ನೈಋತ್ಯ ರೈಲ್ವೆ ಆಗಸ್ಟ್‌ 2026ರಲ್ಲಿ ಉತ್ತಮ ಕಾರ್ಯಕ್ಷಮತೆ ದಾಖಲಿಸಿದ್ದು, ₹805.70 ಕೋಟಿ ಒಟ್ಟು ಮಾಸಿಕ ಆದಾಯ ಗಳಿಸಿದೆ. ಇದರೊಂದಿಗೆ ಪ್ರಸಕ್ತ 2026-27ನೇ ಹಣಕಾಸು ವರ್ಷದ ಆಗಸ್ಟ್‌ ಅಂತ್ಯದ ವರೆಗೆ ಸಂಚಿತ ಒಟ್ಟು ಆದಾಯ ₹3,850.05 ಕೋಟಿಗೆ ತಲುಪಿದೆ.

ಹುಬ್ಬಳ್ಳಿ:

ನೈಋತ್ಯ ರೈಲ್ವೆ ಆಗಸ್ಟ್‌ 2026ರಲ್ಲಿ ಉತ್ತಮ ಕಾರ್ಯಕ್ಷಮತೆ ದಾಖಲಿಸಿದ್ದು, ₹805.70 ಕೋಟಿ ಒಟ್ಟು ಮಾಸಿಕ ಆದಾಯ ಗಳಿಸಿದೆ. ಇದರೊಂದಿಗೆ ಪ್ರಸಕ್ತ 2026-27ನೇ ಹಣಕಾಸು ವರ್ಷದ ಆಗಸ್ಟ್‌ ಅಂತ್ಯದ ವರೆಗೆ ಸಂಚಿತ ಒಟ್ಟು ಆದಾಯ ₹3,850.05 ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯ ₹3,757.85 ಕೋಟಿಗೆ ಹೋಲಿಸಿದರೆ ₹92.20 ಕೋಟಿ ಹೆಚ್ಚಳವಾಗಿದ್ದು, ಶೇ. 2.45ರಷ್ಟು ಬೆಳವಣಿಗೆ ದಾಖಲಾಗಿದೆ.

ಆಗಸ್ಟ್‌ನಲ್ಲಿ ಸರಕು ಸಾಗಣೆಯಲ್ಲೂ ನೈಋತ್ಯ ರೈಲ್ವೆ ಹೊಸ ದಾಖಲೆ ನಿರ್ಮಿಸಿದೆ. ರೈಲ್ವೆ ಸ್ಥಾಪನೆಯಾದ ಬಳಿಕ ಆಗಸ್ಟ್‌ ತಿಂಗಳಲ್ಲಿ ಇದುವರೆಗೆ ದಾಖಲಾದ ಗರಿಷ್ಠ ಪ್ರಮಾಣವಾದ 4.48 ದಶಲಕ್ಷ ಟನ್‌ ಸರಕು ಸಾಗಿಸಲಾಗಿದೆ. ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ. 6.3ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಆಗಸ್ಟ್‌ ಅಂತ್ಯದ ವರೆಗೆ ಒಟ್ಟು ಸರಕು ಸಾಗಣೆ 21.67 ದಶಲಕ್ಷ ಟನ್‌ಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 5.8ರಷ್ಟು ಏರಿಕೆಯಾಗಿದೆ.

ಕಲ್ಲಿದ್ದಲು ಸಾಗಣೆಯಲ್ಲಿ ಶೇ. 37.4ರಷ್ಟು ಹೆಚ್ಚಳವಾಗಿದ್ದು, 1.03 ದಶಲಕ್ಷ ಟನ್‌ ತಲುಪಿದೆ. ಉಕ್ಕಿನ ಉತ್ಪನ್ನಗಳ ಸಾಗಣೆಯೂ ಶೇ. 18.1ರಷ್ಟು ಏರಿಕೆಯಾಗಿ 1.11 ದಶಲಕ್ಷ ಟನ್‌ಗೆ ತಲುಪಿದೆ. ಸಿಮೆಂಟ್ ಸಾಗಣೆಯಲ್ಲಿ ಶೇ. 25, ಕಂಟೈನರ್‌ನಲ್ಲಿ ಶೇ. 13.6 ಹಾಗೂ ಖನಿಜ ತೈಲ ಸಾಗಣೆಯಲ್ಲಿ ಶೇ. 6.9ರಷ್ಟು ಬೆಳವಣಿಗೆ ದಾಖಲಾಗಿದೆ. ಆಗಸ್ಟ್‌ ಅಂತ್ಯದ ವರೆಗೆ ಕಬ್ಬಿಣದ ಅದಿರು ಸಾಗಣೆ 8.48 ದಶಲಕ್ಷ ಟನ್‌, ಉಕ್ಕು 4.82 ದಶಲಕ್ಷ ಟನ್‌ ಹಾಗೂ ಕಲ್ಲಿದ್ದಲು 4.46 ದಶಲಕ್ಷ ಟನ್‌ ದಾಖಲಾಗಿದೆ. ಆಹಾರ ಧಾನ್ಯಗಳ ಸಾಗಣೆಯಲ್ಲಿ ಶೇ. 118.4ರಷ್ಟು ಗಮನಾರ್ಹ ಏರಿಕೆ ಕಂಡುಬಂದಿದೆ.

ಸರಕು ಸಾಗಣೆ ವಿಭಾಗದಿಂದ ಆಗಸ್ಟ್‌ನಲ್ಲಿ ₹417.08 ಕೋಟಿ ಆದಾಯ ಬಂದಿದ್ದು, ಸಂಚಿತ ಆದಾಯ ₹2,074.36 ಕೋಟಿಯಾಗಿದೆ. ಪ್ರಯಾಣಿಕರ ಸೇವೆಗಳಿಂದ ₹348.97 ಕೋಟಿ ಆದಾಯ ಗಳಿಸಲಾಗಿದ್ದು, ಸುಮಾರು 1.5 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಆಗಸ್ಟ್‌ ಅಂತ್ಯದ ವರೆಗೆ ಪ್ರಯಾಣಿಕರ ವಿಭಾಗದ ಆದಾಯ ₹1,552.70 ಕೋಟಿಗೆ ತಲುಪಿದ್ದು, ಒಟ್ಟು 7.6 ಕೋಟಿ ಪ್ರಯಾಣಿಕರು ರೈಲು ಸೇವೆ ಬಳಸಿದ್ದಾರೆ.

ಈ ಸಾಧನೆಗಾಗಿ ನೈಋತ್ಯ ರೈಲ್ವೆ ಮಹಾಪ್ರಬಂಧಕ ಪಿ. ಅನಂತ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.