊತ್ತು ತಂದರೆ, ಇನ್ನೂ ಕೆಲವರು ಟ್ರ್ಯಾಕ್ಟರ್, ಎತ್ತಿನ ಬಂಡಿ, ಇತರ ವಾಹನಗಳಲ್ಲಿ ತರುತ್ತಿರುವುದು ಕಂಡು ಬಂತು.
ಆಲಮಟ್ಟಿಯ ಕೃಷ್ಣಾ ತೀರದಲ್ಲಿ ನೂರಾರು ಪಲ್ಲಕ್ಕಿಗಳ ಸಮಾಗಮವಾಗಿತ್ತು. ನದಿಯ ಎರಡೂ ದಂಡೆಯ ಮೇಲೆ, ಛತ್ರಿ, ಚಾಮರ, ಪಲ್ಲಕ್ಕಿಗಳ ಸಂಭ್ರಮ, ಕಳಸದ ಮೆರವಣಿಗೆ, ಡೊಳ್ಳು ಕುಣಿತ, ಶಂಖನಾದ, ಹಲಗೆ ವಾದನ ಮಾರ್ದನಿಸಿ, ಭಕ್ತಿಯ ಭಾವುಕತೆಯಲ್ಲಿ ತೇಲಿಸಿತುವಿವಿಧ ಕಡೆಗಳಿಂದ ಬಂದ ಭಕ್ತರು ನದಿಯಲ್ಲಿ ಮಿಂದು, ಬಳಿಕ ಗಂಗಾ ಪೂಜೆ ನೆರವೇರಿಸಿದರು. ಮಡಿಯಲ್ಲಿಯೇ ಪಲ್ಲಕ್ಕಿ, ದೇವರ ಪರಿಕರಗಳು, ಉತ್ಸವ ಮೂರ್ತಿ, ಮುಖವಾಡಗಳು, ಆಭರಣಗಳನ್ನು ಶುಚಿಗೊಳಿಸಿ, ಬಳಿಕ ಅಲಂಕರಿಸಿ ಪೂಜಿಸಿದರು. ಕೆಲವರು ಕಂಬಳಿ ಹಾಸಿ ಪಲ್ಲಕ್ಕಿಯನ್ನಿಟ್ಟು ಪೂಜೆ ಸಲ್ಲಿಸಿದರು.
ದೇವರ ಪಲ್ಲಕ್ಕಿಗಳು: ಹನುಮಂತ, ಕರಿದೇವರು, ಪರಮಾನಂದ, ಅಂಬಾಭವಾನಿ, ರೇಣಕಾ ದೇವಿ, ಲಕ್ಷ್ಮಿ, ಶಿವ, ಪಾರ್ವತಿ, ದುರ್ಗವ್ವ, ದ್ಯಾಮವ್ವ, ಶೆಟಗೆವ್ವಾ, ಅಮೋಘ ಸಿದ್ಧ, ಬನಶಂಕರಿ, ಚಂದ್ರಮ್ಮಾ, ಬಸವೇಶ್ವರ, ಮರಗಮ್ಮ, ಮಾಳಿಂಗರಾಯ, ಬೀರಲಿಂಗೇಶ್ವರ, ಮಡಿವಾಳಪ್ಪ, ಹುಚ್ಚಯ್ಯಸ್ವಾಮಿ, ವೆಂಕಟಪ್ಪ, ವೀರೇಶ್ವರ, ಮಲ್ಲಯ್ಯ.. ಹೀಗೆ ಅನೇಕ ದೇವರುಗಳನ್ನು ಆಲಮಟ್ಟಿಗೆ ಕರೆತಂದು ಸ್ನಾನ ಮಾಡಿಸಿದರು.ನದಿ ತೀರದಲ್ಲಿಯೇ ಕಲ್ಲುಗಳನ್ನಿಟ್ಟು ಒಲೆ ಹೂಡಿ ಹೋಳಿಗೆ ಸೇರಿದಂತೆ ಸಿಹಿ ಪದಾರ್ಥ ತಯಾರಿಸಿ ನೇವೇದ್ಯ ಅರ್ಪಿಸಿ, ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಪ್ರಖರ ಬಿಸಿಲಿನ ಮಧ್ಯೆಯೂ ಪಲ್ಲಕ್ಕಿಗಳ ದರ್ಶನ ರಾರಾಜಿಸುತ್ತಿತ್ತು. ನಂತರ ಬಹುತೇಕ ಪಲ್ಲಕ್ಕಿಗಳನ್ನು ಕೃಷ್ಣಾ ತೀರದ ಚಂದ್ರಮ್ಮಾ ದೇವಸ್ಥಾನದ ಆವರಣದೊಳಗೆ ಇಟ್ಟು ಪೂಜೆ ಸಲ್ಲಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))