ಹೆಣ್ಣು ಮಗು ಸಿಂದೂರಿಗೆ ಗೌರಿ ಹಬ್ಬದಂದು ಬಾಗಿನ

| Published : Aug 31 2025, 01:09 AM IST

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಗೌರಿ ಹಬ್ಬದ ಅಂಗವಾಗಿ ಸಿಂದೂರಿ ಎಂಬ ಮಗುವಿಗೆ ಬಾಗಿನ ನೀಡಿ ಶುಭಾಶಯ ಕೋರಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಭಾರತ ಸಿಂದೂರ ಹೆಸರಿನಲ್ಲಿ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ನಡೆಸಿದ ಯುದ್ಧದ ದಿನದಂದು ಜನಿಸಿದ್ದ ಹೆಣ್ಣು ಮಗುವಿಗೆ ಸಿಂದೂರಿ ಎಂದು ನಾಮಕರಣ ಮಾಡಿದ್ದ ಹಿನ್ನೆಲೆಯಲ್ಲಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಗೌರಿ ಹಬ್ಬದ ಅಂಗವಾಗಿ ಬಾಗಿನ ನೀಡಿದರು.

ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಹರ್ಷಿತ ಹಾಗೂ ಸೋಮಶೇಖರ್ ದಂಪತಿಗೆ ಆಪರೇಷನ್ ಸಿಂದೂರ ನಡೆಸಿದ ದಿನ ಹೆಣ್ಣು ಮಗು ಜನಿಸಿತ್ತು. ದೇಶದ ಗೌರವ ಹಾಗೂ ನೆನಪಿನಾರ್ಥ ಮಗುವಿಗೆ ಮಂಡ್ಯ ರಕ್ಷಣಾ ವೇದಿಕೆ ಸಂಘಟನೆ ನೇತೃತ್ವದಲ್ಲಿ ಸಿಂದೂರಿ ಎಂದು ನಾಮಕರಣ ಮಾಡಿದ್ದರು.

ಇದೀಗ ಆ ಹೆಣ್ಣು ಮಗುವಿಗೆ ಗೌರಿ ಗಣೇಶನ ಹಬ್ಬದಂದು ವೇದಿಕೆ ಅಧ್ಯಕ್ಷ ಶಂಕರ್ ಬಾಬು ಹಾಗೂ ಕಾರ್ಯಕರ್ತರು ಮಗುವಿನ ಮನೆಗೆ ತೆರಳಿ ಹೊಸ ಬಟ್ಟೆ, ಬಳೆ, ಹೂ, ಹಣ್ಣು ಸೇರಿದಂತೆ ಇತರ ವಸ್ತುಗಳ ವಿಶೇಷ ಉಡುಗರೆಯೊಂದಿಗೆ ಬಾಗಿನ ನೀಡಿ ಹಬ್ಬದ ಶುಭಾಶಯ ಕೋರಿದರು.

ಶಂಕರ್ ಬಾಬು, ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಚ್ ಜಗದೀಶ್, ಹಿಂದೂ ಜಾಗರಣ ವೇದಿಕೆ ಚಂದನ್, ಸಾಗರ್, ವೀಣಾಬಾಯಿ, ರಂಗಪ್ಪ ಸೇರಿ ಇತರು ಇದ್ದರು.

ನಾಳೆ ಬಸರಾಳು ಹೋಬಳಿ ಮಟ್ಟದ ಕ್ರೀಡಾಕೂಟ

ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉತ್ತರ ವಲಯ, ಬಿಳಿದೇಗಲು ಶ್ರೀಭೈರವೇಶ್ವರ ಗ್ರಾಮಾಂತರ ಪ್ರೌಢಶಾಲೆ ಸಹಯೋಗದಲ್ಲಿ ಸೆ.1ರಂದು ತಾಲೂಕಿನ ವಿ.ಸಿ.ಫಾರ್ಮ್ ಕೃಷಿ ಮಹಾ ವಿದ್ಯಾಲಯದ ಆವರಣದಲ್ಲಿ ಬಸರಾಳು ಹೋಬಳಿ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಕ್ರೀಡಾಕೂಟ ಆಯೋಜಿಸಲಾಗಿದೆ. ಅಂದು ಬೆಳಗ್ಗೆ ಶಾಸಕ ರವಿಕುಮಾರ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ.ಶೇ.6ರಷ್ಟು ಒಳ ಮೀಸಲಾತಿ ಹೋರಾಟದ ಫಲ: ಎಂ.ಎನ್.ಜಯರಾಜು

