ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಎರಡನೇ ಅವಧಿಗೆ ತಾವು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡರೆ ಜಿಲ್ಲೆಯ ಪ್ರತಿ ತಾಲೂಕಿಗೆ ಒಂದು ವೀರಶೈವ-ಲಿಂಗಾಯತ ಬಾಲಕಿಯರ ಹಾಸ್ಟೆಲ್ ನಿರ್ಮಿಸುವ ಗುರಿ ಇಟ್ಟುಕೊಂಡಿರುವುದಾಗಿ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ್ ಮೋದಿ ತಿಳಿಸಿದರು.ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಕಲಬುರಗಿ ನಗರದ ಧರಿಯಾಪುರ-ಕೋಟನೂರ್ ಬಡಾವಣೆಯಲ್ಲಿ 108 ವಿದ್ಯಾರ್ಥಿನಿಯರು ಏಕಕಾಲಕ್ಕೆ ವಾಸ್ತವ್ಯ ಮಾಡಲು ಅನುಕೂಲವಾಗುವಂತೆ ಸುಮಾರು ಮೂರುವರೆ-ನಾಲ್ಕು ಕೋಟಿ ರು. ಅಂದಾಜು ವೆಚ್ಚದಲ್ಲಿ ವೀರಶೈವ-ಲಿಂಗಾಯತ ಬಾಲಕಿಯರ ಬೃಹತ್ ಹಾಸ್ಟೆಲ್ ನಿರ್ಮಿಸಲಾಗಿದೆ. ತಾವು ಎರಡನೇ ಅವಧಿಗೆ ಆಯ್ಕೆಗೊಂಡರೆ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಬಾಲಕಿಯರಿಗಾಗಿ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.
ತಮ್ಮ ನೇತೃತ್ವದ ಪ್ಯಾನಲ್ ಚುನಾವಣಾ ಪ್ರಣಾಳಿಕೆಯ ಮಾಹಿತಿ ನೀಡಿದ ಅವರು, ಕಲಬುರಗಿ ನಗರದಲ್ಲಿ 500 ವಿದ್ಯಾರ್ಥಿ ಸಾಮಥ್ರ್ಯದ ವೀರಶೈವ-ಲಿಂಗಾಯತ ಬಾಲಕರ ಹಾಸ್ಟೆಲ್ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ವಾಗ್ದಾನ ಮಾಡಿದರು.ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ-ಲಿಂಗಾಯತ ಸಮುದಾಯ ಸೇರ್ಪಡೆಗೆ ಒತ್ತಾಯಿಸಿ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ಸಹ ಇದೇವೇಳೆ ಮೋದಿ ನುಡಿದರು.
ಧರಿಯಾಪುರ-ಕೋಟನೂರ್ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಬಾಲಕಿಯರ ಹಾಸ್ಟೆಲ್ ಪೂರ್ಣಗೊಳ್ಳಬೇಕಾದರೆ ಇನ್ನೂ ರೂ.4 ಕೋಟಿಗೂ ಅಧಿಕ ಹಣಕಾಸಿನ ಅಗತ್ಯವಿದೆ. ಮೇಲಾಗಿ, ವಿದ್ಯಾರ್ಥಿನಿಯರಿಗಾಗಿ ಉಚಿತವಾಗಿ ಊಟದ ವ್ಯವಸ್ಥೆ ಮಾಡಲು ದಾಸೋಹಿಗಳ ಮನವೊಲಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ. ಜೊತೆಗೆ, ಸಚಿವರಾದ ಶರಣಬಸಪ್ಪ ದರ್ಶನಾಪುರ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್ ಹಾಗೂ ಶಶಿಲ್ ನಮೋಶಿ ಸೇರಿದಂತೆ ಸಮುದಾಯದ ಹಿರಿಯರ ಮಾರ್ಗದರ್ಶನದ ಬಳಿಕ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಅನುಮೋದನೆಯೊಂದಿಗೆ ಹಾಸ್ಟೆಲ್ ನಿರ್ವಹಣೆಗೆ ಶಾಶ್ವತ ಸಮಿತಿ ಸಹ ರಚಿಸಲಾಗಿದೆ ಎಂದು ಮೋದಿ ಮಾಹಿತಿ ನೀಡಿದರು.ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಹಿತರಕ್ಷಣೆಯ ದೃಷ್ಟಿಯಿಂದ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಆಗಬೇಕೆಂದು ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ನಿರಂತರ ಒತ್ತಾಯದ ಕಾರಣಕ್ಕಾಗಿ ಈಗಾಗಲೇ ರಾಜ್ಯದಲ್ಲಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಮೇಲಾಗಿ, ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವೀರಶೈವ-ಲಿಂಗಾಯತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಾ ಬರಲಾಗುತ್ತಿದೆ ಎಂದು ನುಡಿದರು.
ಜೊತೆಗೆ, ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ನಡೆದ ಮಠಾಧೀಶರ ಸಮಾವೇಶ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಸಮುದಾಯದ ಹಲವು ಹೋರಾಟಗಳಿಗೆ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನಿರಂತರ ಬೆಂಬಲ ನೀಡುತ್ತಾ ಬರಲಾಗುತ್ತಿದೆ. ಅಲ್ಲದೆ, ಕಲಬುರಗಿ ಜಿಲ್ಲೆಯಾದ್ಯಂತ ನಡೆದ ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಹೋರಾಟ ಮತ್ತು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತಾವು ಮುಂಚೂಣಿಯಲ್ಲಿ ನಿಂತು ಸಹಭಾಗಿತ್ವ ಸಾಬೀತುಪಡಿಸುತ್ತಾ ಬಂದಿರುವುದಾಗಿ ಅವರು ವಿವರಿಸಿದರು.ರಾಜಶೇಖರ ಸೀರಿ, ಸೋಮಶೇಖರ ಹಿರೇಮಠ, ಸಿದ್ದುಗೌಡ ಅಜಲಪುರಕರ್, ರವೀಂದ್ರ ಕೋಳಕೂರ್, ಗೌರಿ ಚಿತಕೋಟಿ, ಅಶೋಕ ಮಾನಕರ್, ಶರಣಬಸಪ್ಪ ಟೆಂಗಳಿ, ಜ್ಯೋತಿ ಮರಗೋಳ ಸೇರಿದಂತೆ ಇತರರಿದ್ದರು.