ಕೃಷ್ಣನ ರೂಪದಲ್ಲಿ ಕೆವೈಎಂ ಕಾ ರಾಜಾನ ದರ್ಶನ

| Published : Aug 31 2025, 01:09 AM IST

ಸಾರಾಂಶ

ಕಳೆದ 1990ರಲ್ಲಿ ಓಣಿಯ ಚಿಕ್ಕ ಮಕ್ಕಳಿಂದ ಆರಂಭವಾದ ಈ ಗಣೇಶೋತ್ಸವ 26ನೇ ವರ್ಷಕ್ಕೆ ಕಾಲಿಟ್ಟಿದೆ. 13 ಓಣಿಯ ಜನರೆಲ್ಲ ಸೇರಿ ಅದ್ಧೂರಿಯಾಗಿ ಆಚರಿಸುವ ಉತ್ಸವವಾಗಿ ಮಾರ್ಪಟ್ಟಿದೆ.

ಹುಬ್ಬಳ್ಳಿ: ಇಲ್ಲಿನ ಹಳೆಹುಬ್ಬಳ್ಳಿಯ ಚೆನ್ನಪೇಟೆಯ ನಾರಾಯಣಪೇಟೆಯಲ್ಲಿ ಕೊತ್ಲಮ್ಮಾದೇವಿ ಯುವಕ ಮಂಡಳ (ಕೆವೈಎಂ) ದಿಂದ ಪ್ರತಿಷ್ಠಾಪಿಸಲಾಗಿರುವ "ಕೆವೈಎಂ ಕಾ ರಾಜಾ " ಈ ಬಾರಿ ಕೊಳಲನೂದುತ್ತಿರುವ ಕೃಷ್ಣನ ರೂಪದಲ್ಲಿ ಕಂಗೊಳಿಸುತ್ತಿದ್ದಾನೆ.

ಕಳೆದ 1990ರಲ್ಲಿ ಓಣಿಯ ಚಿಕ್ಕ ಮಕ್ಕಳಿಂದ ಆರಂಭವಾದ ಈ ಗಣೇಶೋತ್ಸವ 26ನೇ ವರ್ಷಕ್ಕೆ ಕಾಲಿಟ್ಟಿದೆ. 13 ಓಣಿಯ ಜನರೆಲ್ಲ ಸೇರಿ ಅದ್ಧೂರಿಯಾಗಿ ಆಚರಿಸುವ ಉತ್ಸವವಾಗಿ ಮಾರ್ಪಟ್ಟಿದೆ.

ಕೃಷ್ಣನ ರೂಪದಲ್ಲಿ ವಿಘ್ನೇಶ್ವರ: ಪ್ರತಿ ವರ್ಷವೂ ಒಂದೊಂದು ಅವತಾರದಲ್ಲಿ ಇಲ್ಲಿನ ವಿಘ್ನೇಶ್ವರ ಭಕ್ತರಿಗೆ ಆಶೀರ್ವದಿಸುತ್ತಾನೆ. 25 ವರ್ಷಗಳಲ್ಲಿ ಈಶ್ವರನ ರೂಪ, ಮಹಾರಾಜಾ, ಕಾಳಿಕಾ ರೂಪಿ ವಿನಾಯಕ, ಮೂಷಿಕನ ಮೇಲೆ ಸಂಚಾರಿ ಗಣೇಶ, ಗರುಡ ಸಂಚಾರಿ ಗಣಪ, ಪ್ರಧಾನಿ ನರೇಂದ್ರ ಮೋದಿ ರೂಪಿ ವಿಘ್ನೇಶ್ವರ ಹೀಗೆ ಹಲವು ಅವತಾರಗಳಲ್ಲಿ ಭಕ್ತರಿಗೆ ದರ್ಶನ ನೀಡಿದ್ದಾನೆ. ಈ ಬಾರಿ ಸುಮಾರು 11 ಅಡಿ ಎತ್ತರದಲ್ಲಿ ಕೊಳಲು ಊದುತ್ತಿರುವ ಶ್ರೀಕೃಷ್ಣ ರೂಪಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.

ಮಂಡಳದಿಂದಲೇ ವಿಸರ್ಜನೆಗೆ ವ್ಯವಸ್ಥೆ: ಈ ಹಿಂದೆ ಮನೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಇಲ್ಲಿನ ತುಳಜಾಭವಾನಿ ದೇವಸ್ಥಾನದ ಬಳಿ ಇರುವ ಬಾವಿಯಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ, ಇದರ ಹೂಳೆತ್ತುವುದು ದೊಡ್ಡ ಸವಾಲಾಗಿತ್ತು. ಇದನ್ನು ಮನಗಂಡ ಈ ಯುವಕ ಮಂಡಳ ತುಳಜಾಭವಾನಿ ದೇವಸ್ಥಾನದ ಎದುರಿನ ಬಯಲಿನಲ್ಲಿ ಟಿಪ್ಪರ್‌ಗೆ ಪ್ಲಾಸ್ಟಿಕ್‌ ಹಾಳೆ ಹಾಕಿ, ಮೆಟ್ಟಿಲು ನಿರ್ಮಿಸಿ ವಿಸರ್ಜನೆಗೆ ವ್ಯವಸ್ಥೆ ಮಾಡುತ್ತಾರೆ. ಇಲ್ಲಿ 2 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ವಿಸರ್ಜನೆಯಾದ ಬಳಿಕ ಈ ಟಿಪ್ಪರ್‌ನ್ನು ನೀರಸಾಗರಕ್ಕೆ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡುವ ವ್ಯವಸ್ಥೆ ಮಾಡಿದ್ದಾರೆ.

ಓಣಿಯ ಎಲ್ಲ ಹಿರಿಯರ ಸಹಕಾರದಲ್ಲಿ ಪ್ರತಿವರ್ಷ ಅದ್ಧೂರಿಯಾಗಿ 9 ದಿನಗಳ ಕಾಲ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ. 8ನೇ ದಿನಕ್ಕೆ ಗಣಹೋಮ, ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ಮಾಡಲಾಗುತ್ತಿದೆ. 9ನೇ ದಿನಕ್ಕೆ ಮೂರ್ತಿಯ ವಿಸರ್ಜನೆ ಮಾಡಲಾಗುವುದು ಎಂದು ಕೊತ್ಲಮ್ಮಾದೇವಿ ಯುವಕ ಮಂಡಳದ ಅಧ್ಯಕ್ಷ ವಿಶಾಲ್ ಹಬೀಬ ಹೇಳಿದರು.