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಳೆದ 35 ವರ್ಷಗಳಿಂದ ಹೋರಾಟದ ಫಲವಾಗಿ ಬಲಗೈ ಸಮುದಾಯಕ್ಕೆ ಸೇರಿದ ಹೊಲಯ ಸಂಬಂಧಿಸಿದ ಜಾತಿಗಳಿಗೆ ಶೇ.6ರಷ್ಟು ಒಳ ಮೀಸಲಾತಿ ಸಿಕ್ಕಿದೆ ಎಂದು ಹೊಲಯ ಸಂಘಟನೆಗಳ ಒಕ್ಕೂಟದ ಎಂ.ಎನ್.ಜಯರಾಜು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾತನಾಡಿದ ಅವರು, ದಲಿತ ಸಮುದಾಯದ ಒಳ ಮೀಸಲಾತಿ ಹೋರಾಟದಲ್ಲಿ ಬಲಗೈ ಸಮುದಾಯಕ್ಕೆ ಸೇರಿದ ಹೊಲಯ ಸಂಬಂಧಿಸಿದ ಜಾತಿಗಳಿಗೆ ಶೇ.6ರಷ್ಟು ಮೀಸಲಾತಿ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರ ಸಮಾಧಾನ ತಂದಿದೆ. ಶೇ.7ರಷ್ಟು ಸಿಗಬೇಕಿತ್ತು. ಆದರೆ, ಬಲಗೈ ಸಮುದಾಯದ ಹೋರಾಟಕ್ಕೆ ನ್ಯಾಯ ದೊರೆತಿದೆ. ಹೋರಾಟದಲ್ಲಿ ಎಲ್ಲ ಮುಖಂಡರನ್ನು ಅಭಿನಂದಿಸಲಾಗುವುದು ಎಂದರು.

ಒಳ ಮೀಸಲಾತಿಗಾಗಿ ನಿರಂತರವಾಗಿ ನಡೆದ ಹೋರಾಟದಲ್ಲಿ ತಪ್ಪು ಸಮೀಕ್ಷೆಯಿಂದಾಗಿ ಬಲಗೈ ಸಮುದಾಯದ ಜನರ ಸಂಖ್ಯೆ ಕಡಿಮೆ ತೋರಿಸಿ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗಿತ್ತು. ಹೀಗಾಗಿ ಸಮುದಾಯದ ಸ್ವಾಮೀಜಿ ಜ್ಞಾನ ಪ್ರಕಾಶ್ ಸ್ವಾಮೀಜಿ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಹೋರಾಟ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದರು.

ಸದ್ಯ ಶೇ.6ರಷ್ಟು ಮೀಸಲಾತಿ ಸಿಕ್ಕಿದ್ದು, ಹೋರಾಟ ನಡೆಸಿದ ಸ್ವಾಮೀಜಿಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಮಳವಳ್ಳಿ ತಾಲೂಕು ಹೊಲಯ ಸಂಘಟನೆಗಳ ಒಕ್ಕೂಟ ಅಭಾರಿಯಾಗಿರುತ್ತದೆ. ಈ ಮೀಸಲಾತಿ ಹಂಚಿಕೆಯಲ್ಲಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಎದ್ದಿದೆ. ಈ ಬಗ್ಗೆ ಹೋರಾಟ ಸಹ ಆರಂಭವಾಗಿದೆ. ಈ ಹೋರಾಟಕ್ಕೆ ನಮ್ಮ ಒಕ್ಕೂಟ ಸಂಪೂರ್ಣ ಬೆಂಬಲ ನೀಡಿ ಅವರ ಪರ ಹೋರಾಟ ನಡೆಸಲಿದೆ ಎಂದರು.

ಈ ವೇಳೆ ಪುರಸಭಾ ಸದಸ್ಯ ಆರ್.ಎನ್.ಸಿದ್ದರಾಜು, ಜೆಡಿಎಸ್ ಕಾಂತರಾಜು, ಕಸಾಪದ ಚೇತನ್ ಕುಮಾರ್, ಮುಖಂಡರಾದ ಪ್ರಸಾದ್, ಬಲರಾಮ್, ಅನಿಲ್, ಚಿಕ್ಕಣ್ಣ, ರಾಮ್, ಶಂಕರ್ ಹಾಜರಿದ್ದರು